Advertisement

ನೀರಿನ ಟೆಂಡರ್‌ನಲ್ಲಿ ಗೋಲ್‌ಮಾಲ್‌

12:49 PM Mar 21, 2020 | Naveen |

ಕಲಬುರಗಿ: ಕಾಮಗಾರಿಗೆ ನಿಗದಿಪಡಿಸಲಾದ ಮೊತ್ತಕ್ಕೆ ಕಡಿಮೆ ಬಿಡ್‌ ಮಾಡಿದವರಿಗೆ ಟೆಂಡರ್‌ ಕೊಡುವುದು ನಿಯಮ. ಆದರೆ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಇಲಾಖೆಯಲ್ಲಿ ಟೆಂಡರ್‌ನಲ್ಲಿ ಪಾಲ್ಗೊಂಡವರಲ್ಲಿ ಕಡಿಮೆ ಮೊತ್ತದ ಕಾಮಗಾರಿಗೆ ದಾಖಲಿಸಿದವರನ್ನು ಬಿಟ್ಟು ಹೆಚ್ಚಿನ್‌ ಬಿಡ್‌ ಮಾಡಿದವರಿಗೆ ಕಾಮಗಾರಿ ನೀಡುವ ಮುಖಾಂತರ ಸರ್ಕಾರಕ್ಕೆ ಲಕ್ಷಾಂತರ ರೂ. ಹಾನಿ ಮಾಡಲಾಗಿದೆ.

Advertisement

ಇದು ಒಂದೆರಡು ಕಾಮಗಾರಿಗಳಲ್ಲಿ ಆಗದೇ ಹತ್ತಾರು ಕಾಮಗಾರಿಗಳಲ್ಲಿ ಆಗಿರುವುದನ್ನು ನೋಡಿದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಒಂದಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಅಫ‌ಜಲಪುರ ತಾಲೂಕಿನ ಗೊಬ್ಬುರ ಕೆ. ಗ್ರಾಮಕ್ಕೆ ರಾಷ್ಟ್ರೀಯ ಗ್ರಾಮೀಣ ನೀರು ಸರಬರಾಜು ಯೋಜನೆ ಅಡಿ 16 ಲಕ್ಷ ರೂ. ಕಾಮಗಾರಿಗೆ ಟೆಂಡರ್‌ ಕರೆಯಲಾಗಿತ್ತು. ಈ ಕಾಮಗಾರಿಗೆ 10 ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಿದ್ದರು.

ವಿಜಯಕುಮಾರ ಬಿರಾದಾರ ಎನ್ನುವರು (ಶೇ. 27.77 ಲೆಸ್‌) 11 ಲಕ್ಷ ರೂ. ಮೊತ್ತದ ಟೆಂಡರ್‌ ಹಾಕಿದ್ದರು. ಅದೇ ರೀತಿ ಮಂಜೂರ್‌ ಅಹ್ಮದ ಪಟೇಲ್‌ ಶೇ. 22.49, ಸುಭಾಶ್ಚಂದ್ರ ಎನ್ನುವರು ಶೇ.16.40
ಲೆಸ್‌, ಅಶೋಕ ಸಾಲಿಮಠ ಶೇ. 15.32 ಲೆಸ್‌, ಸಿದ್ರಾಮ ಎನ್ನುವರು (ಶೇ. 12.18 ಲೆಸ್‌ ) 13.40 ಲಕ್ಷ ರೂ. ಮೊತ್ತಕ್ಕೆ ಟೆಂಡರ್‌ ಹಾಕಿದ್ದರೆ ಮಹಾಂತಗೌಡ ಎನ್ನುವರು 15.15 ಲಕ್ಷ ರೂ. (ಶೇ. 0.69 ಲೆಸ್‌) ಗೆ ಹಾಕಿದ್ದಾರೆ. ಅಂದರೆ ನಿಯಮಾವಳಿ ಪ್ರಕಾರ ವಿಜಯಕುಮಾರ ಬಿದಾರಾರ ಎನ್ನುವರಿಗೆ ಕಾಮಗಾರಿ ಟೆಂಡರ್‌ ಆಗಬೇಕು. ಆದರೆ ಮಹಾಂತಗೌಡ ಎನ್ನುವರಿಗೆ ಆಗಿದೆ.

ಚೌಡಾಪುರ ತಾಂಡಾದ 25 ಲಕ್ಷ ರೂ. ವೆಚ್ಚದ ಕುಡಿಯುವ ನೀರಿನ ಕಾಮಗಾರಿ ಟೆಂಡರ್‌ದಲ್ಲೂ ಇದೇ ರೀತಿಯಾಗಿದೆ. (ಶೇ. 19.46 ಲೆಸ್‌) 18 ಲಕ್ಷ ರೂ. ಮೊತ್ತದ ಟೆಂಡರ್‌ ಹಾಕಿರುವ ಬದಲು 21 ಲಕ್ಷ ರೂ. ಟೆಂಡರ್‌ ಹಾಕಿರುವ ಶಾಂತಕುಮಾರ ಹೊಸಮನಿ ಎನ್ನುವರಿಗೆ ಆಗಿದೆ. ಡಿಎಸ್‌ಆರ್‌ ದರಕ್ಕೆ ಅನುಗುಣವಾಗಿ ಟೆಂಡರ್‌ ಅಂತಿಮಗೊಳಿಸಲಾಗಿದೆ ಎಂದು ಅಧಿಕಾರಿಗಳು ಸಬೂಬು ಹೇಳಬಹುದಾದರೆ ಟೆಂಡರ್‌ ಏಕೆ ಕರೆಯಬೇಕು. ಅಲ್ಲದೇ ಜಿಲ್ಲಾ ದರ ಪಟ್ಟಿ (ಡಿಸ್ಟಿಕ್‌ ಶೆಡ್ನೂಲ್‌ ರೇಟ್‌) ನಿಯಮವನ್ನು ಪಾಲಿಸಿಲ್ಲ. ಹೀಗೆ ಜಿಲ್ಲೆಯಾದ್ಯಂತ 25ಕ್ಕೂ ಹೆಚ್ಚು ಕಾಮಗಾರಿಗಳಲ್ಲಿ ಟೆಂಡರ್‌ ನಿಯಮ ಉಲ್ಲಂ ಸಿ ಸರ್ಕಾರಕ್ಕೆ ಲಕ್ಷಾಂತರ ರೂ. ಹಾನಿ ಮಾಡಲಾಗಿದೆ.

Advertisement

ಕಾಮಗಾರಿ ಮಾಡದೇ ಬಿಲ್‌: ಟೆಂಡರ್‌ ಕಾಮಗಾರಿಗಳಲ್ಲಿ ಈ ತೆರವಾದರೆ, ಇನ್ನು ಸಣ್ಣ ಪುಟ್ಟ ಒಂದು ಲಕ್ಷ ಹಾಗೂ ಎರಡು ಲಕ್ಷ ರೂ. ಮೊತ್ತದ ಕುಡಿಯುವ ಕಾಮಗಾರಿಗಳಲ್ಲಂತೂ ಕಾಮಗಾರಿ ನಡೆಸದೇ ಬಿಲ್‌ಗ‌ಳನ್ನು ಎತ್ತಿ ಹಾಕಲಾಗಿದೆ.

ಮನೆಗಳ ಹಂಚಿಕೆಯಲ್ಲೂ ಗೋಲ್‌ಮಾಲ್‌: ಅಫ‌ಜಲಪುರ ತಾಲೂಕಿನ ಮನೆಗಳ ಹಂಚಿಕೆಯಲ್ಲೂ ಗೋಲ್‌ಮಾಲ್‌ ನಡೆದಿರುವುದು ಹಲವು ನಿದರ್ಶನಗಳೇ ಸ್ಪಷ್ಟಪಡಿಸುತ್ತಿವೆ. ಮನೆ ಅಡಿಪಾಯ ಹಾಕಿರುವುದು, ಮೇಲ್ಛಾವಣಿ ಹಾಗೂ ಮನೆ ಪೂರ್ಣಗೊಂಡಿರುವ ದಾಖಲೆಗಳಲ್ಲಿ ಒಂದೇ ದಿನಾಂಕವಿದೆ. ಒಮ್ಮೆಲೆ 1.74 ಲಕ್ಷ ರೂ. ಫ‌ಲಾನುಭವಿ ಖಾತೆಗೆ ಜಮಾ ಮಾಡಲಾಗಿದೆ.

ಒಂದೇ ಮನೆಯಲ್ಲಿ ಅಂದರೆ ಪತಿ ಹಾಗೂ ಪತ್ನಿ ಇಬ್ಬರ ಹೆಸರಿನಲ್ಲೂ ಮನೆ ಮಂಜೂರಾಗಿವೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮನೆ ಹಂಚಿಕೆ ಮಾಡಿಕೊಳ್ಳಬಾರದು ಎನ್ನುವ ನಿಯಮವಿದೆ. ಆದರೆ ಅಫ‌ಜಲಪುರ ತಾಲೂಕಿನಲ್ಲಿ ಎಲ್ಲವನ್ನು ಗಾಳಿಗೆ ತೂರಲಾಗಿದೆ. ಇದರಲ್ಲಿ ತಾಲೂಕು ಪಂಚಾಯತಿ ಇಒ ಹಾಗೂ ಇತರರ ಕೈವಾಡವಿಲ್ಲದೇ ಈ ರೀತಿ ಆಗಲು ಸಾಧ್ಯವಿಲ್ಲ ಎನ್ನುವುದು ಕೆಲವರ ಆರೋಪ.

ಈ ಹಿಂದೆಯೂ ನಡೆದಿತ್ತು: ಅಫ‌ಜಲಪುರ ತಾಲೂಕಿನ ಭೈರಾಮಡಗಿ ತಾಂಡಾಕ್ಕೆ ನೀರು ಪೂರೈಸುವ ಕಾಮಗಾರಿ ಮಾಡಲಾಗಿದೆ ಎಂದು ಐದು ವರ್ಷಗಳ ಹಿಂದೆ 33.43 ಲಕ್ಷ ರೂ. ಲಪಟಾಯಿಸಲಾಗಿತ್ತು. ಆಗ “ಉದಯವಾಣಿ’ ಪತ್ರಿಕೆಯಲ್ಲಿ ವರದಿಯಾದ ನಂತರ ಆಗಿನ ಜಿಲ್ಲಾ ಪಂಚಾಯತಿ ಸಿಇಒ ಆಗಿದ್ದ ಅನಿರುದ್ಧ ಶ್ರವಣ ಅವರು ತನಿಖೆ ಕೈಗೊಂಡು, ಸಹಾಯಕ ಅಭಿಯಂತರ ಹಾಗೂ ಕಿರಿಯ ಜ್ಯೂನಿಯರ್‌ ಅವರನ್ನು ಸೇವೆಯಿಂದ ಅಮಾನತು ಮಾಡಿದ್ದರು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಈಗಲೂ ಅದೇ ನಿಟ್ಟಿನಲ್ಲಿ ಗೋಲ್‌ ಮಾಲ್‌ ನಡೆದಿದೆ.

ಗ್ರಾಮೀಣ ಕುಡಿಯುವ ನೀರು -ನೈರ್ಮಲ್ಯ ವಿಭಾಗದಿಂದ ಮಂಜೂರಾಗಿರುವ ಕಾಮಗಾರಿಗಳ ಪಟ್ಟಿ, ಟೆಂಡರ್‌ ಕಾಮಗಾರಿ ಯಾವ ದಿನಾಂಕದಂದು ಕರೆಯಲಾಗಿದೆ. ಟೆಂಡರ್‌ನಲ್ಲಿ ಭಾಗವಹಿಸಿದ ಗುತ್ತಿಗೆದಾರರು ಮಾಹಿತಿ ನೀಡುವಂತೆ, ಮಂಜೂರಾದ ಕಾಮಗಾರಿಗಳ ವಿವರವಾದ ಪ್ರತಿ ಒದಗಿಸುವಂತೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ಧು ಸಿರಸಗಿ ಅವರು ಒಂದೂವರೆ ತಿಂಗಳ ಹಿಂದೆಯೇ ಪತ್ರ ಬರೆದಿದ್ದರೂ ಅಧಿಕಾರಿಗಳು ಮಾಹಿತಿಯನ್ನೇ ಕೊಟ್ಟಿಲ್ಲ. ಇದು ಕಾಮಗಾರಿಯಲ್ಲಿ ಗೋಲ್‌
ಮಾಲ್‌ ಆಗಿರುವುದು ನಿರೂಪಿಸುತ್ತದೆ.

ಕಲಬುರಗಿ: ಕುಡಿಯುವ ನೀರಿನ ಯೋಜನೆ ಕಾಮಗಾರಿಗಳಲ್ಲಿ ಟೆಂಡರ್‌ ನಿಯಮ ಉಲ್ಲಂಘಿಸಿರುವ ಆರೋಪ ಬಂದಿರುವ ಹಿನ್ನೆಲೆಯಲ್ಲಿ ವಿವರಣೆ ಕೇಳೆ ನೋಟಿಸ್‌ ನೀಡಲಾಗುವುದು. ಒಂದು ವೇಳೆ ಟೆಂಡರ್‌ ನಿಯಮ ಉಲ್ಲಂಘನೆ ಆಗಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಒಟ್ಟಾರೆ ಈ ಕುರಿತು ಪರಿಶೀಲನೆ ಮಾಡಲಾಗುವುದು.
ಡಾ| ರಾಜಾ ಪಿ., ಜಿ.ಪಂ ಸಿಇಒ

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next