ಕಲಬುರಗಿ: ತೀವ್ರ ಕುತೂಹಲ ಕೆರಳಿದ್ದ ಹಾಗೂ ರಾಜ್ಯದ ಗಮನ ಸೆಳೆದಿದ್ದ ಜತೆಗೆ ಹಲವು ತಂತ್ರ- ಪ್ರತಿ ತಂತ್ರಗಳಿಗೆ ಸಾಕ್ಷಿಯಾಗಿದ್ದ ಮಹಾನಗರ ಪಾಲಿಕೆಯ ಮಹಾಪೌರ- ಉಪಮಹಾಪೌರ ಚುನಾವಣೆ ದಿಢೀರ ಮುಂದೂಡಲಾಗಿದೆ.
ಇದೇ ನ. 20ರಂದು ನಿಗದಿಯಾಗಿದ್ದ ಚುನಾವಣೆ ಮುಂದೂಡಿ ಪ್ರಾದೇಶಿಕ ಆಯುಕ್ತರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಜಿಲ್ಲಾಡಳಿತ ಕಾರ್ಯನಿರತವಾಗಿದ್ದರಿಂದ ಚುನಾವಣೆ ಮುಂದೂಡಿರುವುದಾಗಿ ಪ್ರಾದೇಶಿಕ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಪಾಲಿಕೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಹೊಂದಿಲ್ಲ. ಕಾಂಗ್ರೆಸ್ 27 ಬಿಜೆಪಿ 23 ಹಾಗೂ ಜೆಡಿಎಸ್ ನಾಲ್ಕು ಹಾಗೂ ಓರ್ವ ಪಕ್ಷೇತರ ಸದಸ್ಯ ಹೊಂದಿದ ಬಲಾಬಲವಿದೆ. ಹೀಗಾಗಿ ಅಧಿಕಾರದ ಗದ್ದುಗೆಗಾಗಿ ಕಳೆದ ಎರಡು ತಿಂಗಳಿನಿಂದ ಜಂಗಿ ಕುಸ್ತಿ ನಡೆದಿದೆ.
ಪಾಲಿಕೆ ಚುನಾವಣೆ ನಡೆದು ಎರಡು ತಿಂಗಳಾದ ನಂತರ ಕಳೆದ ನವ್ಹೆಂಬರ್ 6ರಂದು ಮೇಯರ್ ಹಾಗೂ ಉಪಮೇಯರ ಮತ್ತು ಸ್ಥಾಯಿ ಸಮಿತಿಗಳಿಗೆ ಚುನಾವಣೆಗೆ ನಿಗದಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ಬಿಜೆಪಿ ಪಕ್ಷವು ಜಿಲ್ಲೆಯವರಲ್ಲದ ಏಳು ವಿಧಾನ ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಮುಂದಾಗಿ ವಾಮಮಾರ್ಗದಿಂದ ಪಾಲಿಕೆ ಗದ್ದುಗೆ ಹಿಡಿಯಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತಲ್ಲದೇ ಒಂದು ವೇಳೆ ಅಧಿಕಾರಿಗಳು ಹೆಸರು ಸೇರಿಸಿದ್ದೇಯಾದರೆ ಅಧಿಕಾರಿಗಳ ವಿರುದ್ದ ತಮ್ಮ ಸರ್ಕಾರ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಇದರ ನಡುವೆ ನ. 16ರಂದು ಕಲಬುರಗಿ ಪಾಲಿಕೆ ಮೇಯರ ಹಾಗೂ ಉಪಮೇಯರ್ ಚುನಾವಣೆ ಮುಂದೂಡುವಂತೆ ಇಲ್ಲಿನ ಹೈಕೋರ್ಟ್ ದಲ್ಲಿ ರಿಟ್ ಸಲ್ಲಿಸಿದೆ.
ಒಟ್ಟಾರೆ ಈ ಎಲ್ಲ ಬೆಳವಣಿಗೆ ನಡುವೆ ಮೇಯರ್ ಉಪಮೇಯರ್ ಚುನಾವಣೆ ಮುಂದೂಡಲಾಗಿದೆ. ಕಲಬುರಗಿ ಜತೆಗೆ ಇದೇ ನ.18ರಂದು ನಿಗದಿ ಯಾಗಿದ್ದ ಮೇಯರ್, ಉಪಮೇಯರ್ ಚುನಾವಣೆ ಸಹ ಮುಂದೂಡಲಾಗಿದೆ.