Advertisement

ಕಲಬುರಗಿಯಲ್ಲಿ ನೀರು-ಮೇವಿಗೆ ತತ್ವಾರ

10:20 AM May 17, 2019 | Naveen |

ಕಲಬುರಗಿ: ಬಿಸಿಲೂರಿನ ಕಲಬುರಗಿ ಜಿಲ್ಲೆಯ ಜಲಾಶಯಗಳಲ್ಲಿ ನೀರು ಡೆಡ್‌ಸ್ಟೋರೇಜ್‌ಗೆ ನಿಂತಿದ್ದು, ಜಿಲ್ಲೆಯ ಜೀವನಾಡಿ ಭೀಮಾ ನದಿ ಸಂಪೂರ್ಣ ಬತ್ತಿದೆ. ನದಿ ತೀರದ ಗ್ರಾಮಗಳ ಜನರು ಹಾಗೂ ದನಕರುಗಳ ಪರದಾಟ ಹೇಳತೀರದಂತಾಗಿದೆ.

Advertisement

ನದಿ ಸಂಪೂರ್ಣ ಬತ್ತಿದ್ದರಿಂದ ನಾರಾಯಣಪುರ ಜಲಾಶಯದಿಂದ ಈಗಾಗಲೇ ಎರಡು ಸಲ ಭೀಮಾ ನದಿಗೆ ನೀರು ಹರಿ ಬಿಡಲಾಗಿತ್ತು. ಹೀಗಾಗಿ ಕಲಬುರಗಿ ಮಹಾನಗರ ಸೇರಿದಂತೆ ಇತರ ಗ್ರಾಮಗಳಿಗೆ ಸ್ವಲ್ಪ ಕುಡಿಯಲು ನೀರು ಆಸರೆ ಆದಂತಾಗಿದೆ.

ಒಂದು ವೇಳೆ ನಾರಾಯಣಪುರ ಜಲಾಶಯದಿಂದ ನೀರು ಬಿಡದೇ ಇದ್ದರೆ ಇಡೀ ಕಲಬುರಗಿ ಮಹಾನಗರ ನೀರಿಲ್ಲದೇ ಪರದಾಡಬೇಕಿತ್ತು. ಬಿಡಲಾದ ನೀರು ಈಗ ಕರಗುತ್ತಾ ಬಂದಿದೆ. ಭೀಮಾ ಏತ ನೀರಾವರಿ ಜಲಾಶಯ ಸೊನ್ನ ಹಾಗೂ ಕಲಬುರಗಿ ನಗರಕ್ಕೆ ನೀರು ಪೂರೈಕೆಯ ಸರಡಗಿ ಬ್ಯಾರೇಜ್‌ ಬಳಿ ಮಾತ್ರ ನೀರು ನಿಂತಿದೆ. ಈ ನೀರು ಒಂದೂವರೆ ತಿಂಗಳು ಕಾಲ ಆಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಉಳಿದೆಡೆ ಒಂದು ಹನಿಯೂ ನೀರಿಲ್ಲ.

ಕಳೆದ ವರ್ಷ ಮಳೆ ಬಾರದೇ ಇದ್ದುದ್ದರಿಂದ ಹಳ್ಳ-ಕೊಳ್ಳಗಳು ಮೊದಲೇ ಬತ್ತಿ ಹೋಗಿದ್ದವು. ಬಾವಿ ಹಾಗೂ ಬೋರವೆಲ್ಗಳು ಈಗ ಸಂಪೂರ್ಣ ಬತ್ತಿ ಹೋಗಿವೆ. ಹೀಗಾಗಿ ನೀರಿನ ಹಾಹಾಕಾರ ಮುಗಿಲು ಮುಟ್ಟಿದೆ. ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿರುವ ಬಾವಿ ಹಾಗೂ ಬೋರವೆಲ್ಗಳು ಶೇ. 60ರಷ್ಟು ಸಂಪೂರ್ಣ ಬತ್ತಿವೆ. ನೀರಾವರಿಗೆ ಮೀಸಲಿಟ್ಟ ಬಾವಿ, ಬೋರವೆಲ್ಗಳ ನೀರನ್ನು ಜನ-ಜಾನುವಾರುಗಳಿಗೆ ಮಾತ್ರ ಉಪಯೋಗಿಸಲಾಗುತ್ತಿದೆ. ಎಲ್ಲೆಡೆ ಕೊಡ ನೀರಿಗಾಗಿಯೂ ಜನರು ಪರದಾಡುತ್ತಿದ್ದಾರೆ.

ಬೆಣ್ಣೆತೋರಾ ಜಲಾಶಯದಲ್ಲಿ ಒಟ್ಟಾರೆ 5.297 ಟಿಎಂಸಿ ಅಡಿ ನೀರಿನ ಸಂಗ್ರಹಣಾ ಸಾಮರ್ಥ್ಯವಿದ್ದರೆ ಈಗ 1.77 ಟಿಎಂಸಿ ಅಡಿ ನೀರು ಮಾತ್ರವಿದೆ. ಕಳೆದ ವರ್ಷ ಇದೇ ವೇಳೆ 3.09 ಟಿಎಂಸಿ ಅಡಿ ನೀರಿತ್ತು. ಇದೇ ರೀತಿ ಭೀಮಾ ಏತ ನೀರಾವರಿ ಜಲಾಶಯದಲ್ಲಿ 3.166 ಟಿಎಂಸಿ ಅಡಿ ನೀರಿನ ಪೈಕಿ 0.402 ಟಿಎಂಸಿ ಅಡಿ ನೀರು ಮಾತ್ರವಿದೆ. ಇದೇ ತೆರನಾದ ಪರಿಸ್ಥಿತಿ ಎಲ್ಲ ಜಲಾಶಯಗಳಲ್ಲಿದೆ.

Advertisement

ಗೋಶಾಲೆ ಇಲ್ಲ: ಜಿಲ್ಲೆಯಲ್ಲಿ 14 ಕಡೆ ಮೇವು ಬ್ಯಾಂಕ್‌ ತೆರೆಯಲಾಗಿದೆ. ಆದರೆ ಒಂದೂ ಗೋಶಾಲೆ ತೆರೆದಿಲ್ಲ. ಜಿಲ್ಲೆಯ ಅಫಜಲಪುರ ತಾಲೂಕಿನ ರೇವೂರ (ಬಿ), ಅತನೂರ, ಆಳಂದ ತಾಲೂಕಿನ ಆಳಂದ, ಖಜೂರಿ, ಚಿತ್ತಾಪುರ ತಾಲೂಕಿನ ಚಿತ್ತಾಪುರ ಪಟ್ಟಣ, ನಾಲವಾರ, ಜೇವರ್ಗಿ ತಾಲೂಕಿನ ಆಂದೋಲಾ, ಯಡ್ರಾಮಿ, ಕಲಬುರಗಿ ತಾಲೂಕಿನ ಅವರಾದ, ಪಟ್ಟಣ ಗ್ರಾಮ, ಚಿಂಚೋಳಿ ತಾಲೂಕಿನ ಕೋಡ್ಲಿ, ಐನಾಪುರ, ಸೇಡಂ ತಾಲೂಕಿನ ಮಳಖೇಡ ಹಾಗೂ ಮುಧೋಳದಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಲಾಗಿದೆ. ಈ 14 ಮೇವು ಬ್ಯಾಂಕ್‌ಗಳಿಗೆ 94605 ಕೆ.ಜಿ ಮೇವು ಪೂರೈಕೆಯಾಗಿದ್ದು, ಇದರಲ್ಲಿ 49704 ಕೆ.ಜಿ ಮೇವು ಮಾರಾಟವಾಗಿದೆ. ಕೆ.ಜಿ.ಗೆ 2ರೂ.ನಂತೆ ಮೇವನ್ನು ಮಾರಾಟ ಮಾಡಲಾಗುತ್ತಿದೆ.

58 ಜಲ ಮೂಲಗಳು ಬಾಡಿಗೆ: ಜಿಲ್ಲಾದ್ಯಂತ 64 ಜಲಮೂಲಗಳನ್ನು ಬಾಡಿಗೆ ಪಡೆಯಲಾಗಿದೆ. ಜಿಲ್ಲಾದ್ಯಂತ 133 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕಲಬುರಗಿ ಮಹಾನಗರದಲ್ಲಿ ಮೊದಲ ಬಾರಿಗೆ 20ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಟ್ಯಾಂಕರ್‌ ನೀರು ಸರಬರಾಜು ಮಾಡಲಾಗುತ್ತಿದೆ.

ನೀರು ಬಿಡುಗಡೆಗೆ ಪತ್ರ
ಭೀಮಾ ನದಿ ಬತ್ತುತ್ತಿರುವುದರಿಂದ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡುಗಡೆ ಮಾಡುವಂತೆ ಕಳೆದ ಫೆಬ್ರುವರಿ 19ರಂದೇ ಕಲಬುರಗಿ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಪತ್ರ ಬರೆದಿದ್ದಾರೆ. ಆದರೆ ಪತ್ರ ಬರೆದಿದ್ದೇಯಾಗಿದೆ. ನೀರು ಮಾತ್ರ ಇಂದಿನ ದಿನದವರೆಗೂ ಬಂದಿಲ್ಲ. ಕೃಷ್ಣಾ ನದಿಗೆ ನೀರು ಬಿಡಿಸುವಲ್ಲಿ ಆ ಭಾಗದ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಿ ನೀರು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಡುಗಡೆ ಹಾಗೂ ಈ ಹಿಂದೆ ಕೊಟ್ಟಿರುವ ನೀರಿನ ಬಾಕಿ ಹಣ ಪಾವತಿ ಕುರಿತಾಗಿ ಗುರುವಾರ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವುದಾಗಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next