Advertisement

ಸಂಡೇ ಲಾಕ್‌ಡೌನ್‌ಗೆ ಕಲಬುರಗಿ ಸ್ತಬ್ಧ

11:41 AM May 25, 2020 | Naveen |

ಕಲಬುರಗಿ: ಕೋವಿಡ್ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಜಾರಿಗೆ ತರಲಾಗಿದ್ದ “ಸಂಡೇ ಲಾಕ್‌ಡೌನ್‌’ ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಯಾಯಿತು. ಬಸ್‌, ಆಟೋ ಸಂಚಾರ ರದ್ದಾಗಿದ್ದಲ್ಲದೇ ಜನ ಸಂಚಾರ ವಿರಾಳವಾಗಿದ್ದರಿಂದ ಬಿಸಿಲೂರು ಕಲಬುರಗಿ ಸ್ತಬ್ಧಗೊಂಡಿತ್ತು.

Advertisement

ಲಾಕ್‌ಡೌನ್‌ ಕೊಂಚ ಸಡಿಲಿಕೆ ನಂತರ ಜನ, ವಾಹನ ಸಂಚಾರ ಹೆಚ್ಚಾಗಿತ್ತು. ಮಾರ್ಕೆಟ್‌ನಲ್ಲಿ ಭರ್ಜರಿ ವ್ಯಾಪಾರವೂ ನಡೆದಿತ್ತು. ರವಿವಾರ ಸಂಪೂರ್ಣ ಲಾಕ್‌ಡೌನ್‌ ಗೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶನಿವಾರ ಸಂಜೆಯಿಂದಲೇ ಲಾಕ್‌ಡೌನ್‌ ಜಾರಿಗೊಂಡಿದ್ದರಿಂದ ಬಹುತೇಕರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ-ಮುಂಗಟ್ಟು ಮುಚ್ಚಿದ್ದರು. ಸಾರಿಗೆ ಬಸ್‌ ಹಾಗೂ ಆಟೋಗಳು ರಸ್ತೆಗಿಳಿಯದ ಕಾರಣ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸೂಪರ್‌ ಮಾರ್ಕೆಟ್‌ ಪ್ರದೇಶ, ಜಗತ್‌ ವೃತ್ತ, ಸರ್ದಾರ ವಲ್ಲಭಬಾಯಿ ಪಟೇಲ್‌ ವೃತ್ತ, ರಾಷ್ಟ್ರಪತಿ ವೃತ್ತ, ಲಾಲ್‌ಗೇರಿ ಕ್ರಾಸ್‌, ಖರ್ಗೆ ಪೆಟ್ರೋಲ್‌ ಬಂಕ್‌ ವೃತ್ತ, ರಾಮ ಮಂದಿರ ವೃತ್ತ ಸೇರಿ ಬಹುತೇಕ ವೃತ್ತಗಳಲ್ಲಿ ಜನತೆ ಕಂಡುಬರಲಿಲ್ಲ. ಬೈಕ್‌ ಗಳಲ್ಲಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಮನೆಗೆ ಕಳುಹಿಸಿದರು.

ಹಾಲು ಮಾರಾಟ, ಕಿರಾಣಾ ಅಂಗಡಿ, ತರಕಾರಿ, ಹಣ್ಣು ಮಾರಾಟಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಆದರೆ, ಮಧ್ಯಾಹ್ನದ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ತರಕಾರಿ, ಹಣ್ಣು ಮಾರಾಟಗಾರರೂ ವ್ಯಾಪಾರ ನಿಲ್ಲಿಸಿ ಮನೆಗಳಿಗೆ ತೆರಳಿದರು. ಕೆಲವೆಡೆ ಮೆಡಿಕಲ್‌ ಶಾಪ್‌ ಗಳು ಮಾತ್ರವೇ ತೆರೆದಿದ್ದವು. ಇನ್ನೊಂದೆಡೆ ಬಿಸಿಲಿಗೆ ಅಂಜಿ ಬಹುತೇಕ ಜನತೆ ಮನೆಗಳನ್ನು ಬಿಟ್ಟು ಹೊರಗಡೆ ಬರಲೇ ಇಲ್ಲ. ವಾರದ ಆರು ದಿನ ನಿತ್ಯ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ವೈನ್‌ಶಾಪ್‌, ಎಂಎಸ್‌ ಐಎಲ್‌ ಮಳಿಗೆ ವ್ಯಾಪಾರಕ್ಕೆ ಅನುಮತಿ ನೀಡಲಾಗಿತ್ತು. ಆದರೆ ರವಿವಾರ ಸಂಪೂರ್ಣ ಬಂದ್‌ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೂ ಬ್ರೇಕ್‌ ಹಾಕಿದ್ದರಿಂದ ಮದ್ಯದಂಗಡಿಗಳು ಬಾಗಿಲು ಹಾಕಿದ್ದವು. ಪೊಲೀಸ್‌ ಆಯುಕ್ತ ಎನ್‌. ಸತೀಶಕುಮಾರ ಮಾರ್ಗದರ್ಶನದಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು. ಡಿಸಿಪಿ ಡಿ. ಕಿಶೋರಬಾಬು, ಎಸಿಪಿ ವಿಜಯಕುಮಾರ, ಎಸ್‌.ಎಚ್‌. ಸುಬೇದಾರ, ವಿರೇಶ ಕರಡಿಗುಡ್ಡ, ಇನ್‌ ಸ್ಪೆಕ್ಟರ್‌ಗಳಾದ ಪಂಡಿತ ಸಗರ, ಎಲ್‌.ಎಚ್‌. ಗೌಂಡಿ, ಅರುಣಕುಮಾರ, ಸೋಮಲಿಂಗ ಕಿರದಳ್ಳಿ, ಸಂಗಮನಾಥ ಹಿರೇಮಠ ಹಾಗೂ ಹೋಂಗಾರ್ಡ್‌ಗಳು ಬಂದೋಬಸ್ತ್ ಏರ್ಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next