Advertisement

ಜಿಮ್ಸ್ ನಲ್ಲಿ 3 ದಿನದಲ್ಲಿ ಲ್ಯಾಬ್‌ ಆರಂಭ: ಶ್ರೀರಾಮುಲು

12:05 PM Mar 15, 2020 | Naveen |

ಕಲಬುರಗಿ: ಕೊರೊನಾ ಸೋಂಕಿನೊಂದಿಗೆ ಕಲಬುರಗಿಯ ಒಬ್ಬ ಮನುಷ್ಯನನ್ನು ಕಳೆದುಕೊಂಡ ನೋವು ನನಗಿದೆ. ಸೋಂಕು ಪತ್ತೆಗೆ ನಗರದ ಜಿಮ್ಸ್‌ ಆಸ್ಪತ್ರೆಯಲ್ಲಿ ಮೂರು ದಿನದೊಳಗೆ ಲ್ಯಾಬ್‌ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲ್ಯಾಬ್‌ ಆರಂಭಿಸಲು ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ಕೇಂದ್ರ ಸರ್ಕಾರದ ಅನುಮತಿ ಬೇಕಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಸಹ ಮನವಿ ಮಾಡಿದ್ದಾರೆ. ಆದ್ದರಿಂದ ಯಾವುದೇ ವಿಳಂಬ ಮಾಡದೆ ಲ್ಯಾಬ್‌ ಆರಂಭಿಸಿ ತಕ್ಷಣವೇ ವರದಿ ಬರುವಂತೆ ಮಾಡಿ, ಜನರ ಆತಂಕ ಕಡಿಮೆ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಿಲ್ಲಾಧಿಕಾರಿ, ಶಾಸಕರು ಸೇರಿದಂತೆ ಅನೇಕ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಸೋಂಕಿನಿಂದ ಮೃತಪಟ್ಟ 76 ವರ್ಷದ ವೃದ್ಧನ ಜೊತೆ ಸಂಪರ್ಕದಲ್ಲಿದ 71 ಜನರ ಮೇಲೆ ನಿಗಾ ಇಡಲಾಗಿದೆ. ಕಲಬುರಗಿಯಿಂದ ಸೋಂಕು ಬೇರೆಡೆ ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ವಿದೇಶದಿಂದ 16 ಜನ: ಕಲಬುರಗಿ ಜಿಲ್ಲೆಗೆ ಬೇರೆ-ಬೇರೆ ದೇಶಗಳಲ್ಲಿ ಇದುವರೆಗೆ 16 ಜನರು ಬಂದಿದ್ದಾರೆ. ಅವರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಸೌದಿ ಅರೇಬಿಯಾ, ಶ್ರೀಲಂಕಾ, ಸಿಂಗಾಪುರ, ನೆದರಲ್ಯಾಂಡ್‌ ಹಾಗೂ ಅಮೆರಿಕದಿಂದ ಬಂದಿದ್ದಾರೆ. ಇವರೆಲ್ಲರ ಮೇಲೆ 14 ದಿನ ನಿಗಾ ಇರಿಸಲಾಗಿದೆ ಎಂದು ತಿಳಿಸಿದರು.

ಸೋಂಕಿತ ತಪಾಸಣೆ ನಡೆಸುವ ವೈದ್ಯರಿಗೆ ವಿಶೇಷ ಕಿಟ್‌ ನೀಡಲಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೆ 80 ಸುರಕ್ಷಾ ಕಿಟ್‌ ಗಳು ಲಭ್ಯ ಇದ್ದವು. ಈಗ 500 ಕಿಟ್‌ಗಳನ್ನು ಕಲಬುರಗಿ ಜಿಲ್ಲೆಗೆ ಒದಗಿಸಲಾಗಿದೆ. ಇವುಗಳನ್ನು ಒಮ್ಮೆ ಮಾತ್ರ ಬಳಸುವಂತವು. ರಾಜ್ಯ ಸರ್ಕಾರ ಕೊರೊನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಸಚಿವರು ಹೇಳಿದರು.

Advertisement

1.10 ಲಕ್ಷ ಜನರ ತಪಾಸಣೆ: ಇದಕ್ಕೂ ಮುನ್ನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ 1.10 ಲಕ್ಷ ಜನರ ತಪಾಸಣೆ ಮಾಡಲಾಗಿದೆ. 731 ಜನರಿಗೆ ಇಲ್ಲಿವರೆಗೆ ರಕ್ತ ಮತ್ತು ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. 32 ಜನರನ್ನು ಐಸೋಲೇಟೆಡ್‌ ವಾರ್ಡ್‌ನಲ್ಲಿ ಇರಿಸಲಾಗಿದೆ. ಅವರಲ್ಲಿ 12 ಜನ ಡಿಸ್ಚಾರ್ಜ್‌ ಆಗುವ ಹಂತದಲ್ಲಿದ್ದಾರೆ. ಕೊರೊನಾ ಬಗ್ಗೆ ಯಾರೂ ಭಯ ಪಡಬಾರದು ಎಂದು ಮನವಿ ಮಾಡಿದರು.

ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಡಾ| ಅವಿನಾಶ ಜಾಧವ, ಜಿಲ್ಲಾ ಧಿಕಾರಿ ಶರತ್‌ ಬಿ., ಸಿಇಒ ಡಾ| ರಾಜಾ ಪಿ., ಡಿಎಚ್‌ಒ ಡಾ| ಅಬ್ಟಾಸ್‌ ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next