ಮುಂಬಯಿ: ಕಾಲಘೋಡಾ ಸಾಯಿಬಾಬಾ ಪೂಜಾ ಸಮಿತಿಯ 48 ನೇ ವಾರ್ಷಿಕ ಮಹಾಸಭೆಯು ನ. 7 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಾಲಘೋಡಾ ಹೋಪ್ ರಸ್ತೆಯಲ್ಲಿನ ಮಂದಿರದ ವಠಾರದಲ್ಲಿ ಅದ್ದೂರಿಯಾಗಿ ನಡೆಯಿತು.
ಸಮಿತಿಯ ಸದಸ್ಯ ವಿದ್ಯಾಧರ ಶೆಟ್ಟಿ ದಂಪತಿಯ ಉಪಸ್ಥಿತಿಯಲ್ಲಿ ಬೊರಿವಲಿ ಸಾವರ್‌ಪಾಡಾದ ಶ್ರೀ ಶನೀಶ್ವರ ಮಂದಿರದ ಬಿ. ವಿಷ್ಣು ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು. ವಿದ್ಯಾದಾಯಿನಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆದು, ಮಧ್ಯಾಹ್ನ 12ರಿಂದ ಸಾಯಿಬಾಬಾ ಮಹಾಪೂಜೆ ಮತ್ತು ಸಾಯಿ ಮಹಾಮಂಗಳಾರತಿಯು ರಮೇಶ್ ಪೂಜಾರಿ ಮತ್ತು ಪ್ರದೀಪ್ ಸುವರ್ಣ ಅವರಿಂದ ನಡೆಯಿತು. ಪೂಜಾ ಮಂಟಪವನ್ನು ಡೊಂಬಿವಲಿಯ ಎಂ. ಡಿ. ಮೋಹನ್‌ದಾಸ್ ಅವರು ಅಲಂಕರಿಸಿದ್ದರು.
ಇದೇ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮಾಧವ ಎಸ್. ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರವನ್ನಿತ್ತು ಮಾತನಾಡಿ, ಸಮಿತಿಯು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉತ್ತಮ ಸಮಾಜ ಸೇವೆಯನ್ನು ಮಾಡುತ್ತಾ ಬರುತ್ತಿದೆ. ದಾನಿಗಳ ಸಹಾಯದಿಂದ ಸಮಾಜಪರ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಮಿತಿಯ ಈ ಎಲ್ಲಾ ಸೇವೆಗಳಿಗೆ ದಾನಿಗಳ ಸಂಪೂರ್ಣ ಸಹಕಾರವಿರಲಿ ಎಂದರು.
ಗೌರವ ಕಾರ್ಯದರ್ಶಿ ಪ್ರೊ| ಕೇಶವ ಎಚ್. ಕರ್ಕೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಮಿತಿಯು ಪ್ರತೀ ವರ್ಷ ವಿದ್ಯಾರ್ಥಿ ವೇತನ, ವೈದ್ಯಕೀಯ ನೆರವು ನೀಡುವುದರೊಂದಿಗೆ ನಿರ್ಗತಿಕ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿಯನ್ನು ಬೊರಿವಲಿಯ ಕಚೇರಿಯಲ್ಲಿ ನೀಡುತ್ತಿದೆ ಎಂದು ನುಡಿದು ಸಂಸ್ಥೆಯ ಧಾರ್ಮಿಕ ಹಾಗೂ ಸಮಾಜ ಸೇವೆಗೆ ಸಹಕರಿಸಿದ ದಾನಿಗಳನ್ನು ಅಭಿನಂದಿಸಿದರು.
ಜತೆ ಕಾರ್ಯದರ್ಶಿ ರಮೇಶ್ ಬಿ. ಶೆಟ್ಟಿ ಮಿಜಾರು ಕಾರ್ಯಕ್ರಮ ನಿರ್ವಹಿಸಿದರು. ಪೂಜಾ ಕಾರ್ಯದಲ್ಲಿ ಉಪಾಧ್ಯಕ್ಷ ಜಯ ಎಸ್. ಶೆಟ್ಟಿ, ಕೋಶಾಧಿಕಾರಿ ಆರ್. ಡಿ. ಶೇಣವ, ಜತೆ ಕೋಶಾಧಿಕಾರಿ ಭಾಸ್ಕರ ಎಂ. ಶೆಟ್ಟಿ, ಟ್ರಸ್ಟಿಗಳಾದ ಸೀತಾರಾಮ ಎಸ್. ಶೆಟ್ಟಿ, ಜಯ ಎಂ. ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸುಧಾಕರ ಶೆಟ್ಟಿ, ಸತೀಶ್ ಭಂಡಾರಿ, ರವಿ ಎಸ್. ಶೆಟ್ಟಿ, ಮುರಳಿ ಅಗ್ನಿàಶ್ವರ್, ಪರೀಕ್ಷತ್ ಎನ್. ರೈ ಹಾಗೂ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.
ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಾಯಿಭಕ್ತರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ಸಮಾಜ ಸೇವಕರು ಉಪಸ್ಥಿತರಿದ್ದರು.