ಕಾಳಗಿ: ಜಾನಪದ ಸೋಗಡಿನ ಜೋಕುಮಾರ ಸ್ವಾಮಿ ಗಣೇಶ ವಿಸರ್ಜನೆ ನಂತರ ಗಂಗಾಮತ ಸಮಾಜದ ತಳವಾರ ಮಹಿಳೆಯರು ಸಿಂಗರಿಸಿದ ಬಿದಿರಿನ ಬುಟ್ಟಿಯಲ್ಲಿ ಪಟ್ಟಣದ ಮನೆ, ಮನೆಗೆ ತೆರಳಿ ಜೋಕಮಾರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುವುದು ಎಲ್ಲೆಡೆ ಕಂಡುಬಂತು.
‘ಅಡ್ಡಡ್ಡ ಮಳಿ ಬಂದ, ದೊಡ್ಡ ದೊಡ್ಡ ಕೆರಿ ತುಂಬಿ ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ, ಮಡಿವಾಳರ ಕೇರಿ ಹೊಕ್ಕಾನೆ ಜೋಕಮಾರ, ಮುಡಿ ತುಂಬ ಹೂ ಮುಡಿದಂತ ಚೆಲುವಿ ತನ್ನ ಮಡದಿಯಾಗೆಂದ ಸುಕುಮಾರ’ ಎಂದು ವಿವಿಧ ಹಾಡು ಹೇಳುತ್ತಾ ಬೇವಿನ ಎಲೆಯಲ್ಲಿ, ಬಿದಿರಿನ ಬುಟ್ಟಿಯಲ್ಲಿ ಜೋಕುಮಾರ ಸ್ವಾಮಿಯನ್ನು ಇಟ್ಟು ಹೊತ್ತೂಯ್ಯುವ ವಿಶೇಷ ಹಬ್ಬ ಇನ್ನೂ ಇದೆ.
ಬೆನಕನ ಅಮಾವಾಸ್ಯೆಯಾದ ಏಳನೇ ದಿನದಿಂದ ಜೋಕುಮಾರ ಸ್ವಾಮಿ ಹಬ್ಬ ಶುರುವಾಗಿ ಹುಣ್ಣಿಮೆಗೆ ಕೊನೆಗೊಳ್ಳುತ್ತದೆ. ಜೋಕುಮಾರ ಸ್ವಾಮಿ ರೈತರ ದೇವ. ಎಣ್ಣೆ ಮತ್ತು ಮಣ್ಣಿನಿಂದ ಜೋಕುಮಾರನನ್ನು ತಯಾರಿಸಲಾಗುತ್ತದೆ. ಈ ರೀತಿ ಸಿದ್ಧವಾದ ಜೋಕುಮಾರನ ಮೂರ್ತಿಗೆ ಬೇವಿನ ಎಲೆ, ಸಜ್ಜೆ, ಜೋಳ, ಬೆಣ್ಣೆ, ದಾಸವಾಳ, ಮಲ್ಲಿಗೆ, ಚೆಂಡು ಹೂವಿನಿಂದ ಅಲಂಕರಿಸಿ ಪೂಜೆ ಮಾಡಲಾಗುವುದು.
ಬೇವಿನ ಸೊಪ್ಪಿನಲ್ಲಿ ಸಿಂಗರಿಸಿದ ಜೋಕುಮಾರ ಸ್ವಾಮಿ ಮೂರ್ತಿ ಹೊತ್ತ ಗಂಗಾಮತ ಸಮಾಜದ ತಳವಾರ ಮಹಿಳೆಯರು ಮನೆ-ಮನೆಗೆ ಬರುವುದು ಇಲ್ಲಿನ ಸಂಪ್ರದಾಯವಾಗಿದೆ. ಹೀಗೆ ಬಂದ ಜೋಕುಮಾರನನ್ನು ಮಕ್ಕಳು ‘ಗಣಪತಿ ಹೋದ, ಮನೆಗೆ ಜೋಕಮಾರ’ ಬಂದ ಎಂದು ಕೂಗುತ್ತಾ ಸ್ವಾಗತ ಮಾಡಿಕೊಳ್ಳುತ್ತಿದ್ದರು.
ಜೋಕುಮಾರಸ್ವಾಮಿ ಪಟ್ಟಣದ ಕುಪ್ಪಣ ತಳವಾರ ಮನೆಯಲ್ಲಿ ಎಣ್ಣೆ, ಮಣ್ಣಿನಲ್ಲಿ ತಯಾರಿಸಲಾಗುತ್ತದೆ. ಈ ಮೂರ್ತಿಯನ್ನು ಬೇವಿನ ತಪ್ಪಲಲ್ಲಿ ಮುಚ್ಚಿ ತಳವಾರರು ಬಿದಿರಿನ ಬುಟ್ಟಿಯಲ್ಲಿ ಹೊತ್ತು ಮನೆಮನೆಗೆ ತರುವುದು ಹಬ್ಬದ ವಿಶೇಷವಾಗಿದೆ. ಭಾದ್ರಪದ ಮಾಸದಲ್ಲಿ ಜೋಕುಮಾರ ಜನಿಸುತ್ತಾನೆ ಎನ್ನುವ ಬಂಬಿಕೆ ಜನಪದದಲ್ಲಿದೆ ಎನ್ನುತ್ತಾರೆ ಶರಣಪ್ಪ ತಳವಾರ, ವಿಜಯಕುಮಾರ ಸುಂಠಾಣ.
ಜೋಕುಮಾರ ಮನೆ ಎದುರು ಬಂದಾಗ ಮನೆಯವರು ಸ್ವಾಗತಿಸಿ ಅಕ್ಕಿ, ಜೋಳ ಇತರೆ ಬಗೆಯ ಕಾಳು ಅರ್ಪಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಜೋಕುಮಾರ ಸ್ವಾಮಿಗೆ ಬೆಣ್ಣೆ ಅಂದರೆ ಪ್ರೀತಿ. ಮಕ್ಕಳಾಗದವರು ಸಂತಾನ ಭಾಗ್ಯಕ್ಕಾಗಿ ಜೋಕುಮಾರನಿಗೆ ಬೆಣ್ಣೆ ಹಚ್ಚಿ ಪೂಜಿಸುತ್ತಾರೆ. ಬೇವಿನ ಎಲೆಯನ್ನು ದನದ ಕೊಟ್ಟಿಗೆಯಲ್ಲಿ ಸುಟ್ಟು ಹೊಗೆ ಹರಡಿಸಿದರೆ ಜಾನುವಾರುಗಳಿಗೆ ಯಾವುದೇ ಕಾಯಿಲೆಗಳು ಬರದು ಎನ್ನುವ ನಂಬಿಕೆಯಿದೆ.
•
ಸಾಬಣ್ಣಾ ಎನ್.ಕೋರಬಾ,
ಮಲಘಾಣ ಗ್ರಾಮದ ನಿವಾಸಿ