ಕಾಳಗಿ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನೀಲಕಂಠ ಕಾಳೇಶ್ವರ ದೇವಸ್ಥಾನ ಪಕ್ಕದಲ್ಲಿ ಹರಿಯುವ ರೌದ್ರಾವತಿ ನದಿಗೆ ಜಿಲ್ಲಾಧಿಕಾರಿ ಆರ್. ವೇಂಕಟೇಶಕುಮಾರ ಭೇಟಿ ನೀಡಿ, ನದಿಯಲ್ಲಿನ ಕೊಳಚೆ ಹೂಳೆತ್ತುವ ಮೂಲಕ ನೀರಿನ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ನಿರಂತರವಾಗಿ ಪುಟಿದೆಳುವ ಝರಿಗಳಿಂದಲೇ ಹೆಸರಾಗಿರುವ ಪಟ್ಟಣದ ರೌದ್ರಾವತಿ ನದಿಯನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಇಂತಹ ನೀರನ್ನು ಸದುಪಯೋಗ ಪಡಿಸಿಕೊಂಡು ಪರಿಶುದ್ಧವಾಗಿ ಇಟ್ಟುಕೊಳ್ಳುವುದು ಗ್ರಾಮಸ್ಥರ ಜವಬ್ದಾರಿ ಆಗಿದೆ. ಸ್ವಚ್ಛತೆ ಕುರಿತಾಗಿ ಪಟ್ಟಣದ ಎಲ್ಲ ಜನರಲ್ಲೂ ಮನವರಿಕೆ ಮಾಡಿಕೊಡಬೇಕು ಎಂದು ಸ್ಥಳೀಯ ಅಧಿಕಾರಿ ಹಾಗೂ ಮುಖಂಡರಿಗೆ ತಿಳಿಸಿದರು.
ನದಿ ನೀರಿನ ಪರಿಶುದ್ಧತೆಯಲ್ಲಿ ಸ್ಥಳೀಯ ಜನರ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಬ್ಬರೂ ನದಿ ಬಗ್ಗೆ ಕಾಳಜಿ ವಹಿಸುವುದು ಪ್ರಮುಖವಾಗಿದೆ. ಪೂಜಾ ಸಾಮಗ್ರಿ, ಕಸ-ಕಡ್ಡಿ, ಹರಿದ ಚಿಂದಿ ಬಟ್ಟೆ ಸೇರಿದಂತೆ ತ್ಯಾಜ್ಯ ವಸ್ತುಗಳು ಬಿಸಾಡುವುದರಿಂದ ನೀರು ಮಲೀನವಾಗುತ್ತದೆ. ಅದರಲ್ಲೂ ಪ್ಲಾಸ್ಟಿಕ್ ಬಳಕೆ ಮಾರಕವಾಗಿದ್ದು, ಇದು ನೀರಿನ ಪವಿತ್ರತೆ ಹಾಳು ಮಾಡುತ್ತದೆ. ಅಧಿಕಾರಿಗಳು ಪ್ಲಾಸ್ಟಿಕ್ ನಿಷೇಧಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಮುಖಂಡರಾದ ಶಿವಶರಣಪ್ಪ ಕಮಲಾಪುರ, ರಾಜೇಂದ್ರಬಾಬು ಹೀರಾಪುರ ಮಾತನಾಡಿ, ನದಿಯ ಎರಡು ಕಡೆ ಮೆಟ್ಟಿಲುಗಳ ನಿರ್ಮಾಣ, ಮಹಿಳೆಯರಿಗೆ ಬಟ್ಟೆ ಒಗೆಯುವುದಕ್ಕೆ ಪ್ರತ್ಯೇಕ ದೋಭಿ ಘಾಟ್ ವ್ಯವಸ್ಥೆ, ಉದ್ಯಾನವನ ನಿರ್ಮಾಣ, ರೌದ್ರಾವತಿ ನದಿಗೆ ಚರಂಡಿ ನೀರು ಸೇರದಂತೆ ತಡೆಯುವುದು, ನೀಲಕಂಠ ಕಾಳೇಶ್ವರ ದೇವಸ್ಥಾನವನ್ನು ಪ್ರವಾಸಿ ತಾಣವಾಗಿ ನಿರ್ಮಿಸುವಂತೆ ಮನವಿ ಮಾಡಿದರು.
ಜಿ.ಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಸೇಡಂ ಸಹಾಯಕ ಆಯುಕ್ತ ರಮೇಶ ಕೊಲಾರ, ಗ್ರೇಡ್-1 ತಹಶೀಲ್ದಾರ್ ನೀಲಪ್ರಭಾ ಬಬಲಾದ, ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರಾದಾರ, ಪಶು ವೈದ್ಯಾಧಿಕಾರಿ ಡಾ| ಅಣ್ಣರಾವ್ ಪಾಟೀಲ, ಕಾಳೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ಯುವ ಮುಖಂಡ ರಾಜೇಂದ್ರಬಾಬು ಹೀರಾಪುರಕರ್, ಕರಬಸಪ್ಪ ಬೇನಕನಳ್ಳಿ, ಸಂತೋಷ, ರಸೀದ್ ಹರಸೂರಕರ್, ಬಾಬು ಡೊಣ್ಣೂರ ಇದ್ದರು.