Advertisement

ಕಲಘಟಗಿ: ಭಕ್ತರ ಬಯಕೆ ಈಡೇರಿಸುವ ಬಸವೇಶ್ವರ

05:36 PM Jan 05, 2023 | Team Udayavani |

ಕಲಘಟಗಿ: ಮಲೆನಾಡಿನ ಸೆರಗಿನಲ್ಲಿರುವ ಪುಟ್ಟ ಗ್ರಾಮ ಭೋಗೇನಾಗರಕೊಪ್ಪದಲ್ಲಿ ನೆಲೆಸಿರುವ ಬಸವೇಶ್ವರ(ನಂದೀಶ್ವರ)ಪುಣ್ಯಕ್ಷೇತ್ರ ತನ್ನದೇ ವೈಶಿಷ್ಟ್ಯತೆಯನ್ನು ಹೊಂದಿದೆ. ಹಲವಾರು ವರ್ಷಗಳ ಹಿಂದೆ ಶಾಲ್ಮಲಾ ನದಿ ದಡದ ಸಮೀಪ ದಟ್ಟವಾದ ಗಿಡಗಂಟೆ-ಪೊದೆಗಳಿಂದ ಕೂಡಿದ ಪ್ರದೇಶದಲ್ಲಿ ಗ್ರಾಮದ ದೊಡ್ಡಪೂಜಾರ ಮನೆತನಕ್ಕೆ ಸೇರಿದ ಒಂದು ಆಕಳು ಪೊದೆಗಳಲ್ಲಿ ನಿತ್ಯ ಹೋಗಿ ಬರುವುದನ್ನು ಗಮನಿಸಿದ ದನ ಕಾಯುವ ಬಾಲಕರು ಈ ವಿಷಯವನ್ನು ಗ್ರಾಮದ ಹಿರಿಯರ ಗಮನಕ್ಕೆ ತಂದರು.

Advertisement

ಹಿರಿಯರು ಆ ಸ್ಥಳಕ್ಕೆ ಹೋದಾಗ ವಿಸ್ಮಯವೆಂಬಂತೆ ಆಕಳು ಅಲ್ಲಿ ಉದ್ಭವಿಸಿದ್ದ ಬಾಲ ನಂದೀಶ್ವರನ ಮೂರ್ತಿಗೆ ಕ್ಷೀರ ಧಾರೆ ಮಾಡುತ್ತಿತ್ತು. ಭಾವಪರವಶರಾದ ಹಿರಿಯರೆಲ್ಲ ಧಾರ್ಮಿಕ ವಿಧಿ ವಿಧಾನ ನೆರವೇರಿಸಿ ಆ ಸ್ಥಳದಲ್ಲಿ ಒಂದು ಚಿಕ್ಕ ಮಂದಿರ ನಿರ್ಮಿಸಿ ಪೂಜೆ-ಪುನಸ್ಕಾರ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಉದ್ಭವ ಮೂರ್ತಿ ನಂದೀಶ್ವರಭಕ್ತರ ಇಷ್ಟಾರ್ಥ ಈಡೇರಿಸುತ್ತಿದೆ.

16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಷಾಹಿ ಸುಲ್ತಾನರ ದಾಳಿಯಿಂದ ಅವನತಿ ಹೊಂದಿದಾಗ ಅಂದಿನ ಹಂಪಿ ವಿರೂಪಾಕ್ಷ ದೇವಸ್ಥಾನ ಪೂಜಾರಿ ಬಿಷ್ಟಪ್ಪ ಎಂಬುವರು ಸಾಲಿಗ್ರಾಮ ಪೀಠಗಳನ್ನು ಹೊತ್ತು ತಂದು ಇಲ್ಲಿ ಬಿಟ್ಟು ಹೋದರೆಂದೂ, ಅದರ ಮೇಲೆ ನಂದೀಶ್ವರ ಮೂರ್ತಿ ಉದ್ಭವಿಸಿ ಈ ಕ್ಷೇತ್ರದ ಹಿರಿಮೆಗೆ ಭಕ್ತ ರ ಬಯಕೆ ಈಡೇರಿಸುವ ಬಸವೇಶ್ವರ ಕಾರಣವಾಗಿದೆ ಎಂಬ ಪ್ರತೀತಿಯೂ ಇದೆ.

1970ರ ಸುಮಾರಿಗೆ ಗ್ರಾಮದ ಹಿರಿಯರು ಹಾಗೂ ಭಕ್ತರು ಕೂಡಿಕೊಂಡು ದೇವಸ್ಥಾನ ನಿರ್ಮಿಸಿದ್ದಾರೆ. ಸುಂದರ ಚಿತ್ರಣಗಳ ಕೆತ್ತನೆಯ 54 ವಿಭಿನ್ನ ಬೃಹದಾಕಾರದ ಕಲ್ಲಿನ ಕಂಬಗಳನ್ನೊಳಗೊಂಡ ದೇವಸ್ಥಾನ ಸುಂದರ ಪ್ರಕೃತಿ ಮಡಿಲಿನಲ್ಲಿ ಕಣ್ಮನ ಸೆಳೆಯುತ್ತದೆ. ದೇವಸ್ಥಾನದ ಎಡಭಾಗದಲ್ಲಿ ಬೃಹತ್‌ ತೇರಿನ ಮನೆ, ಭಕ್ತರಿಗಾಗಿ ವಸತಿ ಕೋಣೆಗಳು, ಹಿಂದುಗಡೆ ದಾಸೋಹ ಮನೆ, ಕದಳಿವನ ಮತ್ತು ಬಯಲು ರಂಗ ಮಂದಿರ, ಎದುರಿಗೆ ಪಾದಗಟ್ಟೆ, ಎತ್ತರದ ದೀಪಸ್ಥಂಭ, ಪುಷ್ಕರಣಿ ಮಾರುತಿ ದೇವಸ್ಥಾನ, ಬನ್ನಿ ಮಹಾಂಕಾಳಿ ಮುಂತಾದವು ಇವೆ. ದೇವಸ್ಥಾನದಿಂದ ಒಂದು ಕಿ.ಮೀ ಅಂತರದಲ್ಲಿ ಶಾಲ್ಮಲಾಕ್ಕೆ ಅಡ್ಡಲಾಗಿ ನಿರ್ಮಿಸಿರುವ
ಬಾಂದಾರ ನೋಡುಗರ ಮನಸೂರೆಗೊಳ್ಳುತ್ತಿದೆ.

ಪ್ರತಿ ಅಮಾವಾಸ್ಯೆ, ಯುಗಾದಿ, ಶ್ರಾವಣ ಮಾಸ, ದೀಪಾವಳಿ, ಜಾತ್ರೆ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಅನ್ನದಾಸೋಹ ನಡೆಯುತ್ತಲಿದೆ. ಭೋಗೇನಾಗರಕೊಪ್ಪ ಗ್ರಾಮಕ್ಕೆ ಹುಬ್ಬಳ್ಳಿಯಿಂದ ಗಂಜೀಗಟ್ಟಿ, ಬಗಡಗೇರಿ ಗ್ರಾಮಗಳಿಗೆ ತೆರಳುವ ಎಲ್ಲ ಬಸ್‌ಗಳ ನಿಲುಗಡೆ ಇದೆ. ಜಾತ್ರೆ ಸಂದರ್ಭದಲ್ಲಿ ಹುಬ್ಬಳ್ಳಿ ಹಾಗೂ ಕಲಘಟಗಿಯಿಂದ ವಿಶೇಷ ಬಸ್‌ ವ್ಯವಸ್ಥೆ ಇರುತ್ತದೆ. ಇಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ನಡೆದುಕೊಳ್ಳುತ್ತಿರುವುದು ವಿಶೇಷ. ಭಕ್ತರ
ಬಯಕೆಗಳನ್ನು ಈಡೇರಿಸುವ ಈ ಬಸವಣ್ಣ ಪೂರ್ವಾಭಿಮುಖವಾಗಿ ನೆಲೆಸಿದ್ದಾನೆ.

Advertisement

*ಪ್ರಭಾಕರ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next