Advertisement

ಯೋಗ ದಿನ: 20ರಂದು ಕಾಲ್ನಡಿಗೆ ಜಾಥಾ

01:12 PM Jun 16, 2019 | Naveen |

ಕಲಬುರಗಿ: ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯು ಸರ್ವಾನುಮತದ ನಿರ್ಣಯ ಕೈಗೊಂಡಿತು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜೂ.21ರಂದು ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಬೆಳಗ್ಗೆ 6:30ಕ್ಕೆ ಎಲ್ಲರೂ ಸೇರಬೇಕು. ಬೆಳಗ್ಗೆ 6:45ಕ್ಕೆ ಧ್ಯಾನ ಮತ್ತು ಬೆಳಗ್ಗೆ 7 ಗಂಟೆಗೆ ಯೋಗಾಸನ ಕಾರ್ಯಕ್ರಮ ಆರಂಭಗೊಳ್ಳಲಿದೆ. ಒಂದು ಗಂಟೆ ಕಾಲ ನಡೆಯುವ ಯೋಗಾಸನ ಕಾರ್ಯಕ್ರಮವನ್ನು ಭೂಮಿ ಯೋಗ ಫೌಂಡೇಷನ್‌ ಸಂಸ್ಥೆಯ ಯೋಗ ಪಟು ನಾಗರಾಜ ಸಾಲೊಳ್ಳಿ ಮತ್ತು ಅವರ ತಂಡ ನಡೆಸಿಕೊಡಲಿದೆ. ಕಾರ್ಯಕ್ರಮದಲ್ಲಿ ಸುಮಾರು 1000ಕ್ಕಿಂತ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆಯಿದೆ. ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಮಹಾನಗರ ಪಾಲಿಕೆಯಿಂದ ಅಂದು ಕ್ರೀಡಾಂಗಣ ಸ್ಚಚ್ಛತೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅಗತ್ಯ ಪೊಲೀಸ್‌ ಸಿಬ್ಬಂದಿ ನಿಯೋಜನೆ, ಅಂಬ್ಯುಲೆನ್ಸ್‌ ಸೇವೆ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯಶಸ್ವಿಗೆ ವಿದ್ಯಾರ್ಥಿಗಳಲ್ಲದೆ, ಸರ್ಕಾರಿ ನೌಕರರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಕರೆ ನೀಡಿದರು.

ಜೂ.20ರಂದು ಯೋಗ ನಡಿಗೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮುನ್ನಾ ದಿನವಾದ ಜೂ.20ರಂದು ಬೆಳಗ್ಗೆ 8:30ಕ್ಕೆ ಜಗತ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ‘ಯೋಗ ನಡಿಗೆ’ ಹೆಸರಿನ ಕಾಲ್ನಡಿಗೆ ಜಾಥಾ ನಡೆಯಲಿದೆ. ಜಾಥಾದಲ್ಲಿ ಎಚ್ಕೆಇ ಹೋಮಿಯೋಪತಿ ಮಹಾವಿದ್ಯಾಲಯ, ಹಿಂಗುಲಾಂಬಿಕಾ ಆಯುರ್ವೇದ ಕಾಲೇಜು, ಇನಾಂದಾರ್‌ ಯೂನಾನಿ ಮಹಾವಿದ್ಯಾಲಯ, ಟಿಪ್ಪು ಸುಲ್ತಾನ ಯೂನಾನಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಆಯುಷ್‌ ವೈದ್ಯಾಧಿಕಾರಿಗಳ ಸಂಘದ ವೈದ್ಯರು ಮತ್ತು ವೈದ್ಯ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

Advertisement

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ನಾಗರತ್ನ ಚಿಮ್ಮಲಗಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ಇಲಾಖೆಯು ಕೈಗೊಂಡ ಪೂರ್ವಸಿದ್ಧತೆಯನ್ನು ಸಭೆಗೆ ವಿವರಿಸಿದರು. ಶಿಷ್ಟಾಚಾರ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ್‌, ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತ ಶಿವಣಗೌಡ ಪಾಟೀಲ, ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿಂದ್ರ, ಆರೋಗ್ಯ ಇಲಾಖೆಯ ಡಾ| ಶರಣಬಸಪ್ಪ ಗಣಜಲಖೇಡ್‌, ಪೊಲೀಸ್‌ ಇಲಾಖೆಯ ವಿಜಯಕುಮಾರ, ಬ್ರಹ್ಮಕುಮಾರಿ ಸಂಸ್ಥೆ ಪ್ರತಿನಿಧಿ ಬಿ.ಕೆ.ಸವಿತಾ, ಓಂ ಯೋಗ ಸಂಸ್ಥೆಯ ಚಂದ್ರಕಾಂತ ಬಿರಾದರ, ಭೂಮಿ ಯೋಗ ಫೌಂಡೇಷನ್‌ ಸಂಸ್ಥೆಯ ನಾಗರಾಜ ಸಾಲೊಳ್ಳಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next