ಕಲಬುರಗಿ: ರೈತರು ತಾವು ಬೆಳೆದ ಹಣ್ಣು, ತರಕಾರಿಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ನಿಟ್ಟಿನಲ್ಲಿ ಮೊಬೈಲ್ ವೆಂಡಿಂಗ್ ವಾಹನವನ್ನು ರಾಜ್ಯ ತೋಟಗಾರಿಕೆ ಇಲಾಖೆ ಪರಿಚಯಿಸಿದೆ.
Advertisement
ಹಣ್ಣು ಮತ್ತು ತರಕಾರಿ ತಾಜಾತನ ಉಳಿಸಲು ವಿಶೇಷವಾಗಿ ವಾಹನ ಸಿದ್ಧಪಡಿಸಲಾಗಿದೆ. ಸಣ್ಣ ಮಾರಾಟ ಮಳಿಗೆ ರೂಪದಲ್ಲಿ ವಾಹನ ವಿನ್ಯಾಸಗೊಳಿಸಲಾಗಿದೆ.
Related Articles
Advertisement
ರೈತರು ಉತ್ಪನ್ನದ ತಾಜಾತನ ಉಳಿಸಲು ವಾಹನವು ನೀರು ಸಿಂಪರಣೆಯ ಕೂಲಿಂಗ್ ಚೇಂಬರ್ ಹೊಂದಿದೆ. ಗ್ರಾಹಕರ ಗಮನ ಸೆಳೆಯಲು ಮೈಕ್ ವ್ಯವಸ್ಥೆ ಅಳವಡಿಸಲಾಗಿದೆ. ಮಾರಾಟಕ್ಕೆ ಲಭ್ಯ ಇರುವ ಹಣ್ಣು, ತರಕಾರಿಗಳು ಹಾಗೂ ಅವುಗಳ ದರ ಪಟ್ಟಿ , ತೋಟಗಾರಿಕೆ ಬೆಳೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಎಲ್ಇಡಿ ಪರದೆ ಇದೆ.
ಸೋಲಾರ್ ಪವರ್ ಸಾಕು: ವಾಹನದಲ್ಲಿರುವ ಕೂಲಿಂಗ್ ಚೇಂಬರ್‌ನಲ್ಲಿ ಎರಡು ಟನ್‌ಗಳಷ್ಟು ತರಕಾರಿ ಹಾಗೂ ಹಣ್ಣು ಇಡಬಹುದಾಗಿದೆ. ವಾಹನದ ಎಡ ಮತ್ತು ಬಲ ಭಾಗಗಳಲ್ಲಿ 20 ಕೆಜಿ ಸಾಮರ್ಥ್ಯದ ತಲಾ 20 ಬುಟ್ಟಿಗಳನ್ನು ಜೋಡಿಸಲಾಗಿದೆ. ಬುಟ್ಟಿಯಲ್ಲಿರುವ ಉತ್ಪನ್ನ ಮತ್ತು ಗುಣಮಟ್ಟ ಸುಲಭವಾಗಿ ಗ್ರಾಹಕರು ನೋಡುವ ವ್ಯವಸ್ಥೆ ಮಾಡಲಾಗಿದೆ.
ಉತ್ಪನ್ನಗಳ ತಾಜಾತನ ಹಾಳಾಗದಂತೆ ನೋಡಿಕೊಳ್ಳಲು ನೀರು ಸಿಂಪಡಿಸುವ ಸ್ವಯಂ ಚಾಲಿತ ವ್ಯವಸ್ಯೆಯನ್ನೂ ವಾಹನ ಹೊಂದಿದೆ. ಇದರ ನಿರ್ವಹಣೆಗೆ ಹೆಚ್ಚುವರಿ ಇಂಧನ ವ್ಯಯಿಸುವ ಅವಶ್ಯಕತೆ ಇಲ್ಲ. ವಾಹನದ ಮೇಲ್ಭಾಗದಲ್ಲಿ ಸೋಲಾರ್ ಘಟಕ ಅಳವಡಿಸಲಾಗಿದೆ. ಇಡೀ ಕೂಲಿಂಗ್ ಚೇಂಬರ್ ಸೋಲಾರ್ ಪವರ್ ಮೇಲೆ ನಡೆಯುತ್ತಿದೆ.
ವಾಹನದ ಮತ್ತೂಂದು ವಿಶೇಷವೆಂದರೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದೆ. ವಾಹನ ಯಾವ ಪ್ರದೇಶದಲ್ಲಿ ವಾಹನ ಸಂಚರಿಸುತ್ತದೋ, ಆ ಪ್ರದೇಶದ ತಾಪಮಾನದ ಅನುಗುಣವಾಗಿ ಜಿಪಿಎಸ್ ಕಾರ್ಯ ನಿರ್ವಹಿಸುತ್ತದೆ. ಅಂದರೆ, ಅಲ್ಲಿನ ತಾಪಮಾನ ಗ್ರಹಿಸಿಯೇ ಉತ್ಪನ್ನಗಳ ಮೇಲೆ ನೀರು ಸಿಂಪರಣೆ ಆಗುತ್ತದೆ. ಇದು ವಾಹನದ ವಿಶೇಷತೆ ಮತ್ತು ಆಕರ್ಪಣೆಯಾಗಿದೆ. ಸಿಂಪರಣೆ ನೀರು ಸಂಗ್ರಹಿಸಲು ವಾಹನದ ಹಿಂಭಾಗದಲ್ಲಿ 20 ಲೀಟರ್ ಸಾಮರ್ಥ್ಯದ ಟ್ಯಾಂಕ್ ಅಳವಡಿಸಲಾಗಿದೆ.
ಸೋಲಾರ್ ಘಟಕವನ್ನು ಮೂರು ಗಂಟೆ ಚಾರ್ಜ್ ಮಾಡಿದರೆ, ಇಡೀ ಒಂದು ದಿನ ನಡೆಯುತ್ತಿದೆ. ಒಂದು ಸೋಲಾರ್ ಕೆಲಸ ಮಾಡದಿದ್ದಲ್ಲಿ ವಿದ್ಯುತ್ ಮೂಲಕ ಚಾರ್ಜ್ ಮಾಡಬಹುದಾಗಿದೆ.
ಮಧ್ಯವರ್ತಿಗಳ ಹಾವಳಿ ತಡೆಯುವುದು, ರೈತರಿಗೆ ಹಾಗೂ ಗ್ರಾಹಕರಿಗೆ ಸರಿಯಾದ ಬೆಲೆ ಸಿಗುವಂತೆ ಮಾಡುವುದು. ಹಣ್ಣು, ತರಕಾರಿ ಬೆಳೆಯುವ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸುವುದು ಈ ವಾಹನದ ಉದ್ದೇಶವಾಗಿದೆ ಎನ್ನುತ್ತಾರೆ ತೋಟಗಾರಿಕೆ ಅಧಿಕಾರಿಗಳು.