Advertisement

ಕಲಾದಗಿ-ಕಾತರಕಿ ಬ್ಯಾರೇಜ್‌ಗೆ ತಲುಪದ ನೀರು

02:27 PM Jun 02, 2019 | Team Udayavani |

ಕಲಾದಗಿ: ಕಲಾದಗಿ-ಕಾತರಕಿ ಬ್ಯಾರೇಜ್‌ ಈ ಭಾಗದ ರೈತರಿಗೆ ಇದ್ದೂ ಇಲ್ಲದಂತಾಗಿದೆ. ಹಿಡಕಲ್ ಜಲಾಶಯದಿಂದ ಪ್ರತಿ ಬಾರಿ ನೀರು ಬಿಟ್ಟಾಗ ಈ ಬ್ಯಾರೇಜ್‌ಗೆ ಬರುತ್ತಲೇ ನೀರಿನ ಹರಿವು ಸ್ಥಗಿತಗೊಳ್ಳುತ್ತಿದೆ. ಇದರಿಂದ ಈ ಭಾಗದ ರೈತರಿಗೆ ಜಿಲ್ಲಾಡಳಿತ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಚಿಕ್ಕಾಲಗುಂಡಿ ರೈತ ಮಲ್ಲಿಕಾರ್ಜುನ ಪಾಟೀಲ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಬ್ಯಾರೇಜ್‌ಗೆ ರೈತ ಮುಖಂಡರೊಂದಿಗೆ ಭೇಟಿ ನೀಡಿದ್ದ ಅವರು, ಬೀಳಗಿ, ಮುಧೋಳ, ಬಾಗಲಕೋಟೆ ತಾಲೂಕಿನ ಘಟಪ್ರಭಾ ನದಿ ಪಾತ್ರದ ಹಲವು ಹಳ್ಳಿಗಳ ಜನರಿಗೆ, ಜಾನುವಾರುಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಈ ಬಾರಿಯ ಬೇಸಿಗೆ ಆರಂಭದಿಂದಲೂ ಘಟಪ್ರಭಾ ನದಿಗೆ ನೀರು ಬಿಡಲಾಗುತ್ತಿದೆ, ಆಲಗುಂಡಿ ಬ್ಯಾರೇಜಿನ ಮೇಲುಗಡೆಯ ಎಲ್ಲಾ ಬ್ಯಾರೇಜ್‌ಗಳಿಗೂ ನೀರು ಬಂದು ತುಂಬಿಕೊಳ್ಳುತ್ತಿವೆ. ಕಲಾದಗಿ-ಕಾತರಕಿ ಬ್ಯಾರೇಜ್‌ಗೆ ನೀರು ಬಂದು ತಲುಪುತ್ತಿಲ್ಲ. ಘಟಪ್ರಭಾ ಬಲದಂಡೆ ಕಾಲುವೆಗೂ ನೀರು ಬಿಡಿಸಿ. ಆಗ ಮೇಲಗಡೆಯ ಎಲ್ಲ ಬ್ಯಾರೇಜುಗಳು ತುಂಬಿಕೊಳ್ಳುತ್ತಿವೆ. ಹಿಡಕಲ್ ಜಲಾಶಯದಿಂದ ನದಿಗೆ ನೀರು ಬಿಟ್ಟಾಗಲೂ ಮೇಲುಗಡೆಯ ಬ್ಯಾರೇಜುಗಳು ತುಂಬಿಕೊಳ್ಳುತ್ತಿವೆ. ಕಲಾದಗಿ ಕಾತರಕಿ ಬ್ಯಾರೇಜ್‌ ನೀರು ಬರುವುದೇ ಇಲ್ಲ, ಬಂದಾಗಲೂ ಗೇಟ್ ಹಾಕಿ ನೀರು ಸಂಗ್ರಹಿಸುತ್ತಿಲ್ಲ ಎಂದು ಆರೋಪಿಸಿದರು.

ಜಮಖಂಡಿ ಎಸಿಯವರು ಮೇಲುಗಡೆಯ ಬ್ಯಾರೇಜ್‌ನ ಗೇಟ್ ತೆರವುಗೊಳಿಸಲು ಕ್ರಮ ಕೈಗೊಳ್ಳದೇ, ಕಲಾದಗಿ ಕಾತರಕಿ ಬ್ಯಾರೇಜ್‌ನಲ್ಲಿ ನೀರು ಸಂಗ್ರಹವಾಗುತ್ತಿದ್ದಂತೆಯೇ ಕೆಳಗಡೆ ಎರಡು ಲೇಯರ್‌ನ ಮೇಲಗಡೆಯ ಗೇಟ್ ತೆಗೆಯಲು ಸೂಚಿಸಿ ಆದೇಶಿಸುತ್ತಾರೆ ಎಂದರು.

ಕಳೆದ ಬಾರಿ ಒಂದು ಟಿಎಂಸಿ ನೀರು ಬಿಟ್ಟಾಗ ಕಲಾದಗಿ ಬ್ಯಾರೇಜ್‌ ದಾಟಿ ಮುಂದೆ ಆನದಿನ್ನಿವರೆಗೂ ನೀರು ಹರಿದು ಬ್ರಿಜ್‌ ತುಂಬಿಕೊಂಡಿತ್ತು. ಈ ಬಾರಿ 2 ಟಿ.ಎಂ.ಸಿ ನದಿಗೆ ನೀರು ಹರಿಸಿದರೂ ಬಾಗಲಕೋಟೆ ತಾಲೂಕಿನ ಬ್ಯಾರೇಜುಗಳಿಗೆ ನೀರು ಬರುತ್ತಿಲ್ಲ. ಆನದಿನ್ನಿ ಬ್ಯಾರೇಜ್‌ವರೆಗೂ ನೀರು ತಲುಪಿಸಲು ಕ್ರಮ ಕೈಗೊಳ್ಳಬೇಕಾದ ಧಿಕಾರಿಗಳ ನಿರ್ಲಕ್ಷ್ಯದಿಂದ ಬ್ಯಾರೇಜ್‌ಗೆ ನೀರು ಬರುತ್ತಿಲ್ಲ ಎಂದು ಆರೋಪಿಸಿದರು. ತುರ್ತಾಗಿ ನಮ್ಮ ಬ್ಯಾರೇಜ್‌ವರೆಗೂ ನೀರು ಬರುವಂತೆ ನೀರು ಬಿಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕುಮ್ಮಣ್ಣ ಮೂಲಿಮನಿ, ಲಕ್ಷ್ಮಣ ಶಿರಬೂರ, ಭೀಮಪ್ಪ ಸೊರಗಾವಿ, ರವಿ ಹುದ್ದಾರ, ಭೀಮಶಿ ಪೆಟ್ಲೂರ, ವೆಂಕಪ್ಪ ಅಂಬಿಗೇರ, ಅಶೋಕ ಜಂಬಗಿ, ಈರಣ್ಣ ಹಿರೇಮಠ, ರವಿ ತಮ್ಮಣ್ಣ ಹುದ್ದಾರ ಇದ್ದರು.

Advertisement

ಜಿಲ್ಲಾಧಿಕಾರಿಗಳಿಗೆ ನಾಳೆ ಮನವಿ ಪತ್ರ:

ಘಟಪ್ರಭಾ ನದಿಗೆ ಹಿಡಕಲ್ ಜಲಾಶಯದಿಂದ ಪ್ರತೀ ಬಾರಿ ನೀರು ಬಿಟ್ಟಾಗ ಕಲಾದಗಿ ಕಾತರಕಿ ಬ್ಯಾರೇಜ್‌ಗೆ ನೀರು ಬರುತ್ತಿಲ್ಲ. ಇದರಿಂದ ಮೂರು ತಾಲೂಕಿನ ಹಲವು ಹಳ್ಳಿಗಳ ರೈತರಿಗೆ ಅನ್ಯಾಯವಾಗುತ್ತಿದೆ. ಈ ಭಾಗದ ರೈತರಿಗೆ ಅನ್ಯಾಯವಾಗದಂತೆ ಶಾಶ್ವತ ಪರಿಹಾರ ಒದಗಿಸಿ ಕೊಡಲು ಮತ್ತು ನೀರು ಹರಿಸಲು ಆಗ್ರಹಿಸಿ ಜೂನ್‌ 3ರಂದು ಮನವಿ ಸಲ್ಲಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next