Advertisement

ಮತ ಚಲಾಯಿಸಲು ಪ್ರೇರೇಪಿಸಿ: ಡಾ|ರಾಜಾ ಪಿ

10:49 AM Apr 22, 2019 | Team Udayavani |

ಕಲಬುರಗಿ: ಮಕ್ಕಳೇ ನಿಮ್ಮ ಪೋಷಕರನ್ನು ಮತದಾನ ಮಾಡಲು ಕಳಿಸಿಕೊಡುವ ಜವಾಬ್ದಾರಿ ನಿಮ್ಮದು. ನೀವೇ ಅವರಿಗೆ ಡಿಸಿ, ಎಸಿ, ಎಸ್‌ಪಿ ಎಲ್ಲಾ. ಅವರು ನಿಮ್ಮ ಆದೇಶ ಪಾಲಿಸುತ್ತಾರೆ ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಸಿಇಒ ಡಾ| ರಾಜಾ ಪಿ ತಿಳಿಸಿದರು.

Advertisement

ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಹಾಗೂ ವಿವೇಕಾನಂದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.

ಏ.23ರಂದು ತಮ್ಮ ಹಾಗೂ ನೆರೆಹೊರೆಯ ಮನೆಗಳಲ್ಲಿರುವ ಎಲ್ಲ ಮತದಾರರ ಮನವೊಲಿಸಿ ಮತಗಟ್ಟೆಗೆ ಕಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಪ್ರಜಾಪ್ರಭುತ್ವ ಗೆಲ್ಲಬೇಕಾದರೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತ ಹಾಕಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಬಳಿಕ ಮಕ್ಕಳ ಕೈಯಿಂದ ಬೈಕ್‌ ಸವಾರ್‌ಗೆ, ಆಟೋ ಸವಾರರಿಗೆ, ಪಾದಚಾರಿಗಳಿಗೆ ಗುಲಾಬಿ ಹೂ ನೀಡಿ ಮತಹಾಕುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಅಂಕಲ್, ಆಂಟಿ ಏ.23ಕ್ಕೆ ಮರಿಬ್ಯಾಡ್ರಿ ತಪ್ಪದ ಓಟ್ ಹಾಕ್ರಿ ಎಂದು ಮಕ್ಕಳು ಹೇಳಿದಾಗ ನಗುತ್ತಾ ಗುಲಾಬಿ ಸ್ವೀಕರಿಸಿದ ಸಾರ್ವಜನಿಕರು ಖಂಡಿತ ಮತ ಹಾಕುತ್ತೇವೆ ಎಂದು ಹೇಳಿ ತೆರಳುತ್ತಿದ್ದರು.

Advertisement

ಅಂಕಲ್, ಆಂಟಿ, ಮಮ್ಮಿ, ಡ್ಯಾಡಿ ತಪ್ಪದೇ ಓಟ್ ಮಾಡಿ ಎಂಬ ಘೋಷಣೆ ಸಾರ್ವಜನಿಕರ ಗಮನ ಸೆಳೆಯಿತು. ಮತ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ, ಮತದಾನ ನಿಮ್ಮ ಹಕ್ಕು, ಮಾರಿಕೊಳ್ಳಬೇಡಿ ಎಂಬ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳು, ಶಿಕ್ಷಕರು ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದರು.

7ನೇ ತರಗತಿ ವಿದ್ಯಾರ್ಥಿ ಆಕಾಶ ಮಾತನಾಡಿ, ರಜೆಯಿದೆ ಎಂದು ಯಾರೂ ಮನೆಯಲ್ಲಿ ಟಿ.ವಿ. ನೋಡುತ್ತಾ ಕಾಲಹರಣ ಮಾಡದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು. ನಮ್ಮ ಭವಿಷ್ಯ ನೀವು ನೀಡುವ ಮತಗಳಲ್ಲಿ ಅಡಗಿದೆ ಎಂದನು.

9ನೇ ತರಗತಿ ವಿದ್ಯಾರ್ಥಿನಿ ಸ್ನೇಹಾ ಮಾತನಾಡಿ, ಯಾರೂ ದುಡ್ಡಿಗಾಗಿ ಅಥವಾ ಬೇರೆ ಯಾವುದೇ ಆಮಿಷಕ್ಕೊಳಗಾಗದೇ ದೇಶದ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಅಮೂಲ್ಯ ಮತ ನೀಡಿ ಚುನಾವಣಾ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದಳು.ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next