Advertisement
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆ ಹಾಗೂ ಪರಿಸರದ ಮೇಲೆ ಪರಿಣಾಮವಾಗುವುದಿಲ್ಲ. ನಾವು ಬಯಲು ಸೀಮೆಯವರಾದರೂ ಪರಿಸರ, ವನ್ಯಜೀವಿಗಳು ಹಾಗೂ ಅರಣ್ಯದ ಬಗ್ಗೆ ಅಪಾರ ಕಾಳಜಿ ಇದೆ. ಕಾಡು ಬೆಳಿಸಿದಾಗ ಮಾತ್ರ ನಾಡು ಉಳಿಯುತ್ತದೆ ಎಂಬ ಪರಿಸರ ಕಾಳಜಿ ನಮ್ಮಲ್ಲೂ ಇದೆ. ಉತ್ತರ ಕನ್ನಡ ಜಿಲ್ಲೆಗೆ ಹಾಗೂ ನಮ್ಮ ನಾಡಿನ ಅರಣ್ಯಕ್ಕೆ ಕಾಳಿ ನದಿಯಿಂದ ಇರುವ ಮಹತ್ವತೆಯನ್ನು ಅರಿತು ಅರಣ್ಯ ಹಾಗೂ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ಸೌಹಾರ್ದತೆಯೊಂದಿಗೆ ದಟ್ಟವಾದ ಅರಣ್ಯಕ್ಕೆ ಹಾನಿ ಮಾಡದೇ, ರಸ್ತೆಯ ಇಕ್ಕೆಲಗಳಲ್ಲಿ ಪೈಪಲೈನ ಮೂಲಕ ನೀರನ್ನು ಘಟಪ್ರಭಾ-ಮಲಪ್ರಭಾ ನದಿಗಳಿಗೆ ಹರಿಸಬಹುದು ಎಂದು ತಿಳಿಸಿದರು.
Related Articles
Advertisement
ಜಗತ್ತಿನ ಒಂದು ಹೊತ್ತಿನ ಊಟಕ್ಕೆ ಬೇಕಾಗುವ ಎಲ್ಲ ಆಹಾರ ಪದಾರ್ಥಗಳನ್ನು ಬೆಳೆಯುವ ಶಕ್ತಿ ಇರುವುದು ಕೇವಲ ಬಯಲು ಸೀಮೆಯ ರೈತರಿಗೆ ಮಾತ್ರ. ಅವನು ಬೆಳೆಯುವ ಅಕ್ಕಿ, ಗೋದಿ, ಜೋಳ, ರಾಗಿಯನ್ನೇ ಇಡೀ ಜಗತ್ತು ನಿತ್ಯ ಸ್ಮರಿಸಿ ಊಟ ಮಾಡುತ್ತದೆ. ಅಂತಹ ರೈತನ ಬಗ್ಗೆ ಅಸಡ್ಡೆಯ ಮಾತುಗಳು ಬೇಡ. ಕಾಳಿ ನದಿ ಸಮೃದ್ಧವಾಗಿ ಹರಿಯುವ ನದಿಯಾಗಿದ್ದು, ಈ ನದಿ ಹರಿವಿನಲ್ಲಿಯ ಶೇ.5 ಅಥವಾ ಶೇ. 10ರಷ್ಟು ಪ್ರಮಾಣದ ಅಂದರೆ 10ರಿಂದ 20ಟಿಎಂಸಿ ನೀರನ್ನು ಮಾತ್ರ ನಾವು ಕೇಳುತ್ತಿದ್ದು, ಇದರಿಂದ ಕಾಳಿನದಿ ಹಾಗೂ ಅದರ ಜಲಾಶಯಗಳ ಒಳ ಹಾಗೂ ಹೊರ ಹರಿವಿನಲ್ಲಿ ಭಾರಿ ವ್ಯತ್ಯಾಸವಾಗುವುದಿಲ್ಲ. ಈ ಭಾಗದ ಅರಣ್ಯ, ವನ್ಯಜೀವಿ, ರಕ್ಷಿತ ಅಭಯಾರಣ್ಯ, ಜೀವ ವೈವಿಧ್ಯದ ಮೂಲಸೌಕರ್ಯಕ್ಕೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದರು.
ಕಾಳಿ ನದಿ ತಿರುವು ಯೋಜನೆಯಿಂದ ಸಮುದ್ರದಲ್ಲಿ ನಿರ್ದಿಷ್ಟ ಪ್ರಮಾಣದ ಸಿಹಿನೀರು ಸಮುದ್ರಕ್ಕೆ ಸೇರದೇ ಲವಣಾಂಶ ಪ್ರಮಾಣದಲ್ಲಿ ವ್ಯತ್ಯಾಸ ಅಥವಾ ಜಲಚರಗಳಿಗೆ ಹಾನಿಯಾಗುವುದಿಲ್ಲ. ಬಯಲು ಸೀಮೆಯ ಕುಡಿಯುವ ನೀರು ಹಾಗೂ ಕೆರೆ ತುಂಬಲು ಪಡೆಯುವ 10-20 ಟಿಎಂಸಿ ನೀರಿನಿಂದಾಗಿ ಕಾಳಿ ನದಿ ಬರಿದಾಗುವುದಿಲ್ಲ ಮತ್ತು ಸಮುದ್ರಕ್ಕೆ ಸೇರುವ ದೊಡ್ಡ ಪ್ರಮಾಣದ ನೀರಿನಲ್ಲಿ ವ್ಯತ್ಯಾಸವಾಗುವುದಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಕರ್ನಾಟಕದಲ್ಲಿ ಪ್ರತಿವರ್ಷ ಬೀಳುವ ಮಳೆಯಿಂದಾಗಿ ವಾರ್ಷಿಕ 3600 ಟಿಎಂಸಿ ನೀರು ಲಭಿಸುತ್ತದೆ. ಅದರಲ್ಲಿ 1600 ಟಿಎಂಸಿಯಷ್ಟು ನೀರನ್ನು ಮಾತ್ರ ಕೃಷಿ, ಕುಡಿಯುವ ನೀರು, ಕೈಗಾರಿಕೆ, ನೀರಾವರಿ ಯೋಜನೆಗಳಿಗೆ ಬಳಸಿ 2000 ಟಿಎಂಸಿ ನೀರು ಸಮುದ್ರ ಸೇರುತ್ತದೆ ಎಂದು ವರದಿಯ ಪ್ರಮುಖ ಅಂಶಗಳನ್ನು ಪ್ರಸ್ತುತಪಡಿಸಿದರು.
ಅಲ್ಲದೇ ಕೃಷ್ಣಾ, ನರ್ಮದಾ, ಕಾವೇರಿ ಸೇರಿದಂತೆ ದೇಶದ ದೊಡ್ಡ ನದಿಗಳಿಗೆ ಬೃಹತ್ ಯೋಜನೆ ರೂಪಿಸಿ ಅಣೆಕಟ್ಟಿನಲ್ಲಿ ನೀರನ್ನು ಸಂಗ್ರಹಿಸಿದ್ದಾರೆ. ಕೇವಲ ಕಾಳಿ ನದಿ ನೀರಿನಿಂದ ಮಾತ್ರ ಸಮುದ್ರದ ಲವಣಾಂಶ ಪ್ರಮಾಣದಲ್ಲಿ ವ್ಯತ್ಯಾಸವಾಗುವುದಿಲ್ಲ. ಸಮುದ್ರದ ಉಪ್ಪಿನಾಂಶ ನಿರ್ವಹಣೆಗೆ ತನ್ನದೆಯಾದ ಮಾನದಂಡಗಳಿವೆ. ಅಲ್ಲದೇ ಸಾಗರವು ಸದಾ ತನ್ನ ಸಮತೋಲನ ಕಾಯ್ದುಕೊಳ್ಳುತ್ತಿರುತ್ತದೆ ಎಂದು ತಿಳಿಸಿದರು. ಪ್ರಗತಿಪರ ರೈತ ಮುಖಂಡ ಈಶ್ವರ ಕತ್ತಿ, ಪ್ರಮುಖರಾದ ಲಕ್ಷ್ಮಣ ದೊಡಮನಿ, ನಾಗೇಶ ಗೋಲಶೆಟ್ಟಿ, ಹಿಪ್ಪರಗಿ ಉಪಸ್ಥಿತರಿದ್ದರು.