ಕಲಬುರಗಿ: ಪ್ರಸಕ್ತವಾಗಿ ಮುಂಗಾರು-ಹಿಂಗಾರು0 ಎರಡೂ ಕಾಲದ ಮಳೆ ಸಂಪೂರ್ಣ ಕೈ ಕೊಟ್ಟ ಪರಿಣಾಮ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಹಿಂದೆಂದೂ ಕಂಡರಿಯದಷ್ಟು ಉಲ್ಬಣಗೊಂಡಿದ್ದರೂ ಲೋಕಸಭೆ ಚುನಾವಣೆ ಕಾವಿನಲ್ಲಿ ಗೌಣವಾಗಿ ಕಾಣಿಸುತ್ತಿದೆ.
ಕಲಬುರಗಿ ಮಹಾನಗರಕ್ಕೆ ಈ ಹಿಂದೆ ಒಮ್ಮೆಯೂ 12ರಿಂದ 15 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗಿಲ್ಲ. ಬಹಳ ತಡವೆಂದರೆ ವಾರಕ್ಕೊಮ್ಮೆಯಾದರೂ ನೀರು ಪೂರೈಕೆಯಾಗಿದೆ. ಮಹಾನಗರದಲ್ಲಿ ಈ ಮುಂಚೆ ನಗರದ ಹೊರ ಭಾಗದ ಕೆಲ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು. ಆದರೆ ಈಗ ಮಹಾನಗರಾದ್ಯಂತ ಟ್ಯಾಂಕರ್ ಮೂಲಕ ನೀರು ಸರಬರಾಜು ಎನ್ನುವುದಾದರೆ ಕುಡಿಯುವ ನೀರಿನ ಪರಿಸ್ಥಿತಿ ಭೀಕರತೆ ನಿರೂಪಿಸುತ್ತದೆ.
ಹಳ್ಳಿಗಳಲ್ಲಿ ಜನರು, ಅದರಲ್ಲೂ ಮಹಿಳೆಯರು ಹೊಲ ಗದ್ದೆಗಳಲ್ಲಿನ ಬತ್ತಿ ಹೋಗುತ್ತಿರುವ ಬಾವಿಯತ್ತ ಅಲೆದಾಡಿ ನೀರು ತರುತ್ತಿದ್ದಾರೆ. ಆಗೊಮ್ಮೆ-ಈಗೊಮ್ಮೆ ಬರುವ ಟ್ಯಾಂಕರ್‌ಗಳಿಗೆ ಜನ ಮುಗಿ ಬೀಳುತ್ತಿದ್ದು, ಯಾರ ಕೈ ಜೋರು ಇರುತ್ತದೆಯೋ ಅವರಿಗೆ ನೀರು ಎನ್ನುವಂತಾಗಿದೆ. ತೋಟಗಳ ಬಾವಿಗಳಲ್ಲಿ ಇರುವ ನೀರನ್ನು ಮಾಲೀಕರು ತಮ್ಮ ಬೆಳೆಗಳಿಗೆ ಬೀಡದೇ ಜನರ ಉಪಯೋಗಕ್ಕೆ ಮೀಸಲಿಟ್ಟರೆ, ಕೆಲವು ಕಡೆ ನೀರಿಲ್ಲದಿದ್ದರೆ ತೋಟಗಾರಿಕೆ ಬೆಳೆಗಳೆಲ್ಲ ಒಣಗಿ ಹೋಗಿವೆ. ಕೆಲವು ವಸತಿ ಪ್ರದೇಶಗಳಲ್ಲಂತೂ ಬೆಳಗಿನ ಜಾವ ಮೂರ್‍ನಾಲ್ಕು ಕಿ.ಮೀ ನಡೆದು ನೀರು ತರಲಾಗುತ್ತಿದೆ.
ಚುನಾವಣೆ ಕಾವು: 43 ಡಿಗ್ರಿ ಸೆಲ್ಸಿಯಸ್ ಬಿಸಿಲಿಗಿಂತ ಲೋಕಸಭೆ ಚುನಾವಣೆ ಕಾವೇ ಜೋರಾಗಿದೆ. ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದರೂ ಅದರ ಕಡೆ ಲಕ್ಷ್ಯ ವಹಿಸದಿರುವ ಮಟ್ಟಿಗೆ ಲೋಕಸಭಾ ಚುನಾವಣೆ ಜೋರಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ಯಾರೇ ಎನ್ನದ ಪರಿಣಾಮ ಚುನಾವಣೆ ವಿಷಯದ್ದೇ ಚರ್ಚೆ ವ್ಯಾಪಕಗೊಂಡು ಕುಡಿಯುವ ನೀರಿನ ಸಮಸ್ಯೆ ಗೌಣವಾಗುತ್ತಿದೆ.
ಚುನಾವಣಾ ಅಭ್ಯರ್ಥಿಗಳಿಗೆ ಹಾಗೂ ಪ್ರಚಾರ ಮಾಡುವ ವಿವಿಧ ಪಕ್ಷಗಳ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಖಾಲಿ ಕೊಡಗಳ ದರ್ಶನವಾಗುತ್ತಿದ್ದರೂ ಯಾರೂ ಸ್ಪಂದಿಸುತ್ತಿಲ್ಲ. ಕೆಲ ಮುಖಂಡರು ಚುನಾವಣೆ ಮುಗಿಯಲಿ ನಂತರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂಬುದಾಗಿ ಹೇಳುತ್ತಿರುವ ಪರಿಣಾಮ, ಮಹಿಳೆಯರು ಹಾಗೂ ಗ್ರಾಮಸ್ಥರು ಸುಮ್ಮನಾಗಿದ್ದಾರೆ ಎನ್ನಲಾಗುತ್ತಿದೆ.
87 ಹಳ್ಳಿಗಳಿಗೆ ಟ್ಯಾಂಕರ್ ನೀರು
ಕಲಬುರಗಿ ಜಿಲ್ಲೆಯಲ್ಲಿ 87 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಫಜಲಪುರ ತಾಲೂಕಿನಲ್ಲಿ 18 ಹಳ್ಳಿಗಳು, ಆಳಂದ ತಾಲೂಕಿನಲ್ಲಿ 31, ಚಿಂಚೋಳಿ ತಾಲೂಕಿನಲ್ಲಿ 10, ಚಿತ್ತಾಪುರ ತಾಲೂಕಿನಲ್ಲಿ
06, ಕಲಬುರಗಿ ತಾಲೂಕಿನಲ್ಲಿ 04, ಜೇವರ್ಗಿ ತಾಲೂಕಿನಲ್ಲಿ 17 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅದೇ ರೀತಿ ಕಲಬುರಗಿ ಮಹಾನಗರದಲ್ಲಿ 25 ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.