Advertisement

ಕಾಲಕಾಲೇಶ್ವರ; 400 ವರ್ಷಗಳಿಗೂ ಹಳೆಯ 45 ಅಡಿ ಎತ್ತರದ ಸ್ತಂಭಗಳಲ್ಲಿ ದೀಪ ಬೆಳಗಲು ಸಜ್ಜು

05:59 PM Dec 26, 2023 | Team Udayavani |

ಗಜೇಂದ್ರಗಡ: ದಕ್ಷಿಣ ಕಾಶಿ ಪ್ರಸಿದ್ಧಿಯ ಶ್ರೀ ಕಾಲಕಾಲೇಶ್ವರ ದೇವಸ್ಥಾನದ ಮಹಾ ಕಾರ್ತಿಕೋತ್ಸವ ಡಿ.26ರ ಹೊಸ್ತಿಲ
ಹುಣ್ಣಿಮೆಯಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೃಹದಾಕಾರದ ದೀಪಸ್ತಂಭದಲ್ಲಿ ಜ್ಯೋತಿ ಬೆಳಗಿಸಲು ಭಕ್ತವೃಂದ ಸಜ್ಜಾಗಿದೆ.

Advertisement

ಉದ್ಭವ ಲಿಂಗ ಜತೆ ಜ್ಯೋತಿರ್ಲಿಂಗನಾಗಿರುವ ಶಂಕರನೆ ಜಾಳಿಂದ್ರಗಿರಿಯಲ್ಲಿ ಕಾಲಕಾಲೇಶ್ವರನೆಂಬ ಅಭಿದಾನದ ಮೂಲಕ ನೆಲೆಸಿರುವ ಕಳಕಮಲ್ಲನ ಮಹಿಮೆಯು ಶಂಕರಾಭರಣ ಶಿಖರದ ತುಟ್ಟತುದಿಯಿಂದ ಹಿಡಿದು ದಕ್ಷಿಣ ಭಾರತದಾದ್ಯಂತ
ಹಬ್ಬಿದೆ. ತ್ರಿಕಾಲ ಪೂಜಿತವಾಗಿರುವ ಕಳಕಮಲ್ಲನ ಕಾರ್ತಿಕೋತ್ಸವ ನೋಡಲು ಕಣ್ಣೆರಡು ಸಾಲದು.

ಶತಮಾನದ ದೀಪಸ್ತಂಭಗಳು: ಶ್ರೀ ಕಾಲಕಾಲೇಶ್ವರ ಸನ್ನಿಧಿ ಹಲವು ಇತಿಹಾಸಗಳನ್ನು ಹೊಂದಿರುವ ಪ್ರಾಚೀನ ತಾಣವಾಗಿದೆ. ಅಚ್ಚರಿಗಳನ್ನು ಮೂಡಿಸುವಲ್ಲದೇ ಭಕ್ತಿಯ ಸಂಗಮವಾಗಿದೆ. ದೇಗುಲ ಪ್ರವೇಶಕ್ಕೂ ಮುನ್ನ ಕಾಣುವ ಬೃಹದಾಕಾರದ ಎರಡು ದೀಪಸ್ತಂಭಗಳು ಸುಮಾರು 400 ವರ್ಷಗಳ ಇತಿಹಾಸವನ್ನು ಹೊಂದಿದೆ. ಒಂದೊಂದು ದೀಪಸ್ತಂಭಗಳು ಅಂದಾಜು 45 ಅಡಿ ಎತ್ತರವಿದೆ. ಜೊತೆಗೆ 500ಕ್ಕೂ ಅಧಿ ಕ ದೀಪಗಳು ಪ್ರಜ್ವಲಿಸಲಿವೆ.

ದಕ್ಷಿಣ ಭಾರತದಲ್ಲೇ ಪ್ರಖ್ಯಾತಿ ಪಡೆದಿರುವ ಸ್ವಯಂ ಲಿಂಗ ಶ್ರೀ ಕಾಲಕಾಲೇಶ್ವರ ದೇಗುಲ ಅಗಾಧವಾದ ಇತಿಹಾಸವನ್ನು ತನ್ನೊಡಲಲ್ಲಿ ಹುದಗಿಸಿಕೊಂಡಿದೆ. ಆ ಸಾಲಿನಲ್ಲಿ ಬೃಹದಾಕಾರದ ದೀಪಸ್ತಂಭಗಳು ಒಂದಾಗಿದೆ. ಶತ ಶತಮಾನದ ಐತಿಹ್ಯ ಹೊಂದಿರುವ ದೀಪಸ್ತಂಭಗಳು ಇಂದಿಗೂ ಯಾವುದೇ ದುರಸ್ತಿಗೊಳಗಾಗದೇ ಗಾಂಭೀರ್ಯದಿಂದ ನಿಂತಿವೆ.

ಘೋರ್ಪಡೆ ಮನೆತನದಿಂದ ಸೇವೆ: ಅಗಸ್ತ್ಯ ಮಹಾಮುನಿಗಳ ಶುಭಾಶೀರ್ವಾದದ ಫಲವಾಗಿ 17ನೇ ಶತಮಾನದಲ್ಲಿ ಘೋರ್ಪಡೆ ಮನೆತನದವರು ನೂರಾರು ಹಳ್ಳಿಗಳಲ್ಲಿ ಜಾಗೀರದಾರಿಕೆ ಆಳ್ವಿಕೆ ನಡೆಸುತ್ತಿದ್ದರು. ಇವರ ಆಳ್ವಿಕೆಯ ಸರಹದ್ದಿನಲ್ಲಿಯೇ ಈ ಪುಣ್ಯಕ್ಷೇತ್ರವಿತ್ತು. ಹೀಗಾಗಿ ಈ ತಾಣಕ್ಕೆ ಧರ್ಮದರ್ಶಿಗಳಾಗಿ ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಕೃತಿ ಸಿರಿಯನ್ನು ವಿಪುಲವಾಗಿ ಹೊತ್ತುಕೊಂಡು ನಿಸರ್ಗ ರಮಣೀಯ ಜಾಳಿಂದ್ರಗಿರಿಯ ಮಡಿಲಲ್ಲಿರುವ ಶ್ರೀ ಕಾಲಕಾಲೇಶ್ವರ ಕ್ಷೇತ್ರವು ಕಾಶಿಯಷ್ಟೇ ಪಾವಿತ್ರ್ಯ ಪಡೆದುಕೊಂಡಿದೆ. ಹೀಗಾಗಿ ದವನದ ಹುಣ್ಣಿಮೆಗೆ ಜರುಗುವ ಜಾತ್ರಾ ಮಹೋತ್ಸವ ಮತ್ತು ಹೊಸ್ತಿಲ ಹುಣ್ಣಿಮೆಯಂದು ಜರುಗುವ ಮಹಾಕಾರ್ತಿಕೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಧರ್ಮಜ್ಯೋತಿ ಬೆಳಗುತ್ತಾರೆ.

Advertisement

ಶ್ರೀ ಕಾಲಕಾಲೇಶ್ವರ ಸನ್ನಿಧಾನದಲ್ಲಿ ಕಾರ್ತಿಕೋತ್ಸವ ನಿಮಿತ್ತ ರುದ್ರಾಭಿಷೇಕ, ಬಿಲ್ವಾರ್ಚನೆ, ಅಲಂಕಾರಿಕ ಪೂಜೆ, ಮಹಾ
ಮಂಗಳಾರತಿ ಮತ್ತು ಪಲ್ಲಕ್ಕಿ ಸೇವೆ, ಸಂಜೆ ಉತ್ಸವ ಕಾರ್ಯಕ್ರಮ ನಡೆಯಲಿದೆ. ದೇವಸ್ಥಾನ ಧರ್ಮದರ್ಶಿಗಳಾದ ಶ್ರೀಮಂತ್‌ ಯಶರಾಜ್‌ ಪ್ರತಾಪಸಿಂಹ್‌ ಘೋರ್ಪಡೆಯವರಿಂದ ಕಾರ್ತಿಕೋತ್ಸವ ದೀಪಾರಾಧನೆಗೆ ಚಾಲನೆ ದೊರೆಯಲಿದೆ.
ಮಲ್ಲಯ್ಯಸ್ವಾಮಿ ಗುರುಸ್ಥಳಮಠ,
ದೇವಸ್ಥಾನದ ಅರ್ಚಕ

*ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next