Advertisement
ಜಿಲ್ಲಾಧಿಕಾರಿ ಕಚೇರಿ ಎದುರಿಗಿನ ಐವಾನ್-ಎ-ಶಾಹಿ ರಸ್ತೆಯಲ್ಲಿ ಹಿರಿಯ ಮುಖಂಡ ಮಾರುತಿ ಮಾನ್ಪಡೆ, ಅಂಗನವಾಡಿ ನೌಕಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷೆ ಶಾಂತಾ ಘಂಟಿ, ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ ನೇತೃತ್ವದಲ್ಲಿ ಜಿಲ್ಲೆಯ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
Related Articles
Advertisement
ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೇವಾ ನಿಯಮಾವಳಿ ರಚಿಸಬೇಕು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮೂರ್‍ನಾಲ್ಕು ತಿಂಗಳಿಂದ ಕಾರ್ಯಕರ್ತೆಯರಿಗೆ ಗೌರವ ಧನ ಪಾವತಿಸಿಲ್ಲ. ಮೊಟ್ಟೆ ಮತ್ತು ತರಕಾರಿ ಹಣ ಬಿಡುಗಡೆಯಾಗಿಲ್ಲ. ಸಕಾಲಕ್ಕೆ ಗ್ಯಾಸ್ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ಅಲ್ಲದೇ, ಕೆಲ ಕಡೆಗಳಲ್ಲಿ ಇನ್ನೂ ಗ್ಯಾಸ್ ಸಿಲಿಂಡರ್ ಹಾಗೂ ಒಲೆ ಕೂಡ ಪೂರೈಕೆಯಾಗಿಲ್ಲ ಎಂದು ಪ್ರತಿಭಟನಾನಿರತ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕಾರ್ಯಕರ್ತೆಯರ ಗೌರವ ಧನ ಪಾವತಿಸಿ, ಮೊಟ್ಟೆ ಮತ್ತು ತರಕಾರಿ ಹಣ ಬಿಡುಗಡೆ ಮಾಡಬೇಕು. ಕಾಯಿಲೆಗಳಿಗೆ ತುತ್ತಾದ ಕಾರ್ಯಕರ್ತೆಯರ ಕುಟುಂಬಗಳಿಗೆ ಮರಣ ಪರಿಹಾರ ನಿಧಿ ಪಾವತಿಸಬೇಕು. ಜಿಲ್ಲಾದ್ಯಂತ ಅಂಗನವಾಡಿ ಕೇಂದ್ರಗಳ ಕಟ್ಟಡಗಳ ದುರಸ್ತಿ ಮಾಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, 5ರಿಂದ 10 ವರ್ಷ ಸೇವೆ ಸಲ್ಲಿಸಿದ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಹೆಚ್ಚುವರಿ ಗೌರವ ಧನ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಪ್ರತಿಭಟನಾ ನಿರತರಿಂದ ಮನವಿ ಪತ್ರ ಸ್ವೀಕರಿಸಿ, ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಮಹಾದೇವಿ ಪೊಲಕಪಳ್ಳಿ, ಗಂಗಮ್ಮ ಬಿರಾದಾರ, ದೇವಮ್ಮ, ಶೇಕಮ್ಮ, ಗಜರಾಬಾಯಿ, ಕಲಾವತಿ, ಶಾಂತಾಬಾಯಿ ಚಿಂಚೋಳಿ, ಪುಷ್ಪಾ, ಪ್ರಭಾವತಿ, ಕುಲಸುಂಬಿ, ಆನಂದಮ್ಮ ಹಾಗೂ ಸಾವಿರಾರು ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅನುದಾನ ವಿಳಂಬ ಮತ್ತು ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಮೊಟ್ಟೆ ಮತ್ತು ತರಕಾರಿ ಬಿಲ್ ಪಾವತಿಸಲು ತಡವಾಗಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಬಾಕಿ ಬಿಲ್ ಪಾವತಿಗೆ ಕ್ರಮಕೈಗೊಳ್ಳಲಾಗುವುದು. ಉಳಿದಂತೆ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು.•ಮಲ್ಲಿಕಾರ್ಜುನ ರೆಡ್ಡಿ,
ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ