Advertisement

ಕಲಬುರಗಿಯಿಂದ ವಿಮಾನ ಹಾರಾಟ ಶುರು ಯಾವಾಗ?

10:22 AM Aug 14, 2019 | Naveen |

ಮಲ್ಲಿಕಾರ್ಜುನ ಹಿರೇಮಠ
ಕಲಬುರಗಿ:
ಕಲಬುರಗಿಯಿಂದ ವಿಮಾನ ಹಾರಾಟಕ್ಕೆ ಇನ್ನೂ ಮುಹೂರ್ತ ಮಾತ್ರ ಕೂಡಿ ಬಂದಂತೆ ಕಾಣುತ್ತಿಲ್ಲ. ಯಾವಾಗ ಶುರುವಾಗುತ್ತದೆ ಎಂಬ ಪ್ರಶ್ನೆ ಕಳೆದ ಮೂರು ವರ್ಷಗಳಿಂದ ಕಾಡುತ್ತಲೇ ಇದೆ.

Advertisement

ಈ ವರ್ಷಾಂತ್ಯಕ್ಕೆ ಇಲ್ಲವೇ ಇನ್ನಾರು ತಿಂಗಳೊಳಗೆ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಶುರುವಾಗುತ್ತದೆ. ಅಲ್ಲದೇ ಹೈದ್ರಾಬಾದ್‌ ಕರ್ನಾಟಕದ ಬಹು ದಿನಗಳ ಕನಸು ನನಸಾಗಲಿದೆ ಎಂದು ಹೇಳುತ್ತ್ತ ಬರಲಾಗುತ್ತಿದೆ ವಿನಃ ಕಲಬುರಗಿಯಿಂದ ವಿಮಾನ ಮಾತ್ರ ಹಾರುತ್ತಲೇ ಇಲ್ಲ.

ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ಕೆಲವು ಕೆಲಸಗಳು ಮಾತ್ರ ಉಳಿದಿವೆ. ಅದನ್ನು ಮೂರು ತಿಂಗಳಲ್ಲಿ ಮುಗಿಯುತ್ತವೆ ಎಂದು ತಿಳಿದುಕೊಂಡು ಕಳೆದ 2018ರ ಆಗಸ್ಟ್‌ 26ರಂದು ಹಲವು ದಶಕಗಳಿಂದ ನಿರೀಕ್ಷಿಸಲಾಗುತ್ತಿದ್ದ ಬಿಸಿಲೂರು ಕಲಬುರಗಿಗೆ ವಿಮಾನಯಾನ ಸೇವೆಗೆ ಪೂರಕವಾಗಿ ಪರೀಕ್ಷಾರ್ಥ ವಿಮಾನ ಹಾರಾಟ ಯಶಸ್ವಿಯಾಗಿ ನಡೆಸಲಾಗಿದೆ.

ಪರೀಕ್ಷಾರ್ಥವಾಗಿ ವಿಮಾನ ಹಾರಾಟ ಯಶಸ್ವಿಯಾಗಿ ನಡೆದು ವರ್ಷವಾಗುತ್ತಿದ್ದರೂ ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಕಾರ್ಯಾಚರಣೆ (ಸಾರ್ವಜನಿಕರು ಪ್ರಯಾಣ)ಗೆ ಮಾತ್ರ ಕಾಲ ಕೂಡಿ ಬರುತ್ತಿಲ್ಲ. ಕಳೆದ ವರ್ಷದ ಆಗಸ್ಟ್‌ 26ರಂದು ಹೈದ್ರಾಬಾದಿನಿಂದ ಏಶಿಯನ್‌ ಪೆಸಿಫಿಕ್‌ ಫ್ಲೈವೆಟ್ ಟ್ರೇನಿಂಗ್‌ ಅಕಾಡೆಮಿಯ ಡೈಮಂಡ್‌-40 ಮತ್ತು ಡೈಮಂಡ್‌-42 ಎಂಬ 4 ಅಸನವುಳ್ಳ ಎರಡು ಲಘು ವಿಮಾನಗಳು ಯಶಸ್ವಿಯಾಗಿ ಹಾರಾಟ ನಡೆಸಿವೆ.

ಉಡಾನ್‌ಗೆ ಸೇರ್ಪಡೆ: ಕಲಬುರಗಿ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರ ಉಡಾನ್‌ ಯೋಜನೆಯಡಿ ಸೇರಿಸಿದೆ. ಅಲ್ಲದೇ ಇದಕ್ಕೆ ಸಂಬಂಧವಾಗಿ ಕಳೆದ 2018ರ ಜನವರಿ 25ರಂದು ಘೋಷಣೆ ಸಹ ಮಾಡಿದೆ. ವಿಮಾನ ಹಾರಾಟಕ್ಕೆ ಅಗತ್ಯವಾಗಿರುವ ಸಂಪರ್ಕ ಸಾಧಿಸುವ, ಅಕ್ಷಾಂಶ ನಿರೂಪಿಸುವ ಯಂತ್ರಗಳ ಅಳವಡಿಕೆ ಸೇರಿದಂತೆ ಇತರ ಒಟ್ಟಾರೆ ಕಾರ್ಯ ಪೂರ್ಣಗೊಂಡಿವೆ. ಹಾಗೆಯೇ ಸಿಎನ್‌ಎಸ್‌ ಹಾಗೂ ವಿಎಫ್ಆರ್‌ ಕಾರ್ಯ ಸಹ ಅಂತಿಮಗೊಂಡಿದ್ದರಿಂದ ವಿಮಾನ ಹಾರಾಟ ಶುರುವಾಗಲು ಯಾವುದೇ ತಾಂತ್ರಿಕ ಅಡಚಣೆಗಳಿಲ್ಲ ಎಂದು ತಿಳಿದು ಬಂದಿದೆ. ಆದರೆ ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಕಾರ್ಯಾಚರಣೆ (ಸಾರ್ವಜನಿಕರು ಪ್ರಯಾಣ) ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಇಚ್ಚಾಶಕ್ತಿ ಒಗ್ಗೂಡಿದಲ್ಲಿ ಯಾವುದೇ ಸಂದರ್ಭದಲ್ಲಿ ಹಾರಾಟ ಶುರು ಮಾಡಬಹುದಾಗಿದೆ.

Advertisement

ಮೂರು ಕಂಪನಿಗಳು ಆಸಕ್ತಿ: ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಸೇವೆ ಆರಂಭಿಸಲು ಮೂರು ಕಂಪನಿಗಳು ಮುಂದೆ ಬಂದಿವೆ. ನವದೆಹಲಿ, ತಿರುಪತಿ ಹಾಗೂ ಬೆಂಗಳೂರು ಮಾರ್ಗಗಳಲ್ಲಿ ವಿಮಾನ ಓಡಿಸಲು ಉದ್ದೇಶಿಸಲಾಗಿದೆ. ಈ ಮೂರು ಮಾರ್ಗಗಳು ಆರ್ಥಿಕವಾಗಿ ಲಾಭ ತರುತ್ತದೆ ಎಂದು ಸಮೀಕ್ಷಿಸಲಾಗಿದೆ.

ಗೋಡ್ವಾಟ್ ಕಂಪನಿ ಈ ಮೂರು ಮಾರ್ಗಗಳಲ್ಲಿ ವಿಮಾನ ಹಾರಾಟ ನಡೆಸುವ ಬಗ್ಗೆ ಮುಂದೆ ಬಂದಿದೆ. ಅದೇ ರೀತಿ ಅಲಿಯನ್ಸ್‌ ಏರ್‌ ಕಂಪನಿ ಬೆಂಗಳೂರಿಗೆ ಮಾತ್ರ ತಮ್ಮ ವಿಮಾನ ಓಡಿಸಲು ಆಸಕ್ತಿ ಹೊಂದಿ ಮುಂದೆ ಬಂದಿದೆ.

ಉದ್ಘಾಟನೆಗೆ ಮೋದಿ?
ಹಲವು ದಶಕಗಳ ಬೇಡಿಕೆಯಾಗಿರುವ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಶುರು ಕಾರ್ಯವನ್ನು ಅವಿಸ್ಮರಣೀಯನ್ನಾಗಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. 2008ರಲ್ಲಿ ಆಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಹಾಕಿದ್ದರು. ಈಗ ಅವರ ಅವಧಿಯಲ್ಲಿಯೇ ವಿಮಾನ ಹಾರಾಟ ಶುರುವಾದರೆ ಮತ್ತಷ್ಟು ಅರ್ಥ ಬರುತ್ತದೆ ಎಂದುಕೊಂಡಿದೆ. ಪ್ರವಾಹ ಹಾಗೂ ಸಚಿವ ಸಂಪುಟ ರಚನೆಯಾಗದಿರುವುದು ಕಲಬುರಗಿ ವಿಮಾನ ಹಾರಾಟದ ಕಡೆ ಲಕ್ಷ್ಯ ವಹಿಸಲಿಕ್ಕಾಗುತ್ತಿಲ್ಲ ಎಂದು ಬಿಜೆಪಿ ಪಕ್ಷದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್‌ 17ರ ಹೈದ್ರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ ಹಾಗೂವಿಮಾನ ಹಾರಾಟ ಶುರುವಿಗೆ ಹಸಿರು ನಿಶಾನೆ ತೋರಿಸಲು ಉದ್ದೇಶಿಸಲಾಗಿತ್ತು. ಆದರೆ ಈಗ ಏನಾಗುತ್ತದೆ ಎಂಬುದು ಹೇಳಲಿಕ್ಕಾಗುತ್ತಿಲ್ಲ. ಒಟ್ಟಾರೆ ನವೆಂಬರ್‌ 1ರ ಕರ್ನಾಟಕ ರಾಜ್ಯೋತ್ಸವ ಹೊತ್ತಿಗೆ ವಿಮಾನ ಹಾರಾಟಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

ಆರ್‌ಸಿ ಟ್ವಿಟ್
ವಿಮಾನ ಹಾರಾಟ ಶುರುವಾಗುವ ಸಂದರ್ಭ ತ್ರಿಪಕ್ಷೀಯ ಒಪ್ಪಂದವಾಗಬೇಕಿದೆ. ಜತೆಗೆ ಕೆಲವೊಂದು ಸಂಸ್ಥೆಗಳ ಅನುಮತಿ ದೊರೆಬೇಕಿದೆ. ಇವುಗಳೆನ್ನೆಲ್ಲ ಬೇಗ ಪೂರ್ಣಗೊಳಿಸಲಾಗುವುದು. ಉಡಾನ್‌ ಯೋಜನೆಯಡಿ ಈಗಾಗಲೇ ಕಲಬುರಗಿ ವಿಮಾನ ನಿಲ್ದಾಣ ಗುರುತಿಸಲಾಗಿದೆ. ಭಾರತೀಯ ವಿಮಾನಯಾನ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ಭದ್ರತೆ ವಿಭಾಗಕ್ಕೆ ಸಂಬಂಧಪಟ್ಟಂತೆ ನಿರ್ಧಾರವಾಗಬೇಕಿದೆ ಎಂದು ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್‌ ಸೋಮವಾರವಷ್ಟೇ ಟ್ವಿಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next