ಪಣಜಿ : ಕರ್ನಾಟಕ ಸರಕಾರದ ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಜ.2ರ ಸೋಮವಾರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿಶೇಷ ಸಂಪುಟ ಸಭೆ ಕರೆದಿದ್ದಾರೆ. ಈ ವೇಳೆ ಪ್ರಮುಖವಾಗಿ ಮಹಾದಾಯಿ ನದಿಯ ವಿವಾದ ಕುರಿತು ಮಾತ್ರ ಚರ್ಚಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಪಕ್ಷಗಳ ಆಕ್ರೋಶ
ಇದೇ ವೇಳೆ ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿ ಗೋವಾ ಬಿಜೆಪಿ ಸರಕಾರದ ವಿರುದ್ಧ ಅಲ್ಲಿನ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. “ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಮಾಜಿ ಸಿಎಂ ದಿ| ಮನೋಹರ್ ಪರಿಕ್ಕರ್ ಅವರು ಕಳಸಾ-ಬಂಡೂರಿ ಯೋಜನೆ ವಿಷಯದಲ್ಲಿ ಗೋವಾದ ಹಿತಾಸಕ್ತಿಯನ್ನು ಬಲಿ ನೀಡಿದ್ದಾರೆ’ ಎಂದು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ(ಜಿಪಿಸಿಸಿ) ಅಧ್ಯಕ್ಷ ಅಮಿತ್ ಪಟ್ಕರ್ ಟ್ವೀಟ್ ಮೂಲಕ ಆರೋಪಿಸಿದ್ದಾರೆ.
ಕೇಂದ್ರ ಸರಕಾರದ ನಿರ್ಧಾರದಿಂದ ಮಹಾದಾಯಿ ನದಿಯ ಅಸ್ತಿತ್ವದ ಪ್ರಶ್ನೆ ಉದ್ಭವಿಸುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಕರ್ನಾಟಕಕ್ಕೆ ಮಣೆ ಹಾಕಿರುವುದು ಸ್ಪಷ್ಟವಾಗಿದೆ. ಆದರೆ ಮಹದಾಯಿ ಉಳಿಸಲು ಸರ್ವಪಕ್ಷ ನಿಯೋಗ ರಚಿಸುವ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಗೋವಾದ ಪರಿಸರವಾದಿ ರಾಜೇಂದ್ರ ಕೇರ್ಕರ್ ಅವರು ಆಗ್ರಹಿಸಿದ್ದಾರೆ.