ಕಾಳಗಿ: ನೂತನ ತಾಲೂಕು ಕೇಂದ್ರವಾಗಿರುವ ಕಾಳಗಿ ಪಟ್ಟಣವು ಗ್ರಾಮ ಪಂಚಾಯತಿಯಿಂದ ಮೇಲ್ದರ್ಜೇಗೇರಿ ನೂತನ ಪಟ್ಟಣ ಪಂಚಾಯತಿಯಾಗಿದ್ದು, ಚುನಾವಣೆಗೂ ಮುನ್ನವೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾದಂತಾಗಿದೆ.
ನೂತನ ಕಾಳಗಿ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳಾ ಮೀಸಲು, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಮೀಸಲಾತಿ ಪ್ರಕಟವಾಗಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರ ಕಣ್ಣು ನೇರವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೇಲೆ ನಾಟುವಂತಾಗಿದೆ. ಕಾಳಗಿ ಗ್ರಾಮ ಪಂಚಾಯತಿ 29 ಜುಲೈ 2019ರಂದು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೇಗೇರಿದೆ. 5 ಜೂನ್ 2015ರಲ್ಲಿ ಗ್ರಾ.ಪಂಗೆ 26 ಸದಸ್ಯರು ಚುನಾಯಿತರಾಗಿದ್ದರು.
ಇದರಲ್ಲಿ ಸಾಮಾನ್ಯ ಮಹಿಳಾ ಅಧ್ಯಕ್ಷ, ಪರಿಶಿಷ್ಟ ಜಾತಿ ಉಪಾಧ್ಯಕ್ಷ ಸ್ಥಾನಕ್ಕೆ ಲಭಿಸಿತ್ತು. ಈ ಅಧಿಕಾರವ28 ಜನವರಿ 2020ಕ್ಕೆ ಮುಕ್ತಾಯವಾಗಿದೆ. ನೂತನ ಪಟ್ಟಣ ಪಂಚಾಯತಿ ಸದಸ್ಯರ ಚುನಾವಣೆಗೂ ಮುನ್ನವೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದರಿಂದ ಪಕ್ಷಗಳ ಮುಖಂಡರು ಈಗಿನಿಂದಲೇ ತೆರೆಮರೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಲೆಕ್ಕಾಚಾರ ಮಾಡತೊಡಗಿದ್ದಾರೆ.
ಕಾಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಳಗಿ ಪಟ್ಟಣ ಸೇರಿದಂತೆ ದೇವಿಕಲ್ ತಾಂಡಾ, ಕರಿಕಲ್ ತಾಂಡಾ, ಕಿಂಡಿ ತಾಂಡಾ, ನಾಮು ನಾಯಕ ತಾಂಡಾ, ಸುಬ್ಬುನಾಯಕ ತಾಂಡಾ, ಲಕ್ಷ್ಮಣ ನಾಯಕ ತಾಂಡಾ, ಡೊಣ್ಣೂರ ಗ್ರಾಮವು ಸೇರಿದಂತೆ ಎಂಟು ವಾರ್ಡ್ ಹಾಗೂ 26 ಸದಸ್ಯರು ಇದ್ದರು. ನೂತನ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕಾಳಗಿ ಪಟ್ಟಣ ಸೇರಿದಂತೆ ಆರು ತಾಂಡಾಗಳು ಬರುತ್ತವೆ. ಹನ್ನೊಂದು ವಾರ್ಡ್‌ಗಳು ಅಂತಿಮಗೊಂಡಿದ್ದು ಇನ್ನು ಪ್ರಕಟಣೆಯಾಗಿಲ್ಲ. ಈ ಹನ್ನೊಂದು ವಾರ್ಡ್ ಗಳಿಗೆ ಇನ್ನು ಯಾವುದೇ ಮೀಸಲಾತಿ ಹಾಗೂ ಚುನಾವಣೆ ದಿನಾಂಕ ಪ್ರಕಟಣೆಯಾಗಿಲ್ಲ.
ಪಟ್ಟಣ ಪಂಚಾಯತಿ ಸದಸ್ಯರ ಚುನಾವಣೆಗೂ ಮುನ್ನವೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗಿದ್ದರಿಂದ ಪರಿಶಿಷ್ಟ ಮಹಿಳಾ ಮೀಸಲು ಹಾಗೂ ಹಿಂದುಳಿದ ವರ್ಗದವರಲ್ಲಿ ಚುನಾವಣೆಗೆ ಸ್ಪರ್ಧಿಸಲು ಉತ್ಸಾಹ ಕಂಡುಬರುತ್ತಿದೆ.
ಚುನಾವಣೆಗೂ ಮುನ್ನವೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದರಿಂದ ಸೂಕ್ತ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿಯನ್ನು ಚುನಾವಣೆ ಸಮಯದಲ್ಲೇ ಆರಿಸಿ ತರಲು ಮತದಾರರಿಗೆ ಅನುಕೂಲವಾಗಿದೆ.
ಸಂಗಣ್ಣ ಬಿಜನಳ್ಳಿ, ನಾಗರಿಕ