ಕಲಬುರಗಿ: ಕೋವಿಡ್ ಸೋಂಕು ದೃಢಪಟ್ಟ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಸೋಂಕಿತ ವೃದ್ಧೆಯನ್ನು ಕುಟುಂಬದವರು ಮನೆಯಿಂದ ಕರೆದುಕೊಂಡು ಹೋಗಿದ್ದು, ಅವರು ಈಗ ಎಲ್ಲಿಗೆ ಹೋಗಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗುತ್ತಿಲ್ಲ.
ಇಲ್ಲಿನ ಅತ್ತರ್ ಕಂಪೌಂಡ್ ಪ್ರದೇಶದ ನಿವಾಸಿ, ಸುಮಾರು 70 ವರ್ಷದ ವೃದ್ಧೆಯೊಬ್ಬರಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ. ರಾತ್ರಿ ಆರೋಗ್ಯ ಇಲಾಖೆಯ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಲೆಂದು ಆ್ಯಂಬುಲೆನ್ಸ್ ಸಮೇತ ವೃದ್ಧೆಯ ಮನೆಗೆ ಬಂದಿದ್ದರು. ಮೂರನೇ ಮಹಡಿಯಲ್ಲಿ ವೃದ್ಧೆ ವಾಸವಿದ್ದು, ಆಕೆಯನ್ನೇ ಕೆಳಗೆ ಬಂದು ಆ್ಯಂಬುಲೆನ್ಸ್ ಹತ್ತುವಂತೆ ಹೇಳುವ ಮೂಲಕ ಸಿಬ್ಬಂದಿ ಕರ್ತವ್ಯ ನಿಷ್ಠೆಯನ್ನೂ ಮರೆತ್ತಿದ್ದಾರೆ.
ವೃದ್ಧೆ ಕಾಲು ಮುರಿದುಕೊಂಡಿದ್ದರಿಂದ ಹಾಸಿಗೆ ಹಿಡಿದಿದ್ದು, ಮಹಡಿಯಿಂದ ಕೆಳಗಡೆ ಬರಲು ಸಾಧ್ಯವಾಗಿಲ್ಲ. ಅಲ್ಲದೇ, ಅಜ್ಜಿ ಮನೆಯಲ್ಲಿ ಇಬ್ಬರೂ ಮಹಿಳೆಯರೇ ಇದ್ದು, ಅವರಿಗೂ ವೃದ್ದೆಯನ್ನು ಎತ್ತಿಕೊಂಡು ಬರಲು ಆಗಿಲ್ಲ. ಇಷ್ಟಾದರೂ ಆರೋಗ್ಯ ಸಿಬ್ಬಂದಿ ನೀವೇ ಕರೆದುಕೊಂಡು ಬಂದು ಆ್ಯಂಬುಲೆನ್ಸ್ ನಲ್ಲಿ ಕೂಡಿಸಿದರೆ ಮಾತ್ರ ಕರೆದುಕೊಂಡು ಹೋಗುವುದಾಗಿ ಸಿಬ್ಬಂದಿ ಹೇಳಿ ಬೇಜವಾಬ್ದಾರಿ ತೋರಿದ್ದಾರೆ.
ಅಷ್ಟೇ ಅಲ್ಲ, ಕೆಲಹೊತ್ತು ನಿಂತು ವೃದ್ಧೆ ಬಾರದ ನೆಪ ಮಾಡಿಕೊಂಡು ಮನೆಯಲ್ಲೇ ಬಿಟ್ಟು ಸಿಬ್ಬಂದಿ ಹೋಗಿದ್ದಾರೆ. ಹೀಗಾಗಿ ದಿಕ್ಕು ತೋಚದೆ ಕುಟುಂಬದವರು ರಾತ್ರಿಯಿಡೀ ಸೋಂಕಿತ ವೃದ್ಧಯನ್ನು ಮನೆಯಲ್ಲಿ ಉಳಿಸಿಕೊಂಡಿದ್ದರು. ಈ ಬಗ್ಗೆ ಮತ್ತೆ ಬುಧವಾರ ಬೆಳಿಗ್ಗೆ ಸಾರ್ವಜನಿಕರು ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರೂ ಯಾರೊಬ್ಬರೂ ಮನೆಗೆ ಬಂದಿಲ್ಲ.
ಆದ್ದರಿಂದ ಸೋಂಕಿತ ಅಜ್ಜಿಯನ್ನು ಕುಟುಂಬದವರೇ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಮನೆಯಿಂದ ಬಂದಿದ್ದಾರೆ. ಆದರೆ, ಇದುವರೆಗೆ ಅಜ್ಜಿ ಮತ್ತು ಕುಟುಂಬದವರು ಎಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ವೃದ್ಧೆಯ ಕುಟುಂಬದವರ ಮೊಬೈಲ್ ನಂಬರ್ ಗೆ ಕರೆ ಮಾಡಿದರೆ, ಸ್ವಿಚ್ ಆಫ್ ಎಂದು ಬರುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿಗಾಗಿ ಡಿಎಚ್ಒ ಮತ್ತು ಟಿಎಚ್ಒ ಅವರನ್ನು ಸಂಪರ್ಕಿಸಲು ಯತ್ನಿಸಿದರೂ, ಅವರೂ ಸಂಪರ್ಕಕ್ಕೆ ಸಿಗುತ್ತಿಲ್ಲ.