ಕಲಬುರಗಿ: ಅಭಿವೃದ್ಧಿಗೆ ಪೂರಕವಾದ ಕ್ರಿಯಾ ಯೋಜನೆ ಸಿದ್ಧಪಡಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮಲ್ಲಿರುವ ದತ್ತಾಂಶ ಹಾಗೂ ಮಾಹಿತಿಗಳನ್ನು ಸಂಗ್ರಹಿಸಬೇಕು. ನೈಸರ್ಗಿಕ ಸಂಪನ್ಮೂಲ ದತ್ತಾಂಶ ನಿರ್ವಹಣಾ ಕೇಂದ್ರದ ಮೂಲಕ ಜಿಯೋ ಸ್ಪೇಶಿಯಲ್ ತಂತ್ರಜ್ಞಾನ ಬಳಸಿ ನಕ್ಷೆ ತಯಾರಿಸಿ ಕ್ರಿಯಾ ಯೋಜನೆ ರೂಪಿಸಬೇಕೆಂದು ಜಿಲ್ಲಾ ಯೋಜನಾ ವಿಭಾಗದ ನಿರ್ದೇಶಕ ಕೆ. ಗುರುರಾಜರಾವ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ 2019-20ನೇ ಸಾಲಿನ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಮಾಹಿತಿ ಬಳಸಿಕೊಂಡು ‘ಜಿಯೋ- ಸ್ಪೇಶಿಯಲ್’ ಆಗಿ ಕ್ರಿಯಾ ಯೋಜನೆ ರೂಪಿಸಲು ಕಲಬುರಗಿ, ಯಾದಗಿರಿ, ಬೀದರ್ ಹಾಗೂ ಕೊಪ್ಪಳ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾಮಂಡಳಿ ಹಾಗೂ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
2019-20ನೇ ಸಾಲಿಗೆ ಆಯಾ ಇಲಾಖೆಗಳು ಕ್ರಿಯಾ ಯೋಜನೆಯ ಪ್ರಸ್ತಾವನೆಯ ಅಂಕಿ-ಅಂಶ ಹಾಗೂ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ| ಯು.ಟಿ. ವಿಜಯ ಮಾತನಾಡಿ, ಅಧಿಕಾರಿಗಳು ದತ್ತಾಂಶಗಳನ್ನು ರಚಿಸಿ ಇಲಾಖೆಯಿಂದ ಮಾಹಿತಿ ಪಡೆದು, ನಕ್ಷೆ ರೂಪಿಸಿದರೆ ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ದೊರೆಯುತ್ತದೆ. ಮೂಲಭೂತ ಸೌಲಭ್ಯ, ಜನಸಂಖ್ಯೆ, ಶಾಲೆ, ಜಮೀನು, ಪಾಳುಬಿದ್ದ ಭೂಮಿ, ನೀರಿನ ಮೂಲಗಳು..ಹೀಗೆ ಅನೇಕ ವಿಷಯಗಳಿಗೆ ಸಂಬಂಧಪಟ್ಟಂತೆ ನಕ್ಷೆ ರಚಿಸಬಹುದು ಎಂದರು.
ರಾಜ್ಯದಲ್ಲಿ ಸುಮಾರು 14 ಸಾವಿರದಷ್ಟು ಕಲ್ಯಾಣಿ, ಕುಂಟೆ, ಗೋಗಟ್ಟೆ ಮುಂತಾದ ಜಲ ಮೂಲಗಳು ಇವೆ. ಈ ಕುರಿತು ಭೌಗೋಳಿಕ ಮಾಹಿತಿ ವ್ಯವಸ್ಥೆಯ ತಂತ್ರಜ್ಞಾನ ಬಳಸಿಕೊಂಡು ಇವುಗಳ ಸ್ಥಳ ಪರಿಶೀಲನೆ ಮಾಡಬೇಕು. ವೈಜ್ಞಾನಿಕವಾಗಿ ಭೌತಿಕ ಮತ್ತು ಜಲಿಯಾ ಸ್ಥಿತಿ-ಗತಿಗಳನ್ನು ಅಧ್ಯಯನ ಮಾಡಿ, ಇವುಗಳ ನೀರಿನ ಸಾಂಧ್ರತೆ, ಮಣ್ಣು, ಹೂಳಿನ ಪರಿಸ್ಥಿತಿಗಳನ್ನು ಸಮಗ್ರವಾಗಿ ವಿಶ್ಲೇಷಣೆ ಮಾಡಬೇಕು. ಪುನರುಜ್ಜೀವನ ಮಾಡಲು ಕೈಗೊಳ್ಳಬೇಕಾದ ಚಟುವಟಿಕೆಗಳು ಹಾಗೂ ಅಂದಾಜು ವೆಚ್ಚ ಮುಂತಾದ ವೈಜ್ಞಾನಿಕ ಆಂಶಗಳನ್ನು ಒಳಗೊಂಡ ವಿಸ್ತೃತವಾದ ವರದಿ ತಯಾರಿಸಬೇಕೆಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಗಳಿಗೆ ಈ ವರದಿ ಸಲ್ಲಿಸಿ, ಸರ್ಕಾರದ ಮಹತ್ವದ ಯೋಜನೆಗಳಾದ ಜಲಾಮೃತ, ಉದ್ಯೋಗ ಖಾತ್ರಿ ಯೋಜನೆ ಹಾಗೂ ಜಲಶಕ್ತಿ ಅಭಿಯಾನ ಯೋಜನೆಯಡಿಯಲ್ಲಿ ಇವುಗಳನ್ನು ಪುನರುಜ್ಜೀವನ ಮಾಡಬಹುದೆಂದು ತಿಳಿಸಿದರು. ಜಿಲ್ಲೆಯಲ್ಲಿರುವ ಎನ್‌ಆರ್‌ಡಿಎಂಎಸ್ ಕಚೇರಿ ನೆರವಿನಿಂದ ಜಿಐಎಸ್ ತಂತ್ರಜ್ಞಾನದಿಂದ ನಕ್ಷೆ ಹಾಗೂ ವೈಜ್ಞಾನಿಕ ವರದಿಗಳನ್ನು ತಯಾರಿಸಿಕೊಳ್ಳಲು ಅವರು ಸೂಚಿಸಿದರು.
ರಾಜ್ಯ ದೂರ ಸಂವೇದಿ ಕಲಬುರಗಿ ಕೇಂದ್ರದ ಹಿರಿಯ ಯೋಜನಾ ವಿಜ್ಞಾನಿ ಡಾ| ರಾಜಣ್ಣ ಮಾತನಾಡಿ, ಜಿಲ್ಲಾ ಮಟ್ಟದ ಯೋಜನೆಗಳನ್ನು ರೂಪಿಸುವಾಗ ಅಂಕಿ-ಅಂಶಗಳು ಮತ್ತು ದೂರ ಸಂವೇದಿ ಉಪಗ್ರಹಗಳ ಮಾಹಿತಿಯನ್ನು ಬಳಸಿಕೊಳ್ಳಲು ಅಧಿಕಾರಿಗಳಿಗೆ ಕರೆ ನೀಡಿದರು.
ಕಲಬುರಗಿ ಜಿಪಂ ಮುಖ್ಯ ಯೋಜನಾ ಅಧಿಕಾರಿ ಪ್ರವೀಣ ಪ್ರಿಯಾ ಡೇವಿಡ್, ಬೀದರ್ ಜಿ.ಪಂ. ಮುಖ್ಯ ಯೋಜನಾ ಅಧಿಕಾರಿಗಳಾದ ಕಿಶೋರ್ ಹಾಗೂ ಕಲಬುರಗಿ, ಯಾದಗಿರಿ, ಬೀದರ್, ಕೊಪ್ಪಳ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.