Advertisement

ಕಳಸಾ ಬಂಡೂರಿ: ಪ್ರಸ್ತಾವನೆ ಸಲ್ಲಿಸಲು ಕೇಂದ್ರದ ಸೂಚನೆ

07:05 AM Jul 11, 2020 | Lakshmi GovindaRaj |

ಬೆಂಗಳೂರು: ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೊಳಿಸಲು ಪರಿಸರ ಇಲಾಖೆ ಅನುಮತಿ ಪಡೆಯಲು ಹೊಸದಾಗಿ ಪ್ರಸ್ತಾವನೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ರಮೇಶ್‌ ಜಾರಕಿಹೊಳಿ  ಅವರು ಜಲಸಂಪನ್ಮೂಲ ಸಚಿವರಾದ ತಕ್ಷಣವೇ ದೆಹಲಿಗೆ ತೆರಳಿ ಕಳಸಾ ಬಂಡೂರಿ ನಾಲೆಗಳ ಪ್ರಥಮ ಹಂತದ ಯೋಜನೆಗೆ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ನೀಡುವಂತೆ ಕೋರಿದ್ದರು.

Advertisement

ಇದಕ್ಕೆ ತ್ವರಿತವಾಗಿ ಸ್ಪಂದಿಸಿರುವ ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆ, ಕಳಸಾ ಬಂಡೂರಿ ನಾಲಾ ಯೋಜನೆಯ ಕುರಿತು ಕರ್ನಾಟಕ ಮತ್ತು ಪಕ್ಕದ ರಾಜ್ಯಗಳ ನಡುವೆ ವ್ಯಾಜ್ಯ ಇರುವ ಕಾರಣ ಯೋಜನೆಯ ಪ್ರಸ್ತಾವನೆ ಯನ್ನು 2003ರಲ್ಲಿಯೇ ಕರ್ನಾಟಕಕ್ಕೆ ಮರಳಿ  ಕಳುಹಿಸಲಾಗಿದೆ. 2014ರಲ್ಲಿ ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು ಅದರ ಪ್ರಕಾರ, ಹೊಸ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯುವಂತೆ ಕೇಂದ್ರ ಅರಣ್ಯ ಇಲಾಖೆ ಡಿಐಜಿ ಬಿಜೇಂದ್ರ  ಸ್ವರೂಪ್‌ ರಾಜ್ಯ ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆದಿದ್ದಾರೆ.

ಕೇಂದ್ರದ ಪತ್ರದ ಕುರಿತು ಹರ್ಷ ವ್ಯಕ್ತಪಡಿಸಿರುವ ಸಚಿವ ರಮೇಶ್‌ ಜಾರಕಿಹೊಳಿ, ಜಲಸಂಪನ್ಮೂಲ ಸಚಿವರಾದ ಬಳಿಕ ಕೊರೊನಾ ಸಂಕಷ್ಟದ ಮಧ್ಯೆಯೂ  ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಮಾಡಿ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಲಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ನೀರಾವರಿ ಬಿಕ್ಕಟ್ಟು ಶಮನಕ್ಕಾಗಿ ಮುಂಬಯಿಗೆ ವಿಶೇಷ ನಿಯೋಗದೊಂದಿಗೆ ಮಾತುಕತೆ  ನಡೆಸಲಾಗಿದೆ. ಅದರ ಬೆನ್ನಲ್ಲಿಯೇ ಕಳಸಾ ಬಂಡೂರಿ ಯೋಜನೆಗೂ ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆ ಸ್ಪಂದಿಸಿದ್ದು ರಾಜ್ಯದ ಪಾಲಿಗೆ ಅದರಲ್ಲಿಯೂ ಉತ್ತರ ಕರ್ನಾಟಕದ ರೈತರ ಪಾಲಿಗೆ ಸಂತಸದ ಸುದ್ದಿ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next