ಕಲಬುರಗಿ: ಗ್ರಾಮೀಣ ಭಾಗದ ಬಡ ಮಹಿಳೆಯರು, ವಿಮುಕ್ತ ದೇವದಾಸಿ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು, ಎಚ್.ಐ.ವಿ. ಬಾಧಿತ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಅವರಿಗೆ ವಿಶೇಷವಾಗಿ ವಸತಿ ಸೌಕರ್ಯ ಒದಗಿಸುವ ಕುರಿತು ಅ ಧಿಕಾರಿಗಳ ಜೊತೆ ಚರ್ಚಿಸಿ ನಿಗಮದ ಎಲ್ಲಾ ಯೋಜನೆಗಳು ಸಮಾಜದ ಎಲ್ಲಾ ಅರ್ಹ ಮಹಿಳೆಯರಿಗೆ ತಲುಪಿಸಲು ಶ್ರಮಿಸುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಹೇಳಿದರು.
ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ತ್ರೀಶಕ್ತಿ ಒಕ್ಕೂಟ ನಿಗಮದ ಯೋಜನೆಗಳ ಫಲಾನುಭವಿಗಳ ಜೊತೆಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಅನುಷ್ಠಾನ, ಫಲಾನುಭವಿಗಳ ಸ್ಥಿತಿಗತಿಗಳು ಕುರಿತು ಚರ್ಚಿಸಿದ ಅವರು, ನಂತರ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಹೆಚ್.ಐ.ವಿ ಮಹಿಳೆಯರ ಜೊತೆ ಸಂಕ್ರಾಂತಿ ಹಬ್ಬದ ಎಳ್ಳು-ಬೆಲ್ಲ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಸ್ತ್ರೀಶಕ್ತಿ ಒಕ್ಕೂಟ, ಸ್ನೇಹಾ ಸೂಸೈಟಿ, ಕೆ-ಲ್ಯಾಪ್ ಸದಸ್ಯರು ಹಾಗೂ ಮಹಿಳೆಯರು ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಣ್ಣ ಸಿರಸಗಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಶಾಂತಲಾ ಬಿಲ್ಲವ, ದೇವದಾಸಿ ಪುನರ್ವಸತಿ ಯೋಜನೆ ಯೋಜನಾಧಿ ಕಾರಿ ಎಸ್.ಎನ್.ಹಿರೇಮಠ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಮಲ್ಲಮ್ಮ, ಮಹಿಳಾ ಶಕ್ತಿ ಕೇಂದದ ಜಿಲ್ಲಾ ಸಂಯೋಜಕಿ ಪೂಜಾ, ಹಿರಿಯ ಮೇಲ್ವಿಚಾರಕಿ ಸತ್ಯಮ್ಮ ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರು, ಫಲಾನುಭವಿಗಳು ಹಾಜರಿದ್ದರು.