ಕಲಬುರಗಿ: ಕೇಂದ್ರದ ಮಾಜಿ ಸಚಿವೆ ಹಾಗೂ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಿಧನದ ಹಿನ್ನೆಲೆಯಲ್ಲಿ ಬುಧವಾರ ನಗರದ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶ್ರದ್ಧಾಂಜಲಿ ಕಾರ್ಯಕ್ರಮಗಳನ್ನು ನಡೆಸಲಾಯಿತು.
ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುಷ್ಮಾ ಸ್ವರಾಜ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಕಂಬನಿ ಮಿಡಿಯಲಾಯಿತು.
ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಸುಷ್ಮಾ ಸ್ವರಾಜ್ ಅವರು 2014ರಿಂದ 19ರ ಅವಧಿಯಲ್ಲಿ ವಿದೇಶಾಂಗ ಖಾತೆಯ ಸಚಿವರಾಗಿ ಸಾಕಷ್ಟು ಕೆಲಸ ಮಾಡಿ ತಮ್ಮದೇಯಾದ ಛಾಪು ಮೂಡಿಸಿದ್ದರು. ಒಟ್ಟಾರೆ ಅವರು ಜನರ ಮೆಚ್ಚಿನ ಮಂತ್ರಿಯಾಗಿದ್ದರು ಎಂದು ಹೇಳಿದರು.
ಬಿಜೆಪಿಯ ಧೀಮಂತ ನಾಯಕಿಯಾದ ಸುಷ್ಮಾ ಸ್ವರಾಜ್ ಸರಳ, ಸಜ್ಜನಿಕೆಯ ಅಪಾರ ಹೆಸರು ಮಾಡಿದ್ದರು. ಸಣ್ಣ ವಯಸ್ಸಿನಲ್ಲೇ ಸಚಿವೆಯಾಗಿ ಅಗ್ರಗಣ್ಯ ನಾಯಕರೊಂದಿಗೆ ಕೆಲಸ ಮಾಡಿದ್ದರು. ಅವರ ಅಗಲಿಕೆ ಪಕ್ಷ ಮತ್ತು ರಾಷ್ಟ್ರಕ್ಕೆ ತುಂಬಲರಾದ ನಷ್ಟವಾಗಿದೆ ಎಂದು ಮುಖಂಡರು ಸಂತಾಪ ಸೂಚಿಸಿದರು.
ಮುಖಂಡರಾದ ಚಂದು ಪಾಟೀಲ, ಉಮೇಶ ಪಾಟೀಲ, ಶಿವಾನಂದ ಪಾಟೀಲ ಅಷ್ಟಗಿ, ರಾಜು ವಾಡೇಕರ, ಶರಣಬಸಪ್ಪ ಕಾಡಾದಿ, ಶಿವಯೋಗಿ ನಾಗನಳ್ಳಿ, ಸಿದ್ದಾಜಿ ಪಾಟೀಲ, ಅನಿಲ್ ಜಾಧವ, ವೀರಣ್ಣ ಹೊನ್ನಳ್ಳಿ , ಸಂಗಮೇಶ ರಾಜೋಳೆ, ಶಾಂತು ಧುಧನಿ, ಹಾಗೂ ಮಹಿಳಾ ಮೋರ್ಚಾ ಘಟಕದ ನಗರಾಧ್ಯಕ್ಷೆ ವಿಜಯಲಕ್ಷ್ಮೀ ಬಿ. ಗೊಬ್ಬೂರಕರ್ ಮುಂತಾದವರು ಇದ್ದರು.