Advertisement

ಸೋಂಕು ಹರಡುವ ಭೀತಿಯಲ್ಲಿ ನೀರಿನ ಸಮಸ್ಯೆ ಗೌಣ

05:49 PM Apr 07, 2020 | Naveen |

ಕಲಬುರಗಿ: ಪ್ರಸ್ತುತ ಬೇಸಿಗೆ ಸಮಯದಲ್ಲೀಗ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆಯೂ ಕಂಡು ಬರುತ್ತಿದೆ. ಹಲವು ಹಳ್ಳಿಗಳಲ್ಲಿ ಜನರು ಕೊಡ ಹಿಡಿದುಕೊಂಡು ನೀರಿಗಾಗಿ ಅಲೆಯುತ್ತಿರುವುದು ಕಂಡುಬರುತ್ತಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಗೌಣವಾಗಿ ಬಿಟ್ಟಿದೆ.
ಜಿಲ್ಲೆಯಲ್ಲೀಗ ಆರು ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ಹಾಗೂ 11 ಹಳ್ಳಿಗಳಲ್ಲಿ ಸಾರ್ವಜನಿಕರ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆಗೆ ತುತ್ತಾಗುವ 90 ಹಳ್ಳಿಗಳನ್ನು ಜಿಲ್ಲಾಡಳಿತ ಗುರುತಿಸಿದೆ.

Advertisement

ವರ್ಷಂಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಹೆಚ್ಚು ಕಂಡು ಬರುತ್ತಿತ್ತು. ಈ ವರ್ಷ ಕಳೆದ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಸ್ವಲ್ಪ ಉತ್ತಮ ಎನ್ನಬಹುದಾದ ಮಳೆಯಾಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರ ನಿಟ್ಟಿನಲ್ಲಿ ಉಲ್ಬಣವಾಗಿಲ್ಲ ಎನ್ನುವುದಾದರೂ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿರುವುದು ಕಂಡು ಬರುತ್ತಿದೆ.

ಪ್ರತಿವರ್ಷ ಕುಡಿಯುವ ನೀರಿಗೆ ಕೋಟ್ಯಂತರ ರೂ. ಖರ್ಚು ಮಾಡಿದರೂ ಇಂದಿನ ದಿನದವರೆಗೂ ಶಾಶ್ವತವಾದ ಕ್ರಮ ಕಾರ್ಯಾನುಷ್ಠಾನಕ್ಕೆ ಬಾರದಿರುವುದು ವಿಪರ್ಯಾಸವಾಗಿದೆ. ನೀರಿನಂತೆ ಹಣ
ಖರ್ಚಾಗುತ್ತಿದೆಯೇ ವಿನಃ ನೀರು ಮಾತ್ರ ಸಮಪರ್ಕಕವಾಗಿ ಪೂರೈಕೆಯಾಗುತ್ತಿಲ್ಲ.

ಕಾಗದದಲ್ಲೇ ಕಾಮಗಾರಿ ಪೂರ್ಣ: ಕೊರೊನಾ ಭೀತಿ ನಡುವೆ ಅಧಿಕಾರಿಗಳು-ಗುತ್ತಿಗೆದಾರರು ಒಗ್ಗೂಡಿ ಕೆಲವು ಸಣ್ಣ ಪುಟ್ಟ ಕಾಮಗಾರಿಗಳನ್ನು ಕಾಗದದಲ್ಲೇ ಪೂರ್ಣಗೊಳಿಸಿದ್ದಾರೆ. ಬೋರವೆಲ್‌ ಕೊರೆಯುವುದು ಹಾಗೂ ನೀರು ಪೂರೈಕೆಯ ಕೆಲವು ಕಾಮಗಾರಿಗಳನ್ನು ಒಪ್ಪಂದ ಮಾಡಿಕೊಂಡು ಬಿಲ್‌ ಮಾಡಲಾಗುತ್ತಿದೆ. ದೊಡ್ಡ ಕುಡಿಯುವ ನೀರಿನ ಕಾಮಗಾರಿಗಳ ಟೆಂಡರ್‌ ನೀಡಿಕೆಯಲ್ಲಿ ಗೋಲ್‌ಮಾಲ್‌ ಆಗಿದ್ದು, ಕಡಿಮೆ ಮೊತ್ತದ ಬಿಡ್‌ ಮಾಡಿದ ಗುತ್ತಿಗೆದಾರನಿಗೆ ಕಾಮಗಾರಿ ನೀಡೋದನ್ನು ಬಿಟ್ಟು ಶಾಸಕರು ಹೇಳಿದ ಗುತ್ತಿಗೆದಾರನಿಗೆ ಕಾಮಗಾರಿ ನೀಡುವ ಮುಖಾಂತರ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕೇಳಿದರೆ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಒಟ್ಟಾರೆ ಕುಡಿಯುವ ನೀರಿನ ಕಾಮಗಾರಿಗಳಲ್ಲಂತೂ ಗೋಲ್‌ಮಾಲ್‌ ನಡೆದಿರುವುದು ಸ್ಪಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next