Advertisement
ಆರು ಜಿಲ್ಲೆಗಳ ಶಾಲೆಗಳಲ್ಲಿ ಕುಡಿಯುವ ನೀರು, ಗುಣಮಟ್ಟದ ಶಿಕ್ಷಣ, ವಿದ್ಯುತ್ ಸಮಸ್ಯೆ, ಶಿಷ್ಯವೇತನ, ಶಾಲಾ ಮೈದಾನ, ಸ್ವಚ್ಛತೆ ಕೊರತೆ ಹಾಗೂ ಅಧಿಕಾರಿಗಳಿಂದ ಆಗುತ್ತಿರುವ ಲೋಪಗಳ ಬಗ್ಗೆ ಮಕ್ಕಳು ಎಳೆ-ಎಳೆಯಾಗಿ ಆಯೋಗದ ಅಧ್ಯಕ್ಷ ಅಂತೋಣಿ ಸೆಬಾಸ್ಟಿಯನ್ ಮುಂದಿಟ್ಟರು. ಮಕ್ಕಳು ಕೇಳುತ್ತಿದ್ದ ಪ್ರಶ್ನೆಗಳನ್ನು ಸಮಚಿತ್ತದಿಂದ ಆಲಿಸಿದ ಅಧ್ಯಕ್ಷರು, ಸಂಬಂಧಪಟ್ಟ ಅಧಿಕಾರಿಗಳನ್ನು ಮಕ್ಕಳ ಮುಂದೆಯೇ ನಿಲ್ಲಿಸಿ ವಿವರಣೆ ಪಡೆದರು.
Related Articles
Advertisement
ರಾಯಚೂರು ಜಿಲ್ಲೆಯ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ ಅಪೌಷ್ಟಿಕ ನಿವಾರಣೆಗೆ ವಿಶೇಷ ಯೋಜನೆ ಹಾಕಿಕೊಳ್ಳಬೇಕು. ಅತಿಥಿ ಶಿಕ್ಷಕರ ಬದಲಾಗಿ ಆಂಗ್ಲ, ಗಣಿತ ಮತ್ತು ವಿಜ್ಞಾನ ಶಿಕ್ಷಕರನ್ನು ಕಾಯಂ ಆಗಿ ನೇಮಿಸಬೇಕು ಎಂದು ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದರು.
ಕಲಬುರಗಿ, ಬೀದರ್, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಂಡು ಪರಿಹರಿಸಲು ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಿದರು. ಎಲ್ಲ ಜಿಲ್ಲೆಗಳಿಂದ ಸುಮಾರು 800ಕ್ಕೂ ಹೆಚ್ಚಿನ ಸಮಸ್ಯೆಗಳು ಆಯೋಗದ ಮುಂದೆ ಬಂದವು. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರವನ್ನು ರವಾನಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ 15 ದಿನದೊಳಗೆ ಆಯೋಗಕ್ಕೆ ವರದಿ ಸಲ್ಲಿಸುವಂತೆ ಅಂತೋಣಿ ಸೆಬಾಸ್ಟಿಯನ್ ಸೂಚಿಸಿದರು.
ಅಧಿಕಾರಿಗಳ ತರಾಟೆ: ಎಚ್ಐವಿ ಪೀಡಿತ ಮಕ್ಕಳಿಗೆ ಸಹಾಯಧನ ನೀಡದ ಸಂಬಂಧ ಕಲಬುರಗಿ ಜಿಲ್ಲೆಯ ಅಧಿಕಾರಿಗಳಿಗೆ ಆಯೋಗದ ಅಧ್ಯಕ್ಷ ಅಂತೋಣಿ ಸೆಬಾಸ್ಟಿಯನ್ ತರಾಟೆ ತೆಗೆದುಕೊಂಡರು.
ಜಿಲ್ಲೆಯಲ್ಲಿ 2016ರಿಂದ ಎಚ್ಐವಿ ಪೀಡಿತ 213 ಮಕ್ಕಳಿಗೆ ಆರೋಗ್ಯ ಚಿಕಿತ್ಸೆಗೆ ನೀಡುವ ತಲಾ 1,000 ರೂ. ಬಿಡುಗಡೆಯಾಗಿಲ್ಲ ಎಂದು ದಿವ್ಯ ಜೀವನ ನೆಟ್ವರ್ಕ್ ಸಂಸ್ಥೆಯ ಪ್ರತಿನಿಧಿಗಳು ದೂರಿದ್ದರು. ಆಗ ಅಧ್ಯಕ್ಷರು, ಎಚ್ಐವಿ ಪೀಡಿತ ಮಕ್ಕಳ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು. ಕೂಡಲೇ ಮಕ್ಕಳಿಗೆ ಸಿಗಬೇಕಾದ ಹಣ ಪಾವತಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭೀಮರಾಯ ಅವರಿಗೆ ಸೂಚಿಸಿದರು.
ಸಂವಾದದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಎಸ್‌ಟಿಇ ಮಕ್ಕಳ ಆರೋಗ್ಯಾಧಿಕಾರಿ ಶೈಸ್ತಾ ಕೆ.ಶಾ., ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕನ್ಸ್‌ಲೆrಂಟ್ ರಾಘವೇಂದ್ರ ಭಟ್, ಧಾರವಾಡ ಸಿಡಬ್ಲ್ಯುಸಿ ಅಧ್ಯಕ್ಷ ಅಶೋಕ ಯರಗಟ್ಟಿ, ಅಪರ ಜಿಲ್ಲಾಧಿಕಾರಿ ಬಿ.ಶರಣಪ್ಪ, ಕಲಬುರಗಿ ವಿಭಾಗದ ಆರು ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರೀನಾ ಡಿಸೋಜಾ, ವಿಜಯಲಕ್ಷ್ಮೀ ಎಸ್.ಎಂ., ನಿಲೋಫರ್ ರಾಂಪೂರಿ, ಮಂಗಳಾ ಹೆಗಡೆ, ಕವಿತಾ ಹುಷಾರೆ, ಹನುಮಂತ ಕರೆಡ್ಡಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಮಕ್ಕಳ ಹಕ್ಕುಗಳ ಕ್ಲಬ್ ಸದಸ್ಯರು ಮತ್ತು ಮಕ್ಕಳು ಭಾಗವಹಿಸಿದ್ದರು.