Advertisement

3 ವರ್ಷಗಳಿಗೊಮ್ಮೆ ನಡೆಯುವ ಕಲಘಟಗಿ ಜಾತ್ರೆ ಆರಂಭ; 9 ದಿನ ಧಾರ್ಮಿಕ-ಸಾಂಸ್ಕೃತಿಕ ವೈಭವ

12:28 PM Mar 01, 2023 | Team Udayavani |

ಕಲಘಟಗಿ: ಪ್ರತಿ ಮೂರು ವರ್ಷಗಳಿಗೊಮ್ಮೆ ಆಚರಿಸಲಾಗುತ್ತಿರುವ ಪಟ್ಟಣದ ಶ್ರೀ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಮಾ. 1ರಿಂದ 9ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ.

Advertisement

ಜಾತ್ರೆ ಪೂರ್ವದ ಐದು ವಾರ ಮನೆ ಹಾಗೂ ಗ್ರಾಮದಿಂದ ಹೊರ ಬಿಡಿಕೆ ವಾರವನ್ನಾಗಿ ಜಾತ್ಯತೀತವಾಗಿ ಆಚರಿಸಿದ್ದಾರೆ. ಜಾತ್ರೆ ವರ್ಷದಲ್ಲಿ ಹೋಳಿ ಹುಣ್ಣಿಮೆಯ ಬಣ್ಣದ ಓಕುಳಿ ಆಡಬಾರದೆಂಬ ಸಾಂಪ್ರದಾಯಿಕ ಕಟ್ಟಳೆ ಆಚರಣೆಯಲ್ಲಿದೆ. ಇಲ್ಲಿನ ಗ್ರಾಮದೇವಿ ದೇವಸ್ಥಾನದಲ್ಲಿ ದ್ಯಾಮವ್ವ, ದುರ್ಗವ್ವ ಮತ್ತು ಮೂರು ಮುಖದವ್ವ ಎಂಬ ಮೂವರು ಗ್ರಾಮದೇವತೆಯರಿದ್ದಾರೆ. ಕೆಂಪು ಬಣ್ಣದಲ್ಲಿ ದ್ಯಾಮವ್ವಾ, ಹಸಿರು ಬಣ್ಣದಲ್ಲಿ ದುರ್ಗವ್ವಾ ಮತ್ತು ಮೂರು ಮುಖದವ್ವಳ ಒಂದು ಮುಖಕ್ಕೆ ಕೆಂಪು ನಡುವಿನ ಮುಖಕ್ಕೆ ಹಸಿರು ಮತ್ತೂಂದು ಮುಖಕ್ಕೆ ಹಳದಿ ಬಣ್ಣದಲ್ಲಿ ವಿರಾಜಮಾನರಾಗಿದ್ದಾರೆ.

ಮಾಂಗಲ್ಯ ಧಾರಣೆ ಕಾರ್ಯಕ್ರಮ: ಫೆ. 21ರ ಮಂಗಳವಾರದ ಕೊನೆಯ ಹೊರಬಿಡಿಕೆ ವಾರದ ನಂತರ ಗ್ರಾಮದೇವತೆಯರನ್ನು ಬಣ್ಣಕ್ಕೆ ಬಿಡಲಾಗಿತ್ತು. ಫೆ.28ರ ಮಂಗಳವಾರದಂದು ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ವೇ|ಮೂ| ಕಿರಣ ಪೂಜಾರ ನೇತೃತ್ವದಲ್ಲಿ ಹೋಮ, ಹವನ, ದೇವಿಯರ ಪ್ರತಿಷ್ಠಾಪನೆ ನಂತರ ಬಾಬುದಾರರಿಂದ ಮಾಂಗಲ್ಯಧಾರಣೆ (ಗುಡದಾಳ) ಕಾರ್ಯಕ್ರಮ ಜರುಗಿತು.

ಬಣ್ಣಕ್ಕೆ ಬಿಡಲಾದ ಮೇಲೆ ಶ್ರೀ ದೇವಿಯರ ಪ್ರಥಮ ದೃಷ್ಟಿ ಕಲಾಲ ಸಮಾಜದವರು ಪೂಜೆ ಪುನಸ್ಕಾರ ನಡೆಸಿ ಕರೆತಂದ ಕುರಿಯ ಮೇಲೆ ಬೀಳಿಸಲಾಗಿತ್ತು. ಶ್ರೀದೇವಿಯರ ಗಂಡಿನ ಕಡೆಯವರೆನ್ನುವ ಕಲಘಟಗಿ ಬಾಬುದಾರರು ಗ್ರಾಮದ ಗಡಿಭಾಗವಾದ ಬೆಂಡಿಗೇರಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಗುಡಿಯ ಸನಿಹ ದಾಸ್ತಿಕೊಪ್ಪ, ಮಾಚಾಪುರ, ಕಲಕುಂಡಿ ಮತ್ತು ಬೆಂಡಿಗೇರಿ ಗ್ರಾಮಗಳ ಬೀಗರನ್ನು ಬರಮಾಡಿಕೊಂಡು ದೇವಸ್ಥಾನಕ್ಕೆ ಕರೆ ತಂದ ಮೇಲೆ ಬೀಗರು ಉಡಿ ತುಂಬುವ ಕಾರ್ಯ ಮಾಡಿದರು. ಅದಾದ ಮೇಲೆ ಕಲಘಟಗಿ ಗ್ರಾಮಸ್ಥರು ಉಡಿ ತುಂಬಿದರು.

ಇಂದು ಜಾತ್ರಾಮಂಟಪಕ್ಕೆ ದೇವಿಯರು: ಮಾ. 1ರಂದು ದೇವಸ್ಥಾನದಲ್ಲಿ ಮೂರು ಮುಖದವ್ವಳನ್ನು ಇರಿಸಿ, ಮಧ್ಯಾಹ್ನ 3 ಗಂಟೆಗೆ ಗ್ರಾಮದೇವಿಯರಾದ ದ್ಯಾಮವ್ವ ಮತ್ತು ದುರ್ಗವ್ವರನ್ನು ಮೆರವಣಿಗೆಯಲ್ಲಿ ಜೋಳದ ಓಣಿ, ಮಾರ್ಕೆಟ್‌ ರೋಡ್‌ ಮುಖಾಂತರ ಅಕ್ಕಿ ಓಣಿಯಲ್ಲಿರುವ ಚೌತಮನೆ ಕಟ್ಟೆಯ ಜಾತ್ರಾ ಮಂಟಪಕ್ಕೆ ತಂದು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅಂದು ಉಡಿ ತುಂಬುವ ಕಾರ್ಯಕ್ರಮ ಇರುವುದಿಲ್ಲ. ಮಾ. 2ರಿಂದ ಉಡಿ ತುಂಬುವ ಕಾರ್ಯಕ್ರಮ ಆರಂಭಗೊಳ್ಳಲಿದೆ. ರಾತ್ರಿ 10 ಗಂಟೆಗೆ ಮಹಾಮಂಗಳಾರತಿ ಮುಗಿದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

Advertisement

ಜಾತ್ರಾ ಮಂಟಪದಲ್ಲಿ 9 ದಿನಗಳ ಕಾಲ ರಾಣಿಗೇರರು ರಂಗ ಹೊಯ್ದುಕೊಂಡು ಅಕ್ಕಿಯ ರಾಶಿಯನ್ನು ಹರವಿ ದೀಪವನ್ನು ನಿರಂತರವಾಗಿ ಒಂಭತ್ತು ದಿನಗಳವರೆಗೆ ಬೆಳಗುವಂತೆ ಕಾಯುತ್ತಾರೆ. ಮಂಟಪದ ಗೇಟಿನ ಎದುರಿಗೆ ಮಾತಂಗಿಯರು ಗುಡಿಸಲು ನಿರ್ಮಿಸಿ ಹಿಟ್ಟಿನಿಂದ ಕೋಣನ ತಲೆ ಮಾಡಿ ಅದರ ಮೇಲೆ ದೀಪ ಬೆಳಗಿ 9 ದಿನಗಳ ಕಾಲ ದೀಪ ಕಾಯುತ್ತಿರುತ್ತಾರೆ. ಮಾ.9ರ ಮಧ್ಯಾಹ್ನದ ನಂತರ ಶ್ರೀ ದೇವಿಯರು ಜಾತ್ರಾಮಂಟಪದಿಂದ ಹೊರಬರುತ್ತಿದ್ದಂತೆಯೇ ಮಾತಂಗಿ ಗುಡಿಸಲು ಹಾಗೂ ಹಿಟ್ಟಿನಿಂದ ಮಾಡಿದ ಕೋಣವನ್ನು ಸಾಂಕೇತಿಕವಾಗಿ ಸುಟ್ಟು ಬಲಿ ನೀಡಲಾಗುತ್ತದೆ. ಆ ಬೆಂಕಿಯ ಜ್ವಾಲೆಗೆ ಗ್ರಾಮದೇವಿಯರು ಮೂರು ಪ್ರದಕ್ಷಿಣೆ ಹಾಕಿದ ನಂತರ ಗ್ರಾಮದೇವಿಯರು ಎಪಿಎಂಸಿ ಸನಿಹದ ಪಾದಗಟ್ಟೆಗೆ ತೆರಳಲಿದ್ದು, ಜಾತ್ರೆ ಸಂಪನ್ನಗೊಳ್ಳಲಿದೆ.

ಸಂಬಂಧಿಸಿದ ಗ್ರಾಮಗಳಲ್ಲಿ ಮಾ. 21ರ ವರೆಗೂ ಸೂತಕವೆಂದು ಆಚರಿಸಲಾಗುತ್ತಿದ್ದು, ಮಾ.22ರ ಯುಗಾದಿ ಪಾಡ್ಯದಂದು ದೇವಸ್ಥಾನದಲ್ಲಿ ಹೋಮ, ಹವನ ಹಾಗೂ ಶ್ರೀ ದೇವಿಯರ ಪುನರ್‌ ಪ್ರತಿಷ್ಠಾಪನೆ ಜರುಗುವುದರೊಂದಿಗೆ ಶುಭ ಕಾರ್ಯಗಳಿಗೆ ಚಾಲನೆ ದೊರೆಯಲಿದೆ.

ಹನ್ನೆರಡು ಮಠ ರೇವಣಸಿದ್ಧ ಶಿವಾಚಾರ್ಯರಿಂದ ಚಾಲನೆ
ಮಾ.1ರ ಸಂಜೆ ಅಕ್ಕಿಓಣಿಯ ಶ್ರೀ ಗ್ರಾಮದೇವಿ ಜಾತ್ರಾ ಮಹಾಮಂಟಪದಲ್ಲಿ ದೇವಿಯರ ಪ್ರತಿಷ್ಠಾಪನೆ ನಂತರ ಜಾತ್ರಾ ಉತ್ಸವವನ್ನು ಹನ್ನೆರಡು ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು ಉದ್ಘಾಟಿಸಲಿದ್ದಾರೆ.

ಗ್ರಾಮದೇವಿ ಟ್ರಸ್ಟ್‌ ಅಧ್ಯಕ್ಷ ಹಾಗೂ ಶಾಸಕ ಸಿ.ಎಂ. ನಿಂಬಣ್ಣವರ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಚಿವ ಸಂತೋಷ ಲಾಡ್‌ ಆಗಮಿಸುವರೆಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ. ಜಾತ್ರೆ ಯಶಸ್ಸಿಗಾಗಿ ದೇವಸ್ಥಾನದ ಟ್ರಸ್ಟ್‌ ಕಮಿಟಿ, ಗ್ರಾಮದೇವಿ ಜಾತ್ರಾ ಉತ್ಸವ ಸಮಿತಿಯವರು, ಶಾಸಕ ಸಿ.ಎಂ. ನಿಂಬಣ್ಣವರ, ಸುಧಿಧೀರ ಬೋಳಾರ, ಶಶಿಧರ ನಿಂಬಣ್ಣವರ, ನಿತಿನ ಶೆವಡೆ, ಕುಮಾರ ಖಂಡೇಕರ, ರಾಜು ಚಿಕ್ಕಮಠ, ಪ್ರಮೋದ ಪಾಲ್ಕರ್‌, ಬಾಳು ಖಾನಾಪುರ, ರಾಕೇಶ ಅಳಗವಾಡಿ, ಬಸವರಾಜ ಹೊನ್ನಳ್ಳಿ, ಸಾಯಿನಾಥ ಯಲ್ಲಾಪುರಕರ, ಮಂಜುನಾಥ ಸಾಬಣ್ಣವರ, ಶ್ರೀಕಾಂತ ಕಟಾವಕರ, ಹನುಮಂತ ಚವರಗುಡ್ಡ, ಸಾಗರ ಕಪಿಲೇಶ್ವರ, ವಿಜಯ ಮುರಾರಿ ಮೊದಲಾದವರು ತಮ್ಮನ್ನು
ತೊಡಗಿಸಿಕೊಂಡಿದ್ದಾರೆ.

ಪ್ರಭಾಕರ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next