ಮಂಗಳೂರು: ತುಳುನಾಡಿನ ಮಣ್ಣಿನ ಮಹಿಮೆ, ಆಚಾರ ವಿಚಾರ ಸಂಸ್ಕೃತಿಯನ್ನು ಸಾರುವ “ಕ್ಲಾಂತ’ ಸಿನೆಮಾ ಫೆ. 2ರಂದು ಕರಾವಳಿಯಲ್ಲಿ ಎರಡನೇ ಬಿಡುಗಡೆ ಕಾಣಲಿದೆ.
ಉದಯ್ ಅಮ್ಮಣ್ಣಾಯ ಕೆ. ನಿರ್ಮಾಣದ “ಕ್ಲಾಂತ’ ಜ. 19ರಂದು ಬಿಡುಗಡೆಗೊಂಡಿದ್ದು, ಎರಡನೇ ಹಂತದಲ್ಲಿ ಕರಾವಳಿಯಲ್ಲಿ ಫೆ. 2ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ದೇಶಕ ವೈಭವ್ ಪ್ರಶಾಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
“ಕ್ಲಾಂತ’ ಒಂದು ಸಸ್ಪೆನ್ಸ್, ಥ್ರಿಲ್ಲರ್, ಮನೋರಂಜನ ಚಿತ್ರವಾಗಿದ್ದು, ಕರಾವಳಿಯ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ತುಳುನಾಡಿನ ಕೊರಗಜ್ಜ ದೈವದ ಪವಾಡದ ಬಗ್ಗೆ ಹೇಳಲಾಗಿದೆ. ಸಿನೆಮಾದಲ್ಲಿ ಯುವ ಜನಾಂಗಕ್ಕೆ ಉತ್ತಮ ಸಂದೇಶ ಹೇಳುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ನಟ ವಿಘ್ನೇಶ್ ಮಾತನಾಡಿ, ಕುಟುಂಬ ಸದಸ್ಯರೊಂದಿಗೆ ನೋಡಬಹುದಾದ ಕೌಟುಂಬಿಕ ಮನೋರಂಜನೆಯ ಚಿತ್ರವಾಗಿದೆ. ವಾರಾಂತ್ಯದಲ್ಲಿ ಪೋಷಕರಿಗೆ ತಿಳಿಸದೆ ಹುಡುಗ-ಹುಡುಗಿ ಅಪರಿಚಿತ ಸ್ಥಳಕ್ಕೆ ಟ್ರಕ್ಕಿಂಗ್ ಹೋಗಿ ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಅಲ್ಲಿಂದ ಪಾರಾಗಿ ಬರಲು ಎದುರಾಗುವ ಸಂಕಷ್ಟಗಳು ಹಾಗೂ ಅಸಹಾಯಕ ಹುಡುಗಿ ಕೈಗೊಳ್ಳುವ ದಿಟ್ಟ ನಿರ್ಧಾರ, ಯುವತಿಗೆ ಶಕ್ತಿ ತುಂಬುವ ಕೊರಗಜ್ಜನ ಕಾರ್ಣಿಕ, ಪೋಷಕರ ಸಂಕಷ್ಟವನ್ನು ಅತ್ಯುತ್ತಮವಾಗಿ ವಿವರಿಸಲಾಗಿದೆ ಎಂದರು.
ನಟಿ ಪಂಚಮಿ ವಾಮಂಜೂರು ಮಾತನಾಡಿ, ರಾಜ್ಯಾದ್ಯಂತ ಬಿಡುಗಡೆ ಗೊಂಡಿರುವ ಚಿತ್ರಕ್ಕೆ ವೀಕ್ಷಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.
ಸಂಗೀತಾ ಭಟ್ ನಾಯಕಿಯಾಗಿ, ಶೋಭರಾಜ್, ವೀಣಾ ಸುಂದರ್, ಸಂಗೀತಾ, ದೀಪಿಕಾ, ಪ್ರವೀಣ್ ಜೈನ್, ಸ್ವಪ್ನಾ ಶೆಟ್ಟಿಗಾರ್, ತುಳು ರಂಗಭೂಮಿ ಖಳನಟ ತಿಮ್ಮಪ್ಪ ಕುಲಾಲ್, ರಾಘವೇಂದ್ರ ಕಾರಂತ ಹೊಸ ಪ್ರತಿಭೆ ಯುವ ಮಂಜೇಶ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.