Advertisement

ನಾಡಿದ್ದು ಅದ್ಧೂರಿ ಶ್ರೀನಿವಾಸ ಕಲ್ಯಾಣೋತ್ಸವ

11:09 AM Nov 22, 2019 | Naveen |

ಕಲಬುರಗಿ: ಜಿಲ್ಲೆಯ ಬಡ ಜನತೆ ತಿಮ್ಮಪ್ಪನ ದರ್ಶನಕ್ಕೆ ತಿರುಪತಿಗೆ ತೆರಳುವ ಬದಲು ನಮ್ಮಲ್ಲೇ ದರ್ಶನ ಪಡೆಯುವಂತಾಗಲು ತಿರುಪತಿ ತಿರುಮಲದ ವೆಂಕಟೇಶ್ವರ ದೇವಾಲಯ ವತಿಯಿಂದ ನ.24ರಂದು ಸಂಜೆ 5:30ಕ್ಕೆ ನೂತನ ವಿದ್ಯಾಲಯದ ಮೈದಾನದಲ್ಲಿ ಅದ್ಧೂರಿ “ಶ್ರೀನಿವಾಸ ಕಲ್ಯಾಣೋತ್ಸವ’ ಆಯೋಜಿಸಲಾಗಿದೆ ಎಂದು ಪವನ್‌ ಮಹಾರಾಜ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಭಕ್ತರ ಕೋರಿಕೆ ಮೇರೆಗೆ ಟಿಟಿಡಿ ಮಂಡಳಿ ದೇಶದ ವಿವಿಧೆಡೆ ತದ್ರೂಪ ಕಲ್ಯಾಣ ಮಹೋತ್ಸವ ಆಚರಣೆಗೆ ಅವಕಾಶ ಕಲ್ಪಿಸಿದೆ. ಅಂದಾಜು 20 ಸಾವಿರಕ್ಕೂ ಹೆಚ್ಚು ಭಕ್ತರು ಉಚಿತ ದರ್ಶನ ಪಡೆಯಬಹುದಾಗಿದೆ. ಫಾರ್ಚೂನ್‌ ಜೀಯೋಫೋನಿಕ್ಸ್‌ ಕಂಪನಿ ಮಾಲೀಕರಾದ ಸಂಜೀವ ಲಕ್ಷ್ಮೀ ನಾರಾಯಣ ಗುಪ್ತಾ ಕಲ್ಯಾಣೋತ್ಸವಕ್ಕಾಗಿ ಮನವಿ ಸಲ್ಲಿಸಿದ್ದರು. ಇದಕ್ಕೆ ಟಿಟಿಡಿ ಒಪ್ಪಿಗೆ ನೀಡಿದ್ದು, ಕಲ್ಯಾಣೋತ್ಸವದ ಸಂಪೂರ್ಣ ವೆಚ್ಚವನ್ನು ಅವರೇ ವಹಿಸಿಕೊಂಡಿದ್ದಾರೆ ಎಂದರು.

ಶ್ರೀನಿವಾಸ ಕಲ್ಯಾಣೋತ್ಸವ ಸಿದ್ಧತೆಗಳು ಆರಂಭಗೊಂಡಿದ್ದು, ನೂತನ ವಿದ್ಯಾಲಯದ ಮೈದಾನ ಹಾಗೂ ಉತ್ಸವಕ್ಕೆ ವ್ಯವಸ್ಥೆಗಳ ಪರಿಶೀಲನೆ ನಡೆಸಲಾಗಿದೆ. ತಿರುಪತಿ ದೇವಸ್ಥಾನದ ಮಾದರಿಯಲ್ಲಿ ಶ್ರೀನಿವಾಸ ಮತ್ತು ಭೂದೇವಿ, ಶ್ರೀದೇವಿ ಉತ್ಸವ ಮೂರ್ತಿಗಳ ಕಲ್ಯಾಣ ನೆರವೇರಿಸಲಾಗುವುದು. ಈ ಮೂಲಕ ಮಹೋತ್ಸವ ನೋಡಬೇಕೆನ್ನುವ ಭಕ್ತರ ಕೊರತೆ ನೀಗಲಿದೆ ಎಂದು ಹೇಳಿದರು.

ಉದ್ಯಮಿ ಸಂಜೀವ ಲಕ್ಷ್ಮೀ ನಾರಾಯಣ ಗುಪ್ತಾ ಮಾತನಾಡಿ, “ಶ್ರೀನಿವಾಸ ಕಲ್ಯಾಣೋತ್ಸವ’ ಯಶಸ್ವಿಗಾಗಿ ಸಾಕಷ್ಟು ಶ್ರಮಿಸಲಾಗುತ್ತಿದೆ. ಎರಡು ಸಾವಿರ ಸ್ವಯಂಸೇವಕರನ್ನು ಒಳಗೊಂಡ 14 ಸಮಿತಿಗಳನ್ನು ರಚಿಸಲಾಗಿದೆ. ಕಲ್ಯಾಣೋತ್ಸವಕ್ಕೆ ಎಲ್ಲ ಸಮಾಜಗಳ ಹಿರಿಯರು, ಮುಖಂಡರು ಸಾಥ್‌ ನೀಡಿದ್ದಾರೆ. 20 ಸಾವಿರ ಉಚಿತ ಪಾಸ್‌ ಗಳನ್ನು ವಿತರಿಸಲು ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ, ಕೊಟನೂರು ಮಠದ ಮುರುಘರಾಜೇಂದ್ರ ಸ್ವಾಮೀಜಿ, ಈ ಭಾಗದ ಸಂಸದರು, ಶಾಸಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Advertisement

ಪಾರ್ಕಿಂಗ್‌ ವ್ಯವಸ್ಥೆ: ಶ್ರೀನಿವಾಸ ಕಲ್ಯಾಣೋತ್ಸವಕ್ಕಾಗಿ ಆಗಮಿಸುವ ಭಕ್ತರ ಕಾರು, ಬೈಕ್‌ಗಳ ಪಾರ್ಕಿಂಗ್‌ಗಾಗಿ ವ್ಯವಸ್ಥೆ ಮಾಡಲಾಗಿದೆ. ಶರಣಬಸವೇಶ್ವರ ದೇವಸ್ಥಾನ ಆವರಣ, ಶರಣಬಸವೇಶ್ವರ ಕಾಲೇಜು, ಅಪ್ಪ ಪಬ್ಲಿಕ್‌ ಸ್ಕೂಲ್‌, ಖೂಬಾ ಕಲ್ಯಾಣ ಮಂಟಪ, ಕಲ್ಯಾಣಿ ಪೆಟ್ರೋಲ್‌ ಪಂಪ್‌ ಆವರಣ, ರೋಟರಿ ಸ್ಕೂಲ್‌, ವೀರಶೈವ ಕಲ್ಯಾಣ ಮಂಟಪದ ಸಮೀಪ ಸ್ಥಳದ ವ್ಯವಸ್ಥೆ ಮಾಡಲಾಗಿದೆ. ಕಲ್ಯಾಣೋತ್ಸವ ಸ್ಥಳಕ್ಕೆ ಹಿರಿಯರು, ಅಂಗವಿಕಲರು, ಅಸಹಾಯಕರನ್ನು ಕರೆತರಲು ಪಾರ್ಕಿಂಗ್‌ ಸ್ಥಳಗಳಿಂದ ಉಚಿತ ಕಾರು ವ್ಯವಸ್ಥೆ
ಮಾಡಲಾಗುವುದು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶರಣು ಮೋದಿ, ಮಾರವಾಡಿ ಸಮಾಜದ ಅಧ್ಯಕ್ಷ ಗೋವಿಂದ ರಾಟಿ, ಭರತ ಗುಪ್ತಾ, ಡಾ| ವೇಣುಗೋಪಾಲ ಮಂತ್ರಿ, ಮಂಜುಳಾ ಗುಪ್ತಾ, ಡಾ| ಶಿವರಾಜ ಪಾಟೀಲ, ಡಾ| ವೀರೇಶ ಸಲಗರ, ಡಾ| ರಶ್ಮಿ ಸಲಗರ ಇದ್ದರು. ಹೆಚ್ಚಿನ ಮಾಹಿತಿಗೆ ಮೊ.ಸಂ. 98456 61743ಕ್ಕೆ ಸಂಪರ್ಕಿಸಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next