ಬೆಂಗಳೂರು: ನಟ ರಜನಿಕಾಂತ್ ನಾಯಕನಾಗಿರುವ “ಕಾಲಾ’ ತಮಿಳು ಚಲನಚಿತ್ರ ರಾಜ್ಯದಲ್ಲಿ ಬಿಡುಗಡೆಗೆ ನಿರ್ಬಂಧ ವಿವಾದ ಹೈಕೋರ್ಟ್ ಅಂಗಳ ತಲುಪಿದೆ.
ಜೂನ್ 7ರಂದು ಕರ್ನಾಟಕದಲ್ಲಿ “ಕಾಲಾ’ಚಿತ್ರ ಬಿಡುಗಡೆಗೆ ಅಡ್ಡಿಪಡಿಸುವಂತಹ ಯಾವುದೇ ಆದೇಶ ಹೊರಡಿಸದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ದೇಶನ ನೀಡಬೇಕು, ಚಿತ್ರತಂಡಕ್ಕೆ ಸೂಕ್ತ ರಕ್ಷಣೆ ಒದಗಿಸಲು ಮತ್ತು ಚಿತ್ರಪ್ರದರ್ಶನದ ಸೂಕ್ತ ಭದ್ರತೆ ನೀಡುವಂತೆ ಪೊಲೀಸ್ ಇಲಾಖೆಗೆ ಆದೇಶಿಸಬೇಕು ಎಂದು ಕೋರಿ ಚಿತ್ರ ನಿರ್ಮಾಣ ಸಂಸ್ಥೆ ವಂಡರ್‌ಬಾರ್ ಫಿಲ್ಮ್ ಪ್ರೈ.ಲಿಮೆಟೆಡ್ ಹೈಕೋರ್ಟ್‌ನಲ್ಲಿ ಅರ್ದಿ ಸಲ್ಲಿಸಿದೆ.
ಕಂಪೆನಿ ನಿರ್ದೇಶಕರಾದ ನಟ ಧನುಷ್ ಹಾಗೂ ಪತ್ನಿ ಐಶ್ವರ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿ ವಿಚಾರಣೆ ಮಂಗಳವಾರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ. ಅರ್ಜಿಯಲ್ಲಿ ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿ, ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರು, ಸಿಬಿಎಫ್ಸಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ನಟ ರಜನಿಕಾಂತ್ ಕರ್ನಾಟಕ್ಕೆ ವ್ಯತಿರಿಕ್ತವಾಗುವ ಹೇಳಿಕೆ ನೀಡಿದ್ದಾರೆ ಎಂದು ಆಕ್ಷೇಪಿಸಿ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ಅವರು ರಜನಿಕಾಂತ್ ಅಭಿನಯದ “ಕಾಲಾ’ ಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅದೇರೀತಿ ಕನ್ನಡಪರ ಸಂಘಟನೆಗಳೂ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದಾರೆ.
ಸಿಬಿಎಫ್ಸಿ ಬೋರ್ಡ್‌ನಿಂದ ಯು/ಎ ಸರ್ಟಿಫಿಕೇಟ್ ಪ್ರಾಮಾಣೀಕೃತ “ಕಾಲಾ’ ಚಿತ್ರ ಬಿಡುಗಡೆಗೆ ವಿರೋಧಿಸಿರುವ ಕ್ರಮ ಸರಿಯಲ್ಲ. ಅಲ್ಲದೆ, ಚಿತ್ರ ಬಿಡುಗಡೆಗೆ ನಿರ್ಬಂಧ ವಿಧಿಸುವುದು ಸಂವಿಧಾನದ ಕಲಂ 19(ಎ) ಉಲ್ಲಂಘನೆಯಾಗಲಿದೆ. ಜತೆಗೆ ಚಿತ್ರ ನಿರ್ಬಂಧಿಸುವ ಅಧಿಕಾರ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧಿಕಾರವಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಈ ನಿಟ್ಟಿನಲ್ಲಿ ಜೂನ್ 7ರಂದು ಬಿಡುಗಡೆಯಾಗಲಿರುವ “ಕಾಲ’ ಚಿತ್ರದ ಪ್ರದರ್ಶನ ಮಾಡದಂತೆ ಯಾವುದೇ ಆದೇಶ ಹೊರಡಿಸಬಾರದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ದೇಶಿಸಬೇಕು. ಜತೆಗೆ, ಚಿತ್ರದ ನಿರ್ಮಾಪಕ, ನಿರ್ದೇಶಕ, ಸಿಬ್ಬಂದಿ, ವಿತರಕರಿಗೆ ಹಾಗೂ ಚಿತ್ರಪ್ರದರ್ಶನಕ್ಕೆ ಅಡ್ಡಿಯಾಗದಂತೆ ಸೂಕ್ತ ರಕ್ಷಣೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.