Advertisement

ಕಾರಾಗೃಹ ಸಿಬ್ಬಂದಿಗೂ ಆದ್ಯತೆ

01:25 PM Jun 16, 2019 | Naveen |

ಕಲಬುರಗಿ: ಪೊಲೀಸ್‌ ಇಲಾಖೆ ಸಿಬ್ಬಂದಿಗೆ ನೀಡುವಷ್ಟೇ ಆದ್ಯತೆಯನ್ನು ಕಾರಾಗೃಹ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೂ ನೀಡಲು ಅನೇಕ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ಮತ್ತು ರಾಜ್ಯ ಪೊಲೀಸ್‌ ಗೃಹ ನಿರ್ಮಾಣ ನಿಗಮ ಅಧ್ಯಕ್ಷ ರಾಘವೇಂದ್ರ ಎಚ್. ಔರಾದಕರ್‌ ಹೇಳಿದರು.

Advertisement

ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಶನಿವಾರ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯ ಒಂದನೇ ತಂಡದ ಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಪರಿವೀಕ್ಷಣೆ ಮಾಡಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ನ್ಯಾಯಾಂಗ, ಪೊಲೀಸ್‌, ಕಾರಾಗೃಹ ಎಲ್ಲವೂ ಕ್ರಿಮಿನಲ್ ಜಸ್ಟಿಸ್‌ ವ್ಯವಸ್ಥೆಯ ಒಂದು ಭಾಗವಾಗಿವೆ. ಕಾರಾಗೃಹ ನಿರ್ಲಕ್ಷಿತ ಇಲಾಖೆ ಎನ್ನುವ ಭಾವನೆ ಇತ್ತು. ಪೊಲೀಸರಿಗೆ ಸಿಗುವ ಪ್ರಾತಿನಿಧ್ಯ ಕಾರಾಗೃಹ ಸಿಬ್ಬಂದಿಗೆ ಸಿಗಬೇಕೆಂದು ಹಲವು ಸುಧಾರಣೆಗಳನ್ನು ಮಾಡಲಾಗಿದೆ. ಕಾರಾಗೃಹ ಇಲಾಖೆ ಆರ್ಥಿಕವಾಗಿ ಸದೃಢವೂ ಆಗುತ್ತಿದೆ ಎಂದರು.

ಪ್ರಶಿಕ್ಷಣಾರ್ಥಿಗಳು ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳಂತೆ ಕಾಲ ಕಳೆದಿರಬಹುದು. ಆದರೆ, ಈಗ ಪರೇಡ್‌ ಗೆರೆ ದಾಟುತ್ತಿದ್ದಂತೆ ನೀವು ಸಮಾಜದ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿದ್ದಿರಿ. ಕೈದಿಗಳಿಗೆ ರಕ್ಷಣೆ ಕೊಡುವುದು ಮತ್ತು ಕೈದಿಗಳಿಂದ ಸಮಾಜವನ್ನು ರಕ್ಷಣೆ ಮಾಡುವ ಮಹತ್ತರ ಹೊಣೆ ನಿಮ್ಮ ಮೇಲಿದೆ ಎಂಬ ಕರ್ತವ್ಯ ಪ್ರಜ್ಞೆಯನ್ನು ತಿಳಿಸಿದರು.

ಜೈಲಿಗೆ ಬರುವ ಕೈದಿಗಳು ಎರಡು ವಿಧದಲ್ಲಿ ಇರುತ್ತಾರೆ. ಒಬ್ಬ ಅಪರಾಧ ಕೃತ್ಯಗಳನ್ನೇ ಮಾಡುತ್ತಾ ಜೈಲಿಗೆ ಬಂದರೆ, ಮತ್ತೂಬ್ಬ ಯಾವುದೋ ಸಂದರ್ಭಕ್ಕೊಳಗಾಗಿ ಜೈಲು ಸೇರಿರುತ್ತಾನೆ. ಈ ಕೈದಿಗಳ ಗುರುತಿಸುವಿಕೆ ಕಲೆಯನ್ನು ಜೈಲು ವೀಕ್ಷಕರು ಕರಗತ ಮಾಡಿಕೊಳ್ಳಬೇಕು. ಯಾವುದೇ ಆಮಿಷಕ್ಕೆ ಬಲಿಯಾಗಬಾರದು ಎಂದು ಸಲಹೆ ನೀಡಿದರು.

Advertisement

ಅಧ್ಯಕ್ಷತೆ ವಹಿಸಿ ಬಹುಮಾನ ವಿತರಿಸಿದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮತ್ತು ರಾಜ್ಯ ಕಾರಾಗೃಹಗಳ ಮಹಾ ನಿರೀಕ್ಷಕ ಎನ್‌.ಎಸ್‌. ಮೇಘರಿಖ್‌ ಮಾತನಾಡಿ, ಜೈಲುಗಳ ಸುಧಾರಣೆಗಾಗಿ ಸಿಬ್ಬಂದಿ ನೇಮಕಕ್ಕೆ ಪ್ರಥಮ ಆದ್ಯತೆ ಕೊಡಲಾಗುತ್ತಿದೆ. ಈಗಾಗಲೇ 1,020 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಜೂ.23ರಂದು 700 ಅಭ್ಯರ್ಥಿಗಳು ಲಿಖೀತ ಪರೀಕ್ಷೆ ಬರೆಯಲಿದ್ದಾರೆ. ಕಾರಾಗೃಹ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ತರಬೇತಿ ಪಡೆದ ಸಿಬ್ಬಂದಿ ಶಿಸ್ತಿನಿಂದ ಕೂಡಿರಬೇಕು. ಪ್ರತಿಜ್ಞೆ ಸ್ವೀಕರಿಸುವ ಪ್ರತಿ ಪದಕ್ಕೂ ಒಂದು ಅರ್ಥವಿದೆ. ಅದನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜ ಮತ್ತು ಇಲಾಖೆ ಅಭಿವೃದ್ಧಿಗೆ ಪ್ರತಿ ಸಿಬ್ಬಂದಿಯೂ ಸಹಕರಿಸಬೇಕು ಎಂದು ಹೇಳಿದರು.

ಕಾರಾಗೃಹ ಇಲಾಖೆ ಪೊಲೀಸ್‌ ಮಹಾನಿರೀಕ್ಷಕ ಎಚ್.ಎಸ್‌. ರೇವಣ್ಣ ವರದಿ ವಾಚನ ಮಾಡಿ, ಪೊಲೀಸ್‌ ಇಲಾಖೆ ಮತ್ತು ಕಾರಾಗೃಹ ಇಲಾಖೆ ನಡುವೆ ಬಾಂಧವ್ಯ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಕಾರಾಗೃಹದ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದರು.

ಒಂದೇ ವರ್ಷದಲ್ಲಿ ಬೀದರ್‌, ಹಾಸನ, ಬೆಂಗಳೂರು, ಮಂಗಳೂರು ಮತ್ತು ವಿಜಯಪುರದಲ್ಲಿ ಬಂಧಿಖಾನೆಗಳನ್ನು ನಿರ್ಮಿಸಲಾಗಿದೆ. ಜೈಲಿನಲ್ಲಿ ಆಧುನಿಕ ತಾಂತ್ರಿಕ ಉಪಕರಣಗಳನ್ನು ಒದಗಿಸಲಾಗುತ್ತಿದೆ. ಪ್ರತಿ ಸೆಲ್ನ ಮೇಲೆ ನಿಗಾ ವಹಿಸಲು ಎಲ್ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ಎಲ್ಲ ಪ್ರಶಿಕ್ಷಣಾರ್ಥಿಗಳು ಪರೇಡ್‌ ಮೂಲಕ ಶಿಸ್ತಿನಿಂದ ಗೌರವ ವಂದನೆ ಸಲ್ಲಿಸಿದರು. ಪೊಲೀಸ್‌ ವಾದ್ಯ ತಂಡದವರು ಸುಶ್ರಾವ್ಯವಾಗಿ ವಾದ್ಯ ನುಡಿಸಿದರು.

ಈಶಾನ್ಯ ವಲಯ ಐಜಿಪಿ ಮನೀಷ್‌ ಕರ್ಬಿಕರ್‌, ಎಸ್‌ಪಿ ಯಾಡ ಮಾರ್ಟಿನ್‌ ಮಾರ್ಬನ್ಯಾಂಗ್‌, ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆ ಪ್ರಾಂಶುಪಾಲ ಹಾಗೂ ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ಜಿಲ್ಲಾ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಕೃಷ್ಣಕುಮಾರ ಹಾಗೂ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳ ಪೋಷಕರು, ಕುಟುಂಬಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next