Advertisement

ಸ್ವಚ್ಛತೆಗಾಗಿ ಅಧಿಕಾರ ಚಲಾಯಿಸಿ

01:00 PM Sep 13, 2019 | Team Udayavani |

ಕಲಬುರಗಿ: ಸರ್ಕಾರಿ ಅಧಿಕಾರಿಗಳು ಸಮಾಜ ಸೇವಕರು. ಸಮಾಜ ಸೇವೆಯಲ್ಲಿದ್ದಾಗ ಯಾರಿಗೂ ಹೆದರಬೇಕಾದ ಅವಶ್ಯಕತೆ ಇಲ್ಲ. ಅದರಲ್ಲೂ ಪರಿಸರ ಸ್ವಚ್ಛತೆ ವಿಷಯದಲ್ಲಿ ಯಾರಿಗೂ ಮಣಿಯಬೇಕಾಗಿಲ್ಲ. ಕಾನೂನುದತ್ತವಾಗಿ ಬಂದಿರುವ ಅಧಿಕಾರವನ್ನು ಯಾವುದೇ ಹಿಂಜರಿಕೆ ಇಲ್ಲದೇ ಚಲಾಯಿಸಿ.

Advertisement

ಇದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠದ ರಾಜ್ಯಾಧ್ಯಕ್ಷ ನ್ಯಾ. ಸುಭಾಷ ಅಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಪರಿ.

ಮಹಾನಗರ ಪಾಲಿಕೆಯ ಟೌನ್‌ಹಾಲ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಸ್ವಚ್ಛ ಸರ್ವೇಕ್ಷಣ-2020’ ಕಾರ್ಯಕ್ರಮ ಕುರಿತ ಕಲಬುರಗಿ ವಿಭಾಗೀಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಾದ್ಯಂತ ಸ್ವಚ್ಛ ಸರ್ವೇಕ್ಷಣ ಕಾರ್ಯ 2020ರ ಮಾರ್ಚ್‌ ವರೆಗೆ ನಡೆಯಲಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ ತಡೆಗಟ್ಟುವಲ್ಲಿ, ಘನತ್ಯಾಜ್ಯ ಮತ್ತು ಜೈವಿಕ ತ್ಯಾಜ್ಯ ವಿಲೇವಾರಿ ಹಾಗೂ ಪ್ಲಾಸ್ಟಿಕ್‌ ಬಳಕೆ ನಿಷೇಧ ಕುರಿತು ಕೈಗೊಂಡ ಕೆಲಸ-ಕಾರ್ಯಗಳ ಆಧಾರದ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರ್‍ಯಾಂಕಿಂಗ್‌ ನೀಡಲಿದೆ. ಈ ಹಿಂದೆ ಮೈಸೂರು ಪ್ರಥಮ ಸ್ಥಾನದಲ್ಲಿತ್ತು. ಪ್ರಸ್ತುತ ಇಂದೋರ್‌ ದೇಶದಲ್ಲೇ ಸ್ವಚ್ಛ ನಗರವಾಗಿದೆ ಎಂದರು.

ಕೇವಲ ರ್‍ಯಾಂಕಿಂಗ್‌ ಪಡೆಯಲು ನಗರ ಸ್ವಚ್ಛತೆ ಕಾರ್ಯ ಮಾಡುವುದು ಬೇಡ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವುದು ನಮ್ಮ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಅನಧಿಕೃತ ಬಡಾವಣೆಯಲ್ಲಿ ಉತ್ಪತ್ತಿಯಾಗುವ ಕಸಕ್ಕೆ ದಂಡ ವಿಧಿಸಿ. ಮಾಂಸದಂಗಡಿಗಳು ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡದೇ ಇದ್ದರೆ ಅವರಿಗೆ ನೋಟಿಸ್‌ ಜಾರಿ ಮಾಡಿ ಎಚ್ಚರಿಸಿ. ಪ್ಲಾಸ್ಟಿಕ್‌ ಬಳಕೆಗೆ ಯಾರಿಗೂ ಯಾವುದೇ ಕಾರಣಕ್ಕೂ ಅವಕಾಶ ಕೊಡಬೇಡಿ. ಪ್ಲಾಸ್ಟಿಕ್‌ ಕಂಡರೆ ನಿರಂತರವಾಗಿ ದಂಡ ಹಾಕಿ. ಕನಿಷ್ಠ ಎರಡು ಬಾರಿ ದಂಡ ಹಾಕಿದರೆ, ಮೂರನೇ ಬಾರಿ ಬಳಕೆ ನಿಲ್ಲುತ್ತದೆ. ಯಾವುದೇ ಅಂಗಡಿಗಳಲ್ಲಿ ಪ್ಯಾಸ್ಟಿಕ್‌ ಮಾರಾಟ ಮಾಡುತ್ತಿದ್ದರೆ, ಅಂಗಡಿ ಪರವಾನಗಿ ರದ್ದು ಮಾಡುವ ನೋಟಿಸ್‌ ಕೊಡಿ ಎಂದು ಸೂಚಿಸಿದರು. ಸ್ವಚ್ಛ ಕಾರ್ಯದ ಅನುಷ್ಠಾನ ಬಗ್ಗೆ ಏನೇ ಅಡೆ-ತಡೆಗಳು ಇದ್ದರೆ ಮೇಲಧಿಕಾರಿಗಳ ಗಮನಕ್ಕೆ ತನ್ನಿ. ಅಲ್ಲದೇ, ಸ್ಥಳೀಯ ಸಂಸ್ಥೆಗಳು ತನ್ನ ವ್ಯಾಪ್ತಿಯ ಸರ್ಕಾರಗಳು ಇದ್ದಂತೆ. ಬೈಲಾಗಳನ್ನು ತಿದ್ದುಪಡಿ ಮಾಡಿಕೊಂಡು ಸರಿಯಾಗಿ ಅನುಷ್ಠಾನ ಮಾಡಿಕೊಳ್ಳುವ ಅವಕಾಶವೂ ಇದೆ ಎಂದು ನ್ಯಾ.ಸುಭಾಷ ಅಡಿ ಅಧಿಕಾರಿಗಳಿಗೆ ಹೇಳಿದರು. ಈ ಸಮಯದಲ್ಲಿ ಕೆಲ ಹಂತದಲ್ಲಿ ಸಮಸ್ಯೆಗಳು ಇದ್ದರೆ ನಮ್ಮ ಗಮನಕ್ಕೂ ತನ್ನಿ. ನಾವು ನಿಮ್ಮೊಂದಿಗೆ ಇರುತ್ತವೆ ಎಂದು ಜಿಲ್ಲಾಧಿಕಾರಿ ಬಿ. ಶರತ್‌ ಭರವಸೆ ನೀಡಿದರು.

Advertisement

ಪೌರ ಕಾರ್ಮಿಕರ ಸಮಸ್ಯೆ: ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಿಬ್ಬಂದಿ ಕೊರತೆ ಇದೆ ಮತ್ತು ಅನಧಿಕೃತ ಕಟ್ಟಡ ತಡೆಯಲು ಹೋದಾಗ ಒತ್ತಡಗಳು ಬರುತ್ತಿವೆ ಎಂದು ಬಹುತೇಕ ಪಾಲಿಕೆಗಳ ಮುಖ್ಯಾಧಿಕಾರಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಜಿಪಂ ಸಿಇಒ ಡಾ| ಪಿ.ರಾಜಾ, ಮಹಾನಗರ ಪಾಲಿಕೆ ಪ್ರಭಾರಿ ಆಯುಕ್ತ ರಾಹುಲ್ ಪಾಂಡ್ವೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸೋಮಪ್ಪ ಕಡಕೋಳ, ಬಳ್ಳಾರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಮುಖ್ಯ ಅಭಿಯಂತ ದಿನೇಶರಾವ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next