Advertisement

ಕಲಬುರಗಿ: ಫೆ.7ರಂದು 105 ಪುಸಕ್ತ ಲೋಕಾರ್ಪಣೆ

04:04 PM Feb 05, 2021 | Team Udayavani |

ಕಲಬುರಗಿ: ಕಳೆದ ಹಲವಾರು ದಶಕಗಳಿಂದ ಈ ಭಾಗದ ಸಾಹಿತಿಗಳ ಪುಸ್ತಕಗಳನ್ನು ಹೊರಬರುವಲ್ಲಿ ಮುಂಚೂಣಿ ವಹಿಸಿ ಸಾವಿರಾರು ಗ್ರಂಥಗಳನ್ನು ಪ್ರಕಟಿಸಿರುವ ಇಲ್ಲಿನ ಸಿದ್ಧಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನದ 44ನೇ ವಾರ್ಷಿಕೋತ್ಸವ ಅಂಗವಾಗಿ 105 ಪುಸ್ತಕಗಳ ಬಿಡುಗಡೆ ಸಮಾರಂಭ ಫೆ. 7ರಂದು ಬೆಳಗ್ಗೆ 11 ಗಂಟೆಗೆ ನಗರದ ಸೂಪರ್‌ ಮಾರ್ಕೆಟ್‌ದಲ್ಲಿರುವ ಎಚ್‌ ಕೆಸಿಸಿಐ ಸಭಾಂಗಣ (ಚೇಂಬರ್‌) ದಲ್ಲಿ ಹಮ್ಮಿಕೊಳ್ಳಲಾಗಿದೆ.

Advertisement

ಪ್ರತಿವರ್ಷ ನೂರಾರು ಪುಸ್ತಕಗಳನ್ನು ಬಿಡುಗಡೆ ಮಾಡುತ್ತಾ ಬರಲಾಗಿದ್ದು, ಈ ಸಲವೂ ದಾಖಲೆ ಎಂಬಂತೆ ಏಕಕಾಲಕ್ಕೆ ಖ್ಯಾತನಾಮ ಸಾಹಿತಿಗಳು ಸೇರಿದಂತೆ ವಿವಿಧ ಲೇಖಕರು ರಚಿಸಿರುವ 105 ಪುಸ್ತಕಗಳ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಸ್ಥೆ ಮಾಲೀಕ ಬಸವರಾಜ ಕೊನೇಕ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಫ‌ಜಲಪುರ ಹಿರೇಮಠ ಸಂಸ್ಥಾನ ಪೀಠಾಧಿಪತಿ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಬಾಲಚಂದ್ರ ಜಯಶೆಟ್ಟಿ, ಡಾ| ಲಕ್ಷ್ಮಣ ಕೌಂಟೆ, ಡಾ| ಗುರಪಾದ ಮರಿಗುಡ್ಡಿ, ಡಾ| ಹನುಮಂತ ಮೇಲಿನಮನಿ, ಡಾ| ಮೀನಾಕ್ಷಿ ಬಾಳಿ, ಡಾ| ಶ್ರೀನಿವಾಸ ಸಿರನೂರಕರ, ಕಾವ್ಯಾಶ್ರೀ ಮಹಾಗಾಂವಕರ್‌, ವಸಂತ ಕುಷ್ಟಗಿ, ಡಾ| ಬಿದರಿ ಚಂದ್ರಭಾಗ, ಕಲ್ಯಾಣರಾವ್‌ ಪಾಟೀಲ ಹಾಗೂ ವಿವಿಧ ಲೇಖಕರು ಬರೆದಿರುವ 105 ಕೃತಿಗಳನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ| ರಹಮತ ತರಕೆರೆ ಬಿಡುಗಡೆ ಮಾಡುವರು. ಸಮಾರಂಭವನ್ನು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಡಾ| ದಯಾನಂದ ಅಗಸರ
ಉದ್ಘಾಟಿಸುವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿ ಪ್ರೊ| ಎಂ.ವಿ.ಆಕಳವಾಡಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧಕ್ಷೆ ಶಶಿಕಲಾ ಟೆಂಗಳಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಹೇಳಿದರು.

ಗುವಿವಿ ಘಟಿಕೋತ್ಸವದಲ್ಲಿ ಕನ್ನಡ ವಿಭಾಗದಲ್ಲಿ 11 ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿನಿ ಜಯಶ್ರೀ ಶರಣಪ್ಪ ಯಳಸಂಗಿ, ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಏಳನೇ ರ್‍ಯಾಂಕ್‌ ಪಡೆದ ನಿಖೀತಾ ಪಾಟೀಲ ಹಾಗೂ ಕೊರೊನಾ ಸೇನಾನಿಗಳಾಗಿರುವ ಡಾ| ಮಲ್ಹಾರಾವ್‌ ಮಲ್ಲೆ, ಸುನಂದಾ ಮಲ್ಲಿಕಾರ್ಜುನ, ಸುರೇಖಾ ದೇಸಾಯಿ, ರವಿ ಮಾಲೆ, ಮಾಪಣ್ಣ ಶ್ರೀಸಂದ, ಶಾಂತಾಬಾಯಿ ಭುರ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರಲ್ಲದೇ, ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಳ್ಳುವಂತೆ ಕೋರಿದರು. ಹಿರಿಯ ಸಾಹಿತಿಗಳಾದ ಡಾ| ಸ್ವಾಮಿರಾವ್‌ ಕುಲಕರ್ಣಿ, ಡಾ| ಗವಿಸಿದ್ದಪ್ಪ ಪಾಟೀಲ, ಡಾ| ಚಿ.ಸಿ. ಲಿಂಗಣ್ಣ, ಪ್ರಕಾಶಕರಾದ ಶರಣಬಸವ ಕೊನೇಕ್‌, ಸಿದ್ದಲಿಂಗ ಕೊನೇಕ್‌ ಇದ್ದರು.

ಸಿದ್ಧಲಿಂಗೇಶ್ವರ ಪ್ರಕಾಶನ ಪುಸ್ತಕಗಳಿಗೆ ಹೆಚ್ಚಿದ ಬೇಡಿಕೆ ಪ್ರಕಾಶನದಿಂದ ಫೆ. 7ರಂದು ಬಿಡುಗಡೆಯಾಲಿರುವ 105 ಪುಸ್ತಕಗಳು ಸೇರಿದಂತೆ ಇದುವರೆಗೂ 2744 ಪುಸ್ತಕಗಳನ್ನು ಪ್ರಕಟಣೆ ಮಾಡಿದಂತಾಗುತ್ತದೆ. ಅಲ್ಲದೇ ಯಾವುದೇ ವಿಶ್ವವಿದ್ಯಾಲಯ ಮಾಡದಂತ ಕೆಲಸವನ್ನು ಮಾಡಿದ್ದೇವೆ ಎಂದು ಬಸವರಾಜ ಕೊನೇಕ್‌ ಹೇಳಿದರು. ಪುಸ್ತಕಗಳನ್ನು ಕೈಯಲ್ಲಿ ಹಿಡಿದುಕೊಂಡರೆ ಆಗುವ ಆನಂದವೇ ಬೇರೆ. ಇದರಿಂದ ಕಣ್ಣಿಗೂ ತೊಂದರೆಯಿಲ್ಲ, ಖುಷಿಯೂ ಸಿಗುತ್ತದೆ. ಹೀಗಾಗಿ ಡಿಜಿಟಲ್‌ ಮಾಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಹಿಂದೆ ನಮ್ಮ ಭಾಗದ ಗಟ್ಟಿ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿ ಮೈಸೂರು ಕರ್ನಾಟಕ ಭಾಗಕ್ಕೆ ಕಳುಹಿಸಿದರೆ ಮಾರಾಟ ಮಾಡಲು ಹಿಂಜರಿಯುತ್ತಿದ್ದರು. ಈಗ ನಮ್ಮ ಪ್ರಕಾಶನದ ಕೃತಿಗಳಿಗೆ ರಾಜ್ಯದೆಲ್ಲೆಡೆ ಬೇಡಿಕೆಯಿದೆ. ಆದರೆ ಪುಸ್ತಕ ಮುದ್ರಿಸುವುದಕ್ಕಿಂತಲೂ ಮಾರಾಟ ಮಾಡುವುದು ಹೆಚ್ಚು ತೊಂದರೆಯ ಕೆಲಸವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next