ಭೀಮರಾಯ ಕುಡ್ಡಳ್ಳಿ
ಕಾಳಗಿ: ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ನೀಲಕಂಠ ಕಾಳೇಶ್ವರ ದೇವಸ್ಥಾನ ಪಕ್ಕದಲ್ಲಿ ಹರಿಯುವ ರೌದ್ರಾವತಿ ನದಿಯೊಡಲು ಘನತ್ಯಾಜ್ಯ ವಸ್ತುಗಳ ವಿಲೇವಾರಿ ಕೇಂದ್ರವಾಗಿ ಮಾರ್ಪಟ್ಟಿದೆ. ಸಾರ್ವಜನಿಕರು ನದಿಗೆ ನಿತ್ಯ ತ್ಯಾಜ್ಯ ಸುರಿಯುತ್ತಿರುವುದರಿಂದ ಸಾಂಕ್ರಮಿಕ ರೋಗ ಹರಡುವ ಆತಂಕ ಎದುರಾಗಿದೆ. ಕಾಶಿಗೆ ಹೋಗಬೇಕೆಂಬ ಕನಸು ಕಾಣುವವರು ಹೊಗಲಾಗದಿದ್ದರೆ “ದಕ್ಷಿಣ ಕಾಶಿ’ ಎಂದೇ ಹೆಸರಾಗಿರುವ ಕಾಳಗಿಯ ನೀಲಕಂಠ ಕಾಳೇಶ್ವರ ದೇವಸ್ಥಾನ ಪಕ್ಕದಲ್ಲಿ ನಿರಂತರ ಹರಿಯುವ ರೌದ್ರಾವತಿ ನದಿಯಲ್ಲಿ ಮಿಂದೆದ್ದರೆ ಜೀವನ ಪಾವನವಾಗಿ ಸರ್ವರೋಗ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇಲ್ಲಿದೆ. ಅಲ್ಲದೇ ಲಕ್ಷಾಂತರ ಶ್ರದ್ಧಾಳುಗಳು ಪ್ರತಿವರ್ಷ ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ.
ಆದರೆ ಕಳೆದ ಕೆಲವು ವರ್ಷಗಳಿಂದ ರೌದ್ರಾವಾತಿ ನದಿ ತ್ಯಾಜ್ಯ ವಸ್ತುಗಳಿಂದ ಸಂಪೂರ್ಣ ಮಲೀನವಾಗಿದೆ. ಇದರಲ್ಲಿ ಸ್ನಾನ ಮಾಡಿದರೆ ಚರ್ಮರೋಗ ಹರಡುತ್ತದೆಯೋ ಎನ್ನುವ ಆತಂಕ ಭಕ್ತರಲ್ಲಿ ಆತಂಕ ಮೂಡಿಸಿದೆ. ಇದಕ್ಕೆ ಕಾರಣ ಮಲೀನಗೊಂಡಿರುವ ನದಿ ನೀರು. ನದಿ ಇರುವುದೇ ಬೇಡವಾದ ಘನತ್ಯಾಜ್ಯ ವಸ್ತು, ಬಟ್ಟೆ, ಪ್ಲಾಸ್ಟಿಕ್, ಗ್ಲಾಸು, ಪ್ಲೇಟು, ಹೂವಿನ ಹಾರ, ಕಬ್ಬಿನ ದಂಟು, ಮಾವು, ಬಾಳೆ ಇನ್ನಿತರ ವಸ್ತುಗಳನ್ನೆಲ್ಲ ತಂದು ಸುರಿಯುವುದಕ್ಕಾಗಿ ಎನ್ನುವಂತೆ ಸಾರ್ವಜನಿಕರು, ಪ್ರವಾಸಿಗರು ವರ್ತಿಸುತ್ತಿದ್ದಾರೆ. ಅಲ್ಲದೇ ನಾವೇನೂ ಕಮ್ಮಿಯಿಲ್ಲ ಎನ್ನುವಂತೆ ಮಾಂಸದ ಅಂಗಡಿಯವರು ಸತ್ತ ಕೋಳಿ, ಹಂದಿ, ಕರು ಸೇರಿದಂತೆ ಪ್ರಾಣಿಗಳನ್ನು ತಂದು ನದಿಗೆ ಎಸೆದು ಹೋಗುತ್ತಿದ್ದಾರೆ.
ತಂದೆ ಕೊಟ್ಟ ಮಾತು ಮಗ ಉಳಿಸುವರೆ?: ಪ್ರಸ್ತುತ ಕಲಬುರಗಿ ಲೋಕಸಭೆ ಸದಸ್ಯರಾಗಿರುವ ಡಾ| ಉಮೇಶ ಜಾಧವ ಚಿಂಚೋಳಿ ಶಾಸಕರಾಗಿದ್ದಾಗ ರೌದ್ರಾವತಿ ನದಿ ಸ್ವತ್ಛತೆ ಕುರಿತಂತೆ ಹಲವು ಬಾರಿ ಕೇಳಲಾಗಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದ ಅವರು ಕಾಳಗಿ ನದಿ ಸ್ವತ್ಛತೆ ಮಾತ್ರವಲ್ಲ, ನೀಲಕಂಠ ಕಾಳೇಶ್ವರ ದೇವಸ್ಥಾನದ ಸಂಪೂರ್ಣ ಪರಿಸರವನ್ನು ಶೃಂಗೇರಿ ಶಾರದಾ ಪೀಠದ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿ ಉತ್ತಮ ಪ್ರವಾಸಿ ತಾಣವಾಗಿ ನಿರ್ಮಿಸುತ್ತೇನೆ ಎಂದು ಭರವಸೆ ನೀಡಿದ್ದರು.
ರೌದ್ರಾವತಿ ನದಿ ಸೇರಿಕೊಳ್ಳುತ್ತಿರುವ ಚರಂಡಿ ನೀರು ಬೇರೆಡೆ ತಿರುಗಿಸಿ ಸ್ವತ್ಛಗೊಳಿಸುವುದು, ಬಟ್ಟೆ ಒಗೆಯಲು ಪ್ರತ್ಯೇಕ ಧೋಬಿ ಘಾಟ್ ನಿರ್ಮಾಣ, ನದಿಯ ಎರಡೂ ಬದಿಗಳಲ್ಲಿ ಮೆಟ್ಟಿಲುಗಳ ನಿರ್ಮಾಣ, ದೇವಸ್ಥಾನದ ಎದುರಿನಲ್ಲಿ ಉದ್ಯಾನವನ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿಸುವುದಾಗಿ ಭರವಸೆ ನೀಡಿದ್ದರು. ಆ ಪೈಕಿ ನದಿಗೆ ಚರಂಡಿ ನೀರು ಸೇರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾಲುವೆಗಳನ್ನು ನಿರ್ಮಿಸಿ ಒಂದಷ್ಟು ಕೆಲಸ ಮಾಡಿಸಿದ್ದನ್ನು ಬಿಟ್ಟರೆ ಅವರು ಕೊಟ್ಟ ಭರವಸೆಗಳಲ್ಲಿ ಬಹುತೇಕವು ಇನ್ನೂ ಈಡೇರಿಲ್ಲ. ಡಾ| ಉಮೇಶ ಜಾಧವ ಸಂಸದರಾಗಿ ಕಲಬುರಗಿಗೆ ಹೋದ ನಂತರ ಚಿಂಚೋಳಿಯ ನೂತನ ಶಾಸಕರಾಗಿ ಆಯ್ಕೆಯಾಗಿರುವ ಅವರ ಮಗ ಡಾ| ಅವಿನಾಶ ಜಾಧವ ಕಾಳೇಶ್ವರ ದೇವಸ್ಥಾನ ಮತ್ತು ದೇವಾ§ನದ ಪಕ್ಕದಲ್ಲಿ ಹರಿಯುವ ರೌದ್ರಾವತಿ ನದಿಯನ್ನು ಸ್ವತ್ಛಗೊಳಿಸಿ ಶೃಂಗೇರಿ ಶಾರದಾ ಪೀಠದ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವರೇ ಎನ್ನುವುದನ್ನು ಕಾಯ್ದು ನೋಡಬೇಕಿದೆ.
ಜನಜಾಗೃತಿಯೇ ಉತ್ತಮ ಪರಿಹಾರ: ರೌದ್ರಾವತಿ ನದಿಯನ್ನು ಸದಾಕಾಲ ಸ್ವತ್ಛವಾಗಿಡಬೇಕಾದರೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ನದಿ ಹಾಗೂ ದೇವಸ್ಥಾನ ಆವರಣದಲ್ಲಿ ಎಷ್ಟೇ ಅಭಿವೃದ್ಧಿ ಮಾಡಿದರೂ ಅದು ದೀರ್ಘಕಾಲ ಉಳಿಯಬೇಕಾದರೆ ಸ್ಥಳೀಯ ಜನರು ಹಾಗೂ ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಪಪಂ ಅಧಿಕಾರಿಗಳು, ನೀಲಕಂಠ ಕಾಳೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಕಾರ್ಯನಿರತರಾಗಬೇಕಿದೆ.