ಕಲಬುರಗಿ: ಸಂಶೋಧಕರು ಇನ್ನೊಬ್ಬರ ಮಹಾಪ್ರಬಂಧ ನಕಲು ಮಾಡದೇ ಸ್ವ ಸಾಮರ್ಥ್ಯದಿಂದ ಹಾಗೂ ಪ್ರಾಮಾಣಿಕತೆಯಿಂದ ಅಭ್ಯಾಸ ಮಾಡಿ ಮಹಾಪ್ರಬಂಧ ರಚಿಸಬೇಕೆಂದು ಪುಣೆಯ ಪ್ರೊ| ಗಣೇಶ ಹಿಂಗ್ಮಿರೆ ಕರೆ ನೀಡಿದರು.
ಶರಣಬಸವೇಶ್ವರ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳು ಎನ್ನುವ ವಿಷಯ ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ನಾವು ಬಳಸುವ 71 ಪ್ರತಿಶತ ವ್ಯಾಪಾರದ ಸರಕುಗಳು ವಿದೇಶಿ ಆಗಿದ್ದು, ಇನ್ನೂ 29 ಪ್ರತಿಶತ ನಮ್ಮ ರಾಷ್ಟ್ರದಲ್ಲಿ ಸಿಗುತ್ತವೆ. ಈ ನಿಟ್ಟಿನ ತಂತ್ರಜ್ಞಾನ ಅದರಲ್ಲೂ ವ್ಯಾಪಾರ ತಂತ್ರಜ್ಞಾನವೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಅನಗತ್ಯ ಸಂದೇಶಗಳನ್ನು ರವಾನಿಸದೇ ಆವಿಷ್ಕಾರಿತ ಸಂದೇಶ ರವಾನಿಸಬೇಕು. ಕಾನೂನು ಬಾಹಿರ ಚಟುವಟಿಕೆಗಳನ್ನು ಕೈಗೊಳ್ಳಬಾರದು ಎಂದರು.
ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ಪರೇಶ ಚಿಂಚೋಳೆ ಟ್ರೇಡ್ ಮಾರ್ಕ್, ಕಾಪಿರೈಟ್ ಕುರಿತು ವಿವರಣೆ ನೀಡಿದರು. ಪ್ರಾಚಾರ್ಯ ಡಾ| ಎಸ್.ಜಿ. ಡೊಳ್ಳೇಗೌಡ್ರು ಅಧ್ಯಕ್ಷತೆ ವಹಿಸಿ, ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಮಾತನಾಡಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ವಿವಾರ ಸಂಕಿರಣ ಉದ್ಘಾಟಿಸಿದರು. ಐ.ಕ್ಯು.ಎ.ಸಿ. ಸಂಯೋಜಕ ಡಾ| ಎಸ್.ಟಿ. ಸುಲೇಪೇಟಕರ್, ಕಾರ್ಯಕ್ರಮ ಸಂಯೋಜಕ ಡಾ| ರಾಮಕೃಷ್ಣರೆಡ್ಡಿ ಹಾಜರಿದ್ದರು. ವಿವಿಧ ಮಹಾ ವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು. ಮಹಾಲಕ್ಮೀ ನಿರೂಪಿಸಿದರು, ಪ್ರದೀಪಕುಮಾರ ವಂದಿಸಿದರು.