Advertisement

ಮರಳಿನ ಟಿಪ್ಪರ್‌ಗೆ ಇಬ್ಬರು ಬಲಿ

09:58 AM Jul 15, 2019 | Naveen |

ಕಲಬುರಗಿ: ಮರಳು ಸಾಗಿಸುತ್ತಿದ್ದ ಟಿಪ್ಪರ್‌ ಹರಿದು ಇಬ್ಬರು ಬೈಕ್‌ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಜೇವರ್ಗಿ ರಸ್ತೆಯಲ್ಲಿರುವ ರಾಮ ಮಂದಿರ ವೃತ್ತದ ಸಮೀಪ ನಡೆದಿದೆ.

Advertisement

ವಿಜಯಪುರ ಜಿಲ್ಲೆಯ ಆಲಮೇಲದ ನಿವಾಸಿಗಳಾದ ಸೇವಾಲಾಲ ಭೀಮಶಾ ವಡ್ಡರ್‌ (41), ನಿಂಗಪ್ಪ ಸುಭಾಷ ಲೋಟೆ (32) ಮೃತಪಟ್ಟವರು. ನಗರದ ಶೋ ರೂಮ್‌ವೊಂದರಲ್ಲಿ ಹೊಸ ಬೈಕ್‌ ಖರೀದಿಸಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೊಸ ಬೈಕ್‌ ಮೇಲೆ ಇಬ್ಬರು ಊರಿಗೆ ಹಿಂದಿರುಗುತ್ತಿದ್ದರು.

ಈ ಸಂದರ್ಭದಲ್ಲಿ ಬೈಕ್‌ಗೆ ಟಿಪ್ಪರ್‌ ಗುದ್ದಿ, ಕೆಳಗಡೆ ಬಿದ್ದ ಇಬ್ಬರ ಮೇಲೂ ಹರಿದಿದೆ. ಪರಿಣಾಮ ಚಕ್ರದಡಿ ಸಿಲುಕಿದ ಇಬ್ಬರ ದೇಹಗಳು ನಜ್ಜುಗುಜ್ಜುಗೊಂಡಿವೆ. ಬೈಕ್‌ ಕೂಡ ಟಿಪ್ಪರ್‌ನ ಚಕ್ರಕ್ಕೆ ಸಿಲುಕಿ ಅಪ್ಪಚ್ಚಿಯಾಗಿದೆ. ಘಟನಾ ಸ್ಥಳದಲ್ಲಿ ಜನ ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಇದರಿಂದ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ವಿಷಯ ತಿಳಿದ ತಕ್ಷಣವೇ ಸಂಚಾರಿ ಪೊಲೀಸ್‌ ಠಾಣೆ-2ರ ಇನ್ಸ್‌ಪೆಕ್ಟರ್‌ ಮಹಾದೇವ ಪಂಚಮುಖೀ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ನಂತರ ಟಿಪ್ಪರ್‌ನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸಂಚಾರಿ ಪೊಲೀಸ್‌ ಠಾಣೆ-2ರ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ನದಿ ಸಿನ್ನೂರ ಘಟನೆ ನೆನಪು: ಕಳೆದ ಜುಲೈ 8ರಂದು ತಾಲೂಕಿನ ನದಿ ಸಿನ್ನೂರ ಬಳಿ ನಡೆದ ರಸ್ತೆ ಅಪಘಾತವನ್ನು ಈ ಘಟನೆ ನೆನಪಿಸಿದೆ. ಅಂದು ಬೈಕ್‌ ಮೇಲೆ ತೆರಳುತ್ತಿದ್ದವರಿಗೆ ಟಿಪ್ಪರ್‌ ಡಿಕ್ಕಿ ಹೊಡೆದಿತ್ತು. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಮತ್ತೂಬ್ಬ ಗಂಭೀರವಾಗಿ ಗಾಯಗೊಂಡಿದ್ದ. ಒಬ್ಬನ ಕೈ ತುಂಡಾಗಿ ರಸ್ತೆ ಮೇಲೆ ಬಿದ್ದಿತ್ತು.

ಮರಳಿನ ಆರ್ಭಟಕ್ಕೆ ಅಂಕುಶ ಯಾವಾಗ?
ಕಳೆದ ಎರಡುವರೆ ತಿಂಗಳಿನಿಂದ ಮರಳಿನ ಟಿಪ್ಪರ್‌ಗಳ ಹಾವಳಿ ವ್ಯಾಪಕವಾಗಿದ್ದು, ಒಂದಲ್ಲ ಒಂದು ದಿನ ಅಪಘಾತಗಳು ಸಂಭವಿಸುತ್ತಿವೆ. ಮರಳಿನ ಟಿಪ್ಪರ್‌ಗಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಕೆಲವೊಂದು ಅಪಘಾತಗಳಲ್ಲಿ ಮರಳಿನ ಟಿಪ್ಪರ್‌ಗಳಿಂದ ಅಪಘಾತಗಳಾಗಿದ್ದರೂ ಅಪರಿಚಿತ ವಾಹನಗಳಿಂದ ಡಿಕ್ಕಿ ಎಂದು ನಮೂದಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ತೀವ್ರ ನಿಗಾ ವಹಿಸಬೇಕಿದ್ದ ಪೊಲೀಸ್‌ ಇಲಾಖೆ ನಿರ್ಲಕ್ಷ್ಯ ತಾಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಈಗಲೇ ಕಡಿವಾಣ ಹಾಕದಿದ್ದರೇ ಮುಂದಿನ ದಿನಗಳಲ್ಲಿ ದಿನನಿತ್ಯ ಅಪಘಾತ ನಡೆದು, ಅಮಾಯಕರು ಬಲಿಯಾಗುವ ಆತಂಕ ಹೆಚ್ಚಿದೆ. ಮಳೆಯಿಲ್ಲದೇ ಮೊದಲೇ ರೈತರು ಕಂಗಾಲಾಗಿರುವಾಗ ಹಗಲಿರುಳು ಎನ್ನದೇ ಮರಳಿನ ಲಾರಿಗಳು ರೈತರ ಹೊಲಗಳ ಮೂಲಕ ನದಿ ಪಾತ್ರಕ್ಕೆ ನುಗ್ಗಿ ಅವ್ಯಾಹತವಾಗಿ ಮರಳು ಲೂಟಿ ಮಾಡುತ್ತಿವೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next