Advertisement

ಆನ್‌ಲೈನ್‌ನಲ್ಲಿ ಪಿಎಆರ್‌ ಸಲ್ಲಿಕೆ ಕಡ್ಡಾಯ

12:23 PM Jul 17, 2019 | Naveen |

ಕಲಬುರಗಿ: ಪ್ರತಿ ವರ್ಷ ರಾಜ್ಯ ಸರ್ಕಾರಿ ನೌಕರರು, ಅಧಿಕಾರಿಗಳು ಸಲ್ಲಿಸಲಿರುವ ಕಾರ್ಯನಿರ್ವಹಣಾ ವರದಿ (ಗೌಪ್ಯ ವರದಿ)ಯನ್ನು ಇನ್ಮುಂದೆ ಆನ್‌ಲೈನ್‌ನಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕಾಗಿದ್ದು, ಈ ನೂತನ ಕಾರ್ಯನಿರ್ವಹಣಾ ವರದಿಗೆ ಇನ್ನಷ್ಟು ಮಹತ್ವ ಬರಲಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಹೇಳಿದರು.

Advertisement

ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಮೈಸೂರು ಆಡಳಿತ ತರಬೇತಿ ಸಂಸ್ಥೆ ಸಹಯೋಗದಲ್ಲಿ ಜಿಲ್ಲೆಯ ‘ಎ’ ವೃಂದದ ಅಧಿಕಾರಿಗಳಿಗೆ ವಿದ್ಯುನ್ಮಾನ ಕಾರ್ಯನಿರ್ವಹಣಾ ವರದಿ ತಂತ್ರಾಂಶ ಮೂಲಕ ದಾಖಲಿಸುವ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯುನ್ಮಾನ ಕಾರ್ಯನಿರ್ವಹಣಾ ವರದಿ ಆಧಾರಿಸಿ ಬಡ್ತಿ, ಬೇರೆ ಬೇರೆ ಉದ್ಯೋಗಗಳು ದೊರೆಯಲಿವೆ. ಹಾಗಾಗಿ ಆನ್‌ಲೈನ್‌ನಲ್ಲಿ ವರದಿ ಭರ್ತಿ ಮಾಡುವಾಗ ಜಾಗರೂಕತೆ ಇರಬೇಕು. ಯಾವ ಅಧಿಕಾರಿಯೂ ಈ ಬಗ್ಗೆ ಹಗುರವಾಗಿ ಪರಿಗಣಿಸಬಾರದು ಎಂದ ಹೇಳಿದರು.

ಈಗಾಗಲೇ 5 ವರ್ಷದ ಹಿಂದೆಯೇ ಕೇಂದ್ರ ಸಿಬ್ಬಂದಿ ತರಬೇತಿ ಇಲಾಖೆ ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್‌ ಸೇವೆ ಮುಂತಾದ ಸೇವಾ ಅಧಿಕಾರಿಗಳ ಕಾರ್ಯ ನಿರ್ವಹಣಾ ವರದಿಯನ್ನು ಆನ್‌ ಲೈನ್‌(ವಿದ್ಯುನ್ಮಾನ)ನಲ್ಲಿ ತುಂಬುವುದನ್ನು ಜಾರಿಗೆ ತಂದಿದ್ದು, ಯಶ ಕಂಡಿದೆ ಎಂದು ಹೇಳಿದರು.

ಆನ್‌ಲೈನ್‌ನಲ್ಲಿ ಕಾರ್ಯ ನಿರ್ವಹಣಾ ವರದಿ ತುಂಬುವಾಗ ಮೊದಲು ಆಯಾ ಅಧಿಕಾರಿ, ನೌಕರರು ಒಂದು ವರ್ಷದ ಅವಧಿಯಲ್ಲಿ ಗುರಿ, ಸಾಧನೆ ಮುಂತಾದವುಗಳನ್ನು ಸ್ವಯಂ ಮೌಲ್ಯಮಾಪನ ಮಾಡಿ, ವರದಿ ಮಾಡುವ ಪ್ರಾಧಿಕಾರಕ್ಕೆ (ರಿಪೋರ್ಟಿಂಗ್‌ ಅಥಾರಿಟಿ) ಸಲ್ಲಿಸಬೇಕು. ನಂತರ ವರದಿ ಮಾಡುವ ಪ್ರಾಧಿಕಾರ (ಪುನರ್‌ ಅವಲೋಕನ ಮಾಡುವ ಪ್ರಾಧಿಕಾರಕ್ಕೆ( ರಿವ್ಯೂ ಅಥಾರಿಟಿ) ಸಲ್ಲಿಸಬೇಕು. ಅಂತಿಮವಾಗಿ ಅಂಗೀಕರಿಸುವ ಪ್ರಾಧಿಕಾರದ ಸಹಿ ಹಾಕಲಿದೆ ಎಂದು ಹೇಳಿದರು.

Advertisement

ಮೊದಲು ನಿಗದಿತ ಅವಧಿಯಲ್ಲಿ ಕಾರ್ಯ ನಿರ್ವಹಣಾ ವರದಿ ಸಲ್ಲಿಸದಿದ್ದಲ್ಲಿ ವಿಶೇಷ ವರದಿ ಸ್ಪೇಷಲ್ ರಿಪೋರ್ಟಿಂಗ್‌ ಸಲ್ಲಿಸುವ ವ್ಯವಸ್ಥೆ ಇತ್ತು. ಆದರೆ ಮುಂದಿನ ದಿನಗಳಲ್ಲಿ ವಿಳಂಬ ಮಾಡಲು ಬರುವುದಿಲ್ಲ. ಆನ್‌ಲೈನ್‌ನಲ್ಲಿ ಸ್ಪೆಷಲ್ ರಿಪೋರ್ಟಿಂಗ್‌ಗೆ ಅವಕಾಶವೇ ಇರುವುದಿಲ್ಲ ಎಂದು ಹೇಳಿದರು.

ಅಧಿಕಾರಿಗಳಾಗಲೀ ಅಥವಾ ಪ್ರಾಧಿಕಾರಗಳಾಗಲೀ ಆನ್‌ಲೈನ್‌ನಲ್ಲಿ ನೀಡಿರುವ ಕೊನೆ ದಿನಾಂಕಕ್ಕಿಂತ ಮೊದಲೇ ವರದಿ ಸಲ್ಲಿಸಬೇಕು. ಯಾಕೆಂದರೆ ಕೊನೆ ಕ್ಷಣದಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡು ಸಮಸ್ಯೆಯಾಗಲಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಶರಣಪ್ಪ ಸತ್ಯಂಪೇಟ ಮಾತನಾಡಿ, ಪ್ರತಿಯೊಬ್ಬ ಅಧಿಕಾರಿ ತನ್ನ ಮೇಲಾಧಿಕಾರಿಗೆ ಕರ್ನಾಟಕ ನಾಗರಿಕ ಸೇವೆಗಳ ಕಾರ್ಯನಿರ್ವಹಣಾ ವರದಿ-2000 ಪ್ರಕಾರ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಕೆಲ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ವರದಿ ಸಲ್ಲಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಎನ್‌ಐಸಿ ಕೇಂದ್ರದ ಅಧಿಕಾರಿ ಸುಧಿಧೀಂದ್ರ ಅವಧಾನಿ ಮಾತನಾಡಿ, ರಾಜ್ಯದಲ್ಲಿ ಪ್ರಸಕ್ತ ಇರುವ ಕಾರ್ಯನಿರ್ವಾಹಣಾ ವರದಿಯನ್ನು ಇನ್ಮುಂದೆ ಆನ್‌ಲೈನನಲ್ಲಿ ತುಂಬಬೇಕಾಗುತ್ತದೆ. ಇದಕ್ಕೆ ಮುಖ್ಯವಾಗಿ ಎನ್‌ಐಸಿ ಇ-ಮೇಲ್ ಅಕೌಂಟ್ ಇರಬೇಕು.

ಯಾವ ಅಧಿಕಾರಿ ಕಾರ್ಯ ನಿರ್ವಹಣಾ ವರದಿ ತುಂಬಬೇಕೋ ಅವರು ಕಡ್ಡಾಯವಾಗಿ ಎನ್‌ಐಸಿ ಇ-ಮೇಲ್ ಅಕೌಂಟ್ ಹೊಂದಬೇಕು. ನಂತರ ಜಿಮೇಲ್ನಲ್ಲಿ ಲಾಗಿನ್‌ ಆಗಿ ವರದಿ ತುಂಬಬೇಕು ಎಂಬುದರ ಬಗ್ಗೆ ವಿವರಿಸಿದರು. ಒಂದು ಸಾರಿ ಸರ್ಕಾರಿ ಅಧಿಕಾರಿಗಳು, ಎನ್‌ಐಸಿ ಇ-ಮೇಲ್ ಅಕೌಂಟ್ ಪಡೆದರೆ ಮುಂದಿನ ದಿನಗಳಲ್ಲಿ ಬಹುಪಯೋಗಕ್ಕೆ ಬರಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸುಧೀಂದ್ರ ಅವಧಾನಿ ಅವರು ಪಿಪಿಟಿ ಪ್ರದರ್ಶನದ ಮೂಲಕ ಆನ್‌ಲೈನ್‌ ಕಾರ್ಯನಿರ್ವಹಣಾ ವರದಿ ಹೇಗೆ ತುಂಬಬೇಕು ಎನ್ನುವುದರ ಕುರಿತು ಮಾಹಿತಿ ನೀಡಿದರು. ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಅಂಬೋಜಿ ನಾಯ್‌ಕೋಡಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next