Advertisement

106 ಕೋಟಿ ಕ್ರಿಯಾಯೋಜನೆಗೆ ಅಸ್ತು

02:43 PM Jul 05, 2019 | Team Udayavani |

ಕಲಬುರಗಿ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 2019-20ನೇ ಸಾಲಿನ ಎನ್‌.ಆರ್‌.ಡಿ.ಡಬ್ಲ್ಯು.ಪಿ ಮತ್ತು ಎಸ್‌.ಡಿ.ಪಿ. ಯೋಜನೆಯಡಿ ಕುಡಿಯುವ ನೀರು ಯೋಜನೆಯಡಿ ಕಾಮಗಾರಿ ಕೈಗೊಳ್ಳಲು 106 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅಧ್ಯಕ್ಷತೆಯ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಅನುಮೋದನೆ ನೀಡಿತು.

Advertisement

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಡಾ| ರಾಜಾ ಪಿ. ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಕೆಟ್ಟು ಹೋದ ಬೋರವೆಲ್ ಫ್ಲಶಿಂಗ್‌, ಆಳ ಹೆಚ್ಚಿಸಲು, ನೀರಿನ ಮಟ್ಟ ಅರಿಯಲು ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು. ಪ್ರಸಕ್ತ 2019-20ನೇ ಸಾಲಿನಲ್ಲಿ ಜೂನ್‌ ಅಂತ್ಯದವರೆಗೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮಳೆಯ ಅಭಾವ ನೀರಿನ ಸಮಸ್ಯೆಗೆ ಮುಖ್ಯಕಾರಣ. ಭೂವಿಜ್ಞಾನಿಯವರಿಂದ ಸ್ಥಳ ಪರಿಶೀಲಿಸದೆ ಯಾವುದೇ ಕಾರಣಕ್ಕೂ ಬೋರವೆಲ್ ಕೊರೆಸಬಾರದು ಎಂದರು.

ಜಿಲ್ಲೆಯ ಯಾವ್ಯಾವ ಗ್ರಾಮಗಳಲ್ಲಿ ಪ್ರಸ್ತುತ ಇರುವ ಬೋರ್‌ವೆಲ್, ಕೊಳವೆ ಬಾವಿಗಳಲ್ಲಿ ಕಾರ್ಯಚರಣೆಯಲ್ಲಿರುವ ಮತ್ತು ನೀರಿಲ್ಲದೆ ಬತ್ತಿರುವ ಕುರಿತು ತಾಲೂಕಾವಾರು ಮಾಹಿತಿ ಸಂಗ್ರಹಿಸಿ ಸಲ್ಲಿಸಬೇಕು.ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಪೂರಕ ಕಾರ್ಯಕ್ರಮ ಹಾಕಿಕೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಫಜಲಪುರ ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮುಂದಿನ ದಿನದಲ್ಲಿ ಜಲಮೂಲಗಳಲ್ಲಿ ಅಂತರ್ಜಲ ಹೆಚ್ಚಳ ಕಾಯ್ದುಕೊಳ್ಳಲು ಸೂಕ್ತ ಯೋಜನೆ ಹಾಕಿಕೊಂಡಲ್ಲಿ ಮಾತ್ರ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಕ್ಷೇತ್ರದಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದ್ದು, ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಎಂದರು.

Advertisement

ಚರ್ಚೆಗೂ ಮುನ್ನ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಅಭಿಯಂತ ರೇವಣಸಿದ್ದಪ್ಪ ಅವರು 10600.61 ಲಕ್ಷ ರೂ. ಮೊತ್ತದ ಕ್ರಿಯಾ ಯೋಜನೆಯನ್ನು ಸಭೆಗೆ ಮಂಡಿಸಿ ಅಫಜಲಪುರ ತಾಲೂಕಿಗೆ 16.22 ಕೋಟಿ ರೂ., ಆಳಂದ ತಾಲೂಕಿಗೆ 13.50 ಕೋಟಿ ರೂ., ಚಿಂಚೋಳಿಗೆ 18.29 ಕೋಟಿ ರೂ., ಚಿತ್ತಾಪುರಕ್ಕೆ 16.43 ಕೋಟಿ ರೂ., ಕಲಬುರಗಿಗೆ 8.86 ಕೋಟಿ ರೂ., ಜೇವರ್ಗಿಗೆ 17.31 ಕೋಟಿ ರೂ. ಹಾಗೂ ಸೇಡಂ ತಾಲೂಕಿಗೆ 15.36 ಕೋಟಿ ರೂ. ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಪಾಟೀಲ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಪ್ಪ ಕೂಡಲಗಿ ಹಾಗೂ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next