Advertisement

ನೀರಿನ ಸಮಸ್ಯೆ ನೀಗಿಸದಿದ್ದರೆ ಮತದಾನ ಬಹಿಷ್ಕಾರ

01:02 PM May 01, 2019 | Naveen |

ಕಾಳಗಿ: ತಾಲೂಕಿನ ರಾಜಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಮಳಗ (ಕೆ) ಗ್ರಾಮದಲ್ಲಿ ಕಳೆದ ಡಿಸೆಂಬರ್‌ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಗ್ರಾಪಂನಿಂದ ಜಿಪಂ ವರೆಗಿನ ಎಲ್ಲ ಅಧಿಕಾರಿಗಳಿಗೂ ಸಮಸ್ಯೆ ತಿಳಿಸಿದರೂ ಯಾವ ಅಧಿಕಾರಿಯೂ ಇದುವರೆಗೂ ನೀರಿನ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡಿಲ್ಲ ಎಂದು ಗ್ರಾಮಸ್ಥರು ನಿತ್ಯ ಗೋಳಿಡುತ್ತಿದ್ದು, ಚಿಂಚೋಳಿ ಉಪ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

Advertisement

ಕಳೆದ ನವೆಂಬರ್‌ ತಿಂಗಳವರೆಗೆ ಯಾವುದೇ ಸಮಸ್ಯೆಯಿಲ್ಲದೆ ನಳಗಳ ಮೂಲಕ ಮನೆ ಮನೆಗಳಿಗೆ ನೀರು ಪೂರೈಕೆ ಆಗುತ್ತಿತ್ತು. ಡಿಸೆಂಬರ್‌ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಅಂತರ್ಜಲ ಕಡಿಮೆಯಾಗಿ ನಳಗಳಿಗೆ ನೀರು ಬರುವುದು ನಿಂತು ಹೋಯಿತು. ಎಚ್ಚೆತ್ತ ಗ್ರಾಮಸ್ಥರು ತಕ್ಷಣವೇ ಗ್ರಾಪಂ ಪಿಡಿಒ, ತಾಪಂ ಇಒ ಮತ್ತು ಜಿಲ್ಲಾಧಿಕಾರಿಗಳಿಗೆ ಗ್ರಾಮದ ನೀರಿನ ಸಮಸ್ಯೆ ಕುರಿತು ದೂರು ನೀಡಿದ್ದರು. ದೂರು ನೀಡಿ ಮೂರ್ನಾಲ್ಕು ತಿಂಗಳಾದರೂ ಯಾವೊಬ್ಬ ಅಧಿಕಾರಿಯೂ ಸಮಸ್ಯೆ ಬಗೆಹರಿಸಿಲ್ಲ. ನಮ್ಮ ಹಾಗೂ ಜಾನುವಾರುಗಳ ಜೀವಕ್ಕೆ ಬೆಲೆಯೇ ಇಲ್ಲವೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಎಲ್ಲ ಬಾವಿ, ಕೊಳವೆ ಬಾವಿಗಳು ಬತ್ತಿ ಹೋಗಿವೆ. ಸದ್ಯದ ಸ್ಥಿತಿಯಲ್ಲಿ ಇಡೀ ಊರಲ್ಲೇ ಕೇವಲ ಎರಡು ಬೋರವೆಲ್ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲೂ ಹಗಲು ಚೆನ್ನಾಗಿ ನೀರು ಬರದ ಕಾರಣ ನೀರಿಗಾಗಿ ರಾತ್ರಿಯಿಡಿ ಎಚ್ಚರವಿದ್ದು ನೀರು ಪಡೆಯಬೇಕಾದ ಪರಿಸ್ಥಿತಿಯಿದೆ. ಅನುಕೂಲತೆ ಇರುವ ಕೆಲವರು ಪಕ್ಕದ ಹಳ್ಳಿಗಳಿಗೆ ಹೋಗಿ ವಾಹನಗಳಲ್ಲಿ ನೀರು ತುಂಬಿಸಿಕೊಂಡು ಬರುವ ಪರಿಸ್ಥಿತಿ ಬಂದೊದಗಿದೆ. ಶೀಘ್ರವೇ ನೀರಿನ ಕೊರತೆ ನೀಗಿಸದಿದ್ದಲ್ಲಿ ಚಿಂಚೋಳಿ ಉಪ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಮಾಡುತ್ತೇವೆ ಎಂದು ಗ್ರಾಮದ ಮುಖಂಡ ರವಿಕುಮಾರ ಯರಗೊಳ, ಅಣವೀರಯ್ಯ ಮಠಪತಿ, ಜಗನ್ನಾಥ ತೆಗ್ಗಿನಮನಿ, ಮಲ್ಲಿಕಾರ್ಜುನ ಪಾಟೀಲ, ರೇವಣಸಿದ್ಧಪ್ಪ ಕಟ್ಟಿಮನಿ, ತಿಪ್ಪಣ್ಣ ನಾವದಗಿ, ಉದಯಕುಮಾರ ಭದ್ರಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next