ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 50 ನೂತನ ಬಸ್ ಹಾಗೂ 12 ಲಾಜಿಸ್ಟಿಕ್ ಟ್ರಕ್‌ಗಳನ್ನು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು.
ನಗರದ ಪೊಲೀಸ್ ಮೈದಾನದಲ್ಲಿ ನಡೆದ 78 ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ನಂತರ ಬಸ್ ಹಾಗೂ ಟ್ರಕ್ ಗಳಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ರಸ್ತೆಗಳನ್ನು ಕಲ್ಯಾಣ ಪಥ ಎಂಬ ಕಾರ್ಯಕ್ರಮದಡಿ ಕೆಕೆಆರ್ ಡಿಬಿಯ ಸಾವಿರ ಕೋ.ರೂ ಅನುದಾನದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಸ್ತೆಗಳ ಅಭಿವೃದ್ಧಿ ನಂತರ ಹೊಸ ಬಸ್ ಗಳು ಬಹಳ ಅಗತ್ಯವಾಗಿರುತ್ತವೆ. ನೂತನ ಬಸ್ ಗಳು ಸುಗಮ ಸಾರಿಗೆ ಹಾಗೂ ಅಭಿವೃದ್ಧಿಗೆ ಪೂರಕವಾಗುತ್ತವೆ ಎಂದು ಹೇಳಿದರು.
ಹೊಸದಾಗಿ 109 ಬಸ್ ಗಳ ಖರೀದಿಗಾಗಿ 45 ಕೋ.ರೂ ಅನುದಾನ ಕೆಕೆಆರ್ ಡಿಬಿಯಿಂದ ಕೆಕೆಆರ್ ಟಿಸಿ ಗೆ ನೀಡಲಾಗಿದೆ. ಈಗ ಮೊದಲ ಹಂತವಾಗಿ 50 ಬಸ್ ಗಳು ಬಂದಿವೆ. ಇನ್ನುಳಿದ 59 ಬಸ್ ಗಳು ಮುಂದಿನ ತಿಂಗಳು ಬರಲಿವೆ. ಒಟ್ಟಾರೆ 109 ಬಸ್ ಗಳು ಈ ಭಾಗದ ತಕ್ಕ ಮಟ್ಟಿಗೆ ಸಾರಿಗೆ ಸಮಸ್ಯೆ ನಿವಾರಿಸಲಿವೆ ಎಂದರು.
ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಮಾತನಾಡಿ, ಹೊಸ ಬಸ್ ಹಾಗೂ ಟ್ರಕ್‌ಗಳ ವೈಶಿಷ್ಟ್ಯ ಗಳ ವಿವರಣೆ ನೀಡಿದರು. ಅಶೋಕ ಲೈಲಾಂಡ್ ಕಂಪನಿಯಿಂದ ಬಸ್ ಗಳನ್ನು ಖರೀದಿ ಮಾಡಲಾಗಿದೆ. ಈ ಬಸ್‌ಗಳು ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ ಬಸ್ ಕೋಡ್ ನಂತೆ ನಿರ್ಮಾಣವಾಗಿವೆ. ಪ್ರಮುಖವಾಗಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅತಿ ಮುಖ್ಯವಾಗಿ ಬಸ್ ಗಳಲ್ಲಿ ನಾಲ್ಕು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇನ್ನೂ ನೂತನ ಟ್ರಕ್‌ಗಳು ಸಾರಿಗೆ ನಿಗಮದ ಉಗ್ರಾಣ ಹಾಗೂ ಘಟಕಗಳಿಗೆ ಅವಶ್ಯಕ ಸಾಮಾಗ್ರಿಗಳನ್ನು ಸಾಗಿಸಲು ಅನುಕೂಲವಾಗುವುದು ಎಂದು ಅವರು ವಿವರಿಸಿದರು.
ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕೆಕೆಆರ್ ಡಿಬಿ ಕಾರ್ಯದರ್ಶಿ ಸುಂದರೇಶ ಬಾಬು, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್,ಜಿಲ್ಲಾ ಪಂಚಾಯತ್ ಸಿಇಓ ಭಂವರಸಿಂಗ್ ಮೀನಾ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಕೆಕೆಆರ್ ಟಿಸಿ ಮುಖ್ಯ ತಾಂತ್ರಿಕ ಅಭಿಯಂತರ ಸಂತೀಷ ಕುಮಾರ ಗೊಗೇರಿ, ಮುಖ್ಯ ಸಂಚಾರ ವ್ಯವಸ್ಥಾಪಕ ವಿ.ಎಚ್. ಸಂತೋಷಕುಮಾರ, ಮುಖ್ಯ ಭದ್ರತಾ ಮತ್ತು ಜಾಗೃತಾ ಅಧಿಕಾರಿ ಆನಂದ ಭದ್ರಕಾಳಿ, ಮುಖ್ಯ ಲೆಕ್ಕಾಧಿಕಾರಿ ಬಸವರಾಜ ಬೆಳಗಾವಿ, ಉಪ ಲೆಕ್ಕಾಧಿಕಾರಿ ಶ್ರೀದೇವಿ ಸೇರಿದಂತೆ ಮುಂತಾದವರಿದ್ದರು.