ಕಲಬುರಗಿ: ಅಪಾರ್ಟಮೆಂಟ್‌ನಲ್ಲಿ ಉದ್ಯಮಿಯೊಬ್ಬರ ಮನಗೆ ನುಗ್ಗಿದ ನಾಲ್ವರು ದರೋಡೆಕೋರರು ಮಾರಕಾಸ್ತ್ರ ಮತ್ತು ಆಟಿಕೆ ಪ್ಲಾಸ್ಟಿಕ್ ಪಿಸ್ತೂಲ್ ತೋರಿಸಿ 50 ಸಾವಿರ ರೂ. ನಗದು ಮತ್ತು ಕಾರು ದೋಚಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ನಗರದ ಸ್ಟೇಷನ್ ಬಜಾರ್ ಪೊಲೀಸರು ಓರ್ವನನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಇಲ್ಲಿನ ಕುವೆಂಪು ನಗರದ ಏಷಿಯನ್ ಲೈಫ್‌ಸ್ಟೈಲ್ ಅಪಾರ್ಟಮೆಂಟ್‌ನಲ್ಲಿ ವಾಸವಾಗಿರುವ ಫುಡ್ ಸಪ್ಲೈ ಉದ್ಯಮಿ ಖಾಲೀದ್ ಅಹ್ಮದ್ ಚಾಂದಸಾಬ್ ಎನ್ನುವರ ಮನೆಯಲ್ಲಿ ಗುರುವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಈ ದರೋಡೆ ನಡೆದಿದೆ. ಕೋವಿಡ್ ಸೋಂಕು ತಡೆ ಮಾಸ್ಕ್ ಧರಿಸಿದ್ದ ದರೋಡೆಕೋರರು, ಅಪಾರ್ಟಮೆಂಟ್‌ನ ಬೆಲ್ ಬಾರಿಸಿದಾಗ ಖಾಲೀದ್ ಅಹ್ಮದ್ ಬಾಗಿಲು ತೆರೆದಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ಒಳಗೆ ನುಗ್ಗಿದ ಖದೀಮರು ಹಾಲ್‌ನಲ್ಲಿ ಮಲಗಿದ್ದ ವಾಹನ ಚಾಲಕ ಚಂದ್ರಶೇಖರನನ್ನು ಎಬ್ಬಿಸಿ ಹೊಡೆದಿದ್ದಾರೆ.
ನಂತರ ಇಬ್ಬರನ್ನು ಮನೆಯ ಬಾಲ್ಕನಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಓರ್ವ ಖದೀಮ ಇಬ್ಬರ ಬಳಿ ಕಾವಲಿದ್ದು, ಉಳಿದ ಮೂವರು ಮನೆಯೆಲ್ಲ ತಡಕಾಡಿ ಅಲ್ಮಾರಿಯಲ್ಲಿದ್ದ 50 ಸಾವಿರ ರೂ. ನಗದು, ಮೂರು ಮೊಬೈಲ್ ದೋಚಿಸಿದ್ದಾರೆ. ಅಲ್ಲದೇ, ಮಹೀಂದ್ರಾ ಕಾರು ಸೇರಿದಂತೆ ಒಟ್ಟು 4,52,500 ರೂ. ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ಖಾಲೀದ್ ಅಹ್ಮದ್ ಸ್ಟೇಷನ್ ಬಜಾರ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು, ಶುಕ್ರವಾರ ಎಂಎಸ್‌ಕೆ ಮಿಲ್ ಪ್ರದೇಶದ ಆಸೀಫ್ ಖಾನ್ ಎನ್ನುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಆರೋಪಿ ಸತ್ಯಾಂಶ ಬಾಯ್ಬಿಟ್ಟಿದ್ದು, ಅವನಿಂದ 18 ಸಾವಿರ ರೂ. ನಗದು, ಮಹೀಂದ್ರ ಕಾರು, ಚಾಕು ಮತ್ತು ಆಟಿಕೆ ಪ್ಲಾಸ್ಟಿಕ್ ಪಿಸ್ತೂಲ್, ಮೂರು ಮೊಬೈಲ್, ದರೋಡೆಗೆ ಬಳಸಿದ ಬಜಾಜ್ ಪಲ್ಸರ್ ಸೇರಿ ಒಟ್ಟು 4.30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಪೊಲೀಸ್ ಆಯುಕ್ತ ಎನ್. ಸತೀಶಕುಮಾರ, ಉಪ ಆಯುಕ್ತ ಡಿ.ಕಿಶೋರ್‌ಬಾಬು, ಎ-ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ ಮಾರ್ಗದರ್ಶನದಲ್ಲಿ ಸ್ಟೇಷನ್ ಬಜಾರ್ ಠಾಣೆಯ ಇನ್ಸ್‌ಪೆಕ್ಟರ್ ಎಲ್. ಎಚ್. ಗೌಂಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ದರೋಡೆಕೋರರು ಉದ್ಯಮಿ ಖಾಲೀದ್ ಅಹ್ಮದ್‌ಗೆ ಪರಿಚಿತರೇ ಆಗಿದ್ದು, ಮುಖಕ್ಕೆ ಮಾಸ್ಕ್ ಧರಿಸಿದ್ದರಿಂದ ಗೊತ್ತಾಗಿಲ್ಲ. ಉಳಿದ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.