Advertisement
ಪಡಿತರ ಸರಬರಾಜು ವ್ಯವಸ್ಥೆಯಲ್ಲಿ ಪ್ರಸ್ತುತ ಕುಟುಂಬದ ಓರ್ವ ಸದಸ್ಯನಿಗೆ ಐದು ಕೆಜಿ ಅಕ್ಕಿ ಮಾತ್ರ ವಿತರಿಸಲಾಗುತ್ತಿದೆ. ಇನ್ನು ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ವಿತರಿಸುವ ಅನ್ನಭಾಗ್ಯ ಗ್ಯಾರಂಟಿ ಯೋಜನೆಗೆ ಸಮರ್ಪಕ ಪ್ರಮಾಣದಲ್ಲಿ ಅಕ್ಕಿ ಸಿಗದೆ ಇರುವುದರಿಂದ ಒಬ್ಬ ಸದಸ್ಯರಿಗೆ ಕೆಜಿಗೆ 34 ರೂ.ಗಳಂತೆ 170 ರೂ. ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದೆ. ಇನ್ನು ರಾಜ್ಯದ ಹಲವೆಡೆ ಪ್ರದೇಶವಾರು ಒಬ್ಬ ಸದಸ್ಯನಿಗೆ ತಲಾ ಎರಡು ಕೆಜಿ ಅಕ್ಕಿ, ಜೋಳ ನೀಡಲಾಗುತ್ತಿದ್ದು, ಒಬ್ಬ ಸದಸ್ಯನಿಗೆ ಮೂರು ಕೆಜಿ ಅಕ್ಕಿ ಸಿಗುತ್ತಿದೆ.ಅಕ್ಕಿ ಬದಲು ಹಣ ಜಮಾವಣೆ ಹಾಗೂ ಅಕ್ಕಿ ಜತೆ ಇತರ ಆಹಾರಧಾನ್ಯ ಹಂಚಿಕೆಯಿಂದಾಗಿ ಪಡಿತರದಲ್ಲಿ ಸಿಗುವ ಉಚಿತ ಅಕ್ಕಿ ಪ್ರಮಾಣ ಅರ್ಧಕ್ಕರ್ಧ ಕಡಿಮೆಯಾಗಿದೆ. ಬಡವರು ಹಸಿವಿನಿಂದ ಇರಬಾರದು ಎಂಬ ಸರ್ಕಾರದ ಆಶಯದಂತೆ ವಿತರಿಸುತ್ತಿರುವ ಪಡಿತರ ಅಕ್ಕಿ ಪ್ರಸ್ತುತ ಮನೆ ಸದಸ್ಯರ ಊಟಕ್ಕೇ ಸಂಪೂರ್ಣ ಬಳಕೆಯಾಗುತ್ತಿದ್ದು ಯೋಜನೆ ದುರುಪಯೋಗಕ್ಕೆ ಕಡಿವಾಣ ಬಿದ್ದಂತಾಗಿದೆ.
ಈ ಮೊದಲು ಅಂದರೆ ಹಿಂದಿನ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಅನ್ನಭಾಗ್ಯ ಯೋಜನೆಯಡಿ ಪ್ರತೀ ಸದಸ್ಯನಿಗೆ 10 ಕೆಜಿ (ಕೇಂದ್ರ ಸರ್ಕಾರ 5 ಕೆಜಿ, ರಾಜ್ಯ ಸರ್ಕಾರ 5 ಕೆಜಿ) ಅಕ್ಕಿ ಕೊಡಲಾಗುತ್ತಿತ್ತು. ಬಳಿಕ ಕೊರೊನಾ ಸಾಂಕ್ರಾಮಿಕ ಬಂದ ಸಂದರ್ಭದಲ್ಲಿ ಕೇಂದ್ರ ಸರಕಾರದಿಂದ ಗರಿಬಿ ಕಲ್ಯಾಣ ಯೋಜನೆಯಡಿ ಡಿಸೆಂಬರ್ 2022ರವರೆಗೆ ಕುಟುಂಬದ ಒಬ್ಬ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡಲಾಯಿತು. ಮಧ್ಯದಲ್ಲಿ ಕೆಲವು ಅವಧಿ ರಾಜ್ಯ ಸರಕಾರದ ಸಹಯೋಗ ಸೇರಿ ಪ್ರತಿ ಸದಸ್ಯನಿಗೆ ಏಳು ಕೆಜಿ, ಆರು ಕೆಜಿ ಅಕ್ಕಿ ಕೊಡುತ್ತ ಬರಲಾಯಿತು. ಹೀಗೆ ಅನೇಕ ವರ್ಷ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳಿಗೆ 10 ಕೆಜಿ ಅಕ್ಕಿ ವಿತರಣೆಯಾದ ಸಂದರ್ಭದಲ್ಲಿ ಪಡಿತರ ಅಕ್ಕಿ ಬಹುದೊಡ್ಡ ಪ್ರಮಾಣದಲ್ಲಿ ಕಾಳಸಂತೆಗೆ ಹರಿಯಿತು. ಐದು ಸದಸ್ಯರಿರುವ ಒಂದು ಕುಟುಂಬಕ್ಕೆ ಪ್ರತಿ ತಿಂಗಳು ಅರ್ಧ ಕ್ವಿಂಟಲ್ ಅಕ್ಕಿ ಸಿಗುತ್ತಿತ್ತು. ಈ ಸಂದರ್ಭದಲ್ಲಿ ಬಡವರಿಗೆ ಹಣದ ಆಮಿಷಯೊಡ್ಡಿ ಅದನ್ನು ಅತಿ ಕಡಿಮೆ ದರಕ್ಕೆ ಖರೀದಿಸುವ ವ್ಯಾಪಾರಿಗಳು, ಏಜೆಂಟರರು ದೊಡ್ಡ ಪ್ರಮಾಣದಲ್ಲಿ ಹುಟ್ಟಿಕೊಂಡರು. ಇವರು ಮನೆ ಮನೆಗೆ ಹೋಗಿ ಕೆಜಿಗೆ 10 ರೂ.ಗಳಿಂದ 15 ರೂ. ವರೆಗೂ ಹಣ ಕೊಟ್ಟು ಅಕ್ಕಿ ಖರೀದಿಸತೊಡಗಿದರು. ಜನ ಪಡಿತರ ಅಕ್ಕಿಯನ್ನು ಮನೆಗೆ ಬೇಕಾದಷ್ಟು ಇಟ್ಟುಕೊಂಡು ಉಳಿದಿದ್ದನ್ನು ಏಜೆಂಟರಿಗೆ, ವ್ಯಾಪಾರಿಗಳಿಗೆ ಮಾರಾಟ ಮಾಡಿದರು. ಜನರಿಂದ ಪಡೆದ ಅಕ್ಕಿಯನ್ನು ಮಿಲ್‌ಗಳಲ್ಲಿ ಮತ್ತೂಮ್ಮೆ ಪಾಲಿಶ್ ಮಾಡಿ ಅದನ್ನು ಹೊಸ ಪ್ಯಾಕೆಟ್‌ಗಳಲ್ಲಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುವ ದಂಧೆಗೆ ಪಡಿತರ ಅಕ್ಕಿ ಪ್ರೇರಣೆಯಾಗಿತ್ತು.
Related Articles
Advertisement
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಆಹಾರ ಇಲಾಖೆ ಅಧಿಕಾರಿಗಳು, ಪಡಿತರ ಅಕ್ಕಿ ಮಾರಿದರೆ ಪಡಿತರ ಚೀಟಿ ರದ್ದು ಮಾಡುತ್ತೇವೆ. ಪಡಿತರದಾರರಿಂದ ಅಕ್ಕಿ ಖರೀದಿ ಮಾಡಿದರೆ ಅಕ್ಕಿ, ವಾಹನ ಎರಡನ್ನೂ ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದೆಲ್ಲ ಎಚ್ಚರಿಕೆ ನೀಡಿದರೂ, ಪಡಿತರ ಅಕ್ಕಿ ಮಾರಾಟ ನಿಯಂತ್ರಣಕ್ಕೆ ಬಂದಿರಲಿಲ್ಲ. ಇಲಾಖೆಯ ಅಂದಾಜು ಮಾಹಿತಿ ಪ್ರಕಾರ ಕಳೆದೆರಡು ವರ್ಷಗಳಲ್ಲಿ 50 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ 1.50 ಲಕ್ಷ ಕ್ವಿಂಟಲ್‌ಗೂ ಅಧಿಕ ಪಡಿತರ ಜಪ್ತಿ ಮಾಡಲಾಗಿದ್ದು ಸಾವಿರಕ್ಕೂ ಅಧಿಕ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಕುಟುಂಬಗಳಿಗೆ ಪಡಿತರ ಅಕ್ಕಿ ಸಿಗುವ ಪ್ರಮಾಣವೇ ಕಡಿಮೆಯಾಗಿರುವುದರಿಂದ ಕಾಳಸಂತೆ ಮಾರಾಟ ಬಹುತೇಕ ನಿಂತಿದೆ. ಜತೆಗೆ ಹೆಚ್ಚುವರಿ ಅಕ್ಕಿಯಲ್ಲಿ ಕಾಳಸಂತೆಯಲ್ಲಿ ಕೆಜಿಗೆ 10-15 ರೂ.ಗಳಿಗೆ ಮಾರುತ್ತಿದ್ದ ಜನರಿಗೆ ಸರ್ಕಾರವೇ ಕೆಜಿಗೆ 34 ರೂ. ನೀಡುತ್ತಿರುವುದು ಅನೇಕರಿಗೆ ಅನುಕೂಲವೂ ಆಗಿದೆ.