ನಂಜನಗೂಡು: ಉಪಚುನಾವಣೆಯಲ್ಲಿ ಈ ಭಾಗದ ಪ್ರಭಾವಿ ನಾಯಕರೆಂದೇ ಬಿಂಬಿತವಾಗಿದ್ದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್‌ರನ್ನು 21 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಳಿಸಿದ್ದ ಕಳಲೆ ಕೇಶವ ಮೂರ್ತಿ ಈ ಬಾರಿ ಪ್ರಸಾದರ ಅಳಿಯ ಹರ್ಷವರ್ಧನರಿಗೆ ತಲೆ ಬಾಗಿ ಸೋಲುಂಡಿದ್ದಾರೆ.
ಬರೋಬ್ಬರಿ ಒಂದು ವರ್ಷದ ಹಿಂದೆ ಕ್ಷೇತ್ರದ ಬಹುತೇಕ 232 ಮತಗಟ್ಟೆಯಲ್ಲೂ ಅತ್ಯಧಿಕ ಮತ ಗಳಿಸಿದ್ದ ಕಳಲೆ, ಕಳೆದ ಬಾರಿ ಎಲ್ಲಾ ಮತಪೆಟ್ಟಿಗಳಲ್ಲೂ ಅಭೂತಪೂರ್ವ ಯಶಸ್ಸು ಸಾಧಿಸಿದ್ದರು. ಆದರೆ ಈ ಬಾರಿ ಅವರ ಸ್ವಗ್ರಾಮದ ಮೂರು ಮತಗಟ್ಟೆಯಲ್ಲೂ ಹಿನ್ನಡೆ ಅನುಭವಿಸಿದ್ದಾರೆ.
ನಗರದಲ್ಲೂ ಕಳಪೆ ಸಾಧನೆ: ಉಪಚುನಾವಣೆಯಲ್ಲಿ ಮಾಜಿ ಸಚಿವ ಶ್ರೀನಿವಾಸ ಪ್ರಸಾದರಿಗಿಂತ 9 ಸಾವಿರಕ್ಕೂ ಹೆಚ್ಚು ಮತಗಳ ಬಹುಮತ ಗಳಿಸಿದ್ದ ಕಳಲೆ ಈ ಬಾರಿ ಕೇವಲ 1860 ಮತಗಳ ಮುನ್ನಡೆ ಕಾಪಾಡಿಕೊಳ್ಳಲು ಶಕ್ತರಾಗಿದ್ದು ಒಂದೇ ವರ್ಷದಲ್ಲಿ 7000 ಮತಗಳ ಹಿನ್ನಡೆಯಾಗಿದ್ದಾರೆ. ಇದಕ್ಕೆ ಕಾರಣವೇನೆಂಬ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಮಾವನಿಗಿಂತ ಮುನ್ನಡೆ ಸಾಧಿಸಿದ ಅಳಿಯ: ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಸೋಲಿಗೆ ಕಾರಣವಾಗಿದ್ದ ಮತಗಟ್ಟೆಗಳಲ್ಲೆಲ್ಲಾ ಈ ಬಾರಿ ಅವರ ಅಳಿಯ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ ಮುನ್ನಡೆ ಸಾಧಿಸುವುದರೊಂದಿಗೆ ಕಳಲೆಗೆ ಸೋಲಿನ ಕಹಿ ಉಣಿಸುವಲ್ಲಿ ಸಫಲರಾಗಿದ್ದಾರೆ.
ಬ್ಲಾಕ್ ಅಧ್ಯಕ್ಷರಿಲ್ಲ: ಉಪಚುನಾವಣೆಯಲ್ಲಿ ಪ್ರಚಾರ ಮಾಡಿದ ಮಂತ್ರಿ ಮಹೋದಯರಿಲ್ಲ, ಮಂಚೂಣಿ ನಾಯಕರಿಲ್ಲ, ಉಪ ಚುನಾವಣೆಯಲ್ಲಿ ನೀಡಿದ ಸೌಲಭ್ಯಗಳನ್ನೂ ಈ ಬಾರಿ ನೀಡುವಲ್ಲಿ ಕಳಲೆ ವಿಫಲರಾಗಿದ್ದು, ಅಲ್ಲದೆ ತಮ್ಮೊಂದಿಗೆ ಕಾಂಗ್ರೆಸ್‌ಗೆ ವಲಸೆ ಬಂದ ಗುಂಪನ್ನೇ ನೆಚ್ಚಿಕೊಂಡು ಕೆಲಸ ಮಾಡಿದ್ದು ಕಳಲೆಯ ಸೋಲಿಗೆ ಕಾರಣ ಎನ್ನಲಾಗುತ್ತಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಹಾಗೂ ಶ್ರೀಕಂಠೇಶ್ವರ ದೇವಾಲಯದ ಆಡಳಿತ ಮಂಡಳಿಯ ನೇಮಕ ಸೇರಿದಂತೆ ಪಕ್ಷದಲ್ಲಿನ ಆಂತರಿಕ ಭಿನ್ನತೆ ಮುಗಿಲು ಮುಟ್ಟಿದ್ದೂ ಸೇರಿದಂತೆ ಅನೇಕ ಕಾರಣಗಳನ್ನು ಈಗ ಪಟ್ಟಿ ಮಾಲಾಗುತ್ತಿದೆ. ಸೋಲು ಗೆಲುವಿನ ಮಧ್ಯೆ ತಾಲೂಕು ಕಾಂಗ್ರೆಸ್ ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.