Advertisement
ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿರುವುದರಿಂದ ಬೇಸಿಗೆ ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತಲೆದೋರಿತ್ತು. ಈಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕುಡಿಯುವ ನೀರಿಗೂ ಜನ ಪರದಾಡುವಂತಾಗಿದೆ. ನೀರಿನ ಸಮಸ್ಯೆ ಪರಿಹರಿಸುವುದೇ ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದ್ದು, ನೀರು ಪೂರೈಕೆ ಮಾರ್ಗ ಕಂಡುಕೊಳ್ಳಲು ಬೆವರು ಸುರಿಸುತ್ತಿದ್ದಾರೆ.
Related Articles
Advertisement
780 ಗ್ರಾಮಗಳ ಪೈಕಿ ಜಲ ಮೂಲಗಳನ್ನೇ ಕಳೆದುಕೊಂಡಿರುವ 111 ಗ್ರಾಮಗಳಿಗೆ ವಿವಿಧ ಜಲ ಮೂಲಗಳಿಂದ ನೀರು ಪೂರೈಸುವ ಕಾರ್ಯವಾಗುತ್ತಿದೆ. ಇದರಲ್ಲಿ 71 ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸಲಾಗುತ್ತಿದ್ದು, 128 ಟ್ಯಾಂಕರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ದಿನಕ್ಕೆ 410 ಟ್ರಿಪ್ ಟ್ಯಾಂಕರ್ ನೀರು ಸರಬರಾಜು ಆಗುತ್ತಿದೆ. ಜತೆಗೆ 43 ಗ್ರಾಮಗಳಿಗೆ 51 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು, ಅಲ್ಲಿಂದ ನೀರು ಸರಬರಾಜು ಮಾಡಲಾಗುತ್ತಿದೆ.
ಆಳಂದ, ಅಫಜಲಪುರ, ಜೇವರ್ಗಿ ತಾಲೂಕಿನಲ್ಲಿ ನೀರಿನ ಬವಣೆ ಹೆಚ್ಚಾಗಿದೆ. ಆಳಂದದಲ್ಲಿ ಅತ್ಯಧಿಕ 43 ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಮಾದನ ಹಿಪ್ಪರಗಾ, ಧುತ್ತರಗಾಂವ ಗ್ರಾಮಗಳಿಗೆ ಟ್ಯಾಂಕರ್ ಮತ್ತು ಇತರ ಬಾಡಿಗೆ ಜಲ ಮೂಲಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಅದೇ ರೀತಿ ಅಫಜಲಪುರದ 18 ಗ್ರಾಮಗಳು, ಜೇವರ್ಗಿಯ 15 ಗ್ರಾಮಗಳಲ್ಲೂ ತೀವ್ರತರನಾದ ನೀರಿನ ಸಮಸ್ಯೆ ಇದೆ.
ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಕೆ ತಾತ್ಕಾಲಿಕವಾಗಿದೆ. ಈಗಾಗಲೇ ಬತ್ತಿ ಹೋಗಿರುವ ಸುಮಾರು 800 ಕೊಳವೆ ಬಾವಿಗಳ ಪಟ್ಟಿ ಮಾಡಲಾಗಿದೆ. ಅವುಗಳನ್ನು ಇನ್ನಷ್ಟು ಆಳಕ್ಕೆ ಕೊರೆಸಿ ನೀರಿನ ಸಮಸ್ಯೆ ನೀಗಿಸಲು ಕ್ರಮಕೈಗೊಳ್ಳುವ ಯೋಜನೆ ಹಾಕಿಕೊಳ್ಳಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಮಹಾನಗರವೂ ಭಿನ್ನವಲ್ಲ!: ಕುಡಿಯುವ ನೀರಿನ ಸಮಸ್ಯೆ ಎನ್ನುವುದು ಕೇವಲ ಗ್ರಾಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಮಹಾನಗರದ ಜನತೆಯೂ ನೀರಿಗಾಗಿ ಪರಿತಪಿಸುತ್ತಿದ್ದಾರೆ. ನಗರದ 55 ವಾರ್ಡ್‌ಗಳ ಪೈಕಿ ನಾಲ್ಕು ವಾರ್ಡ್‌ಗಳು ದಿನದ 24 ಗಂಟೆ ನೀರು ಸರಬರಾಜು ಆಗುತ್ತಿದ್ದರೆ, ಉಳಿದ ವಾರ್ಡ್‌ಗಳಲ್ಲಿ ಮೂರ್‍ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತಿತ್ತು. ಆದರೆ, ಈಗ ಕೆಲ ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ನೀರು ಸರಬರಾಜು ಮಾಡುವುದು ಕಷ್ಟವಾಗಿದೆ.
ನೀರಿನ ಸಮಸ್ಯೆ ಪರಿಹರಿಸಲು ಮತ್ತು ಜನತೆಗೆ ಸ್ಪಂದಿಸಲೆಂದೇ ಪ್ರತಿ ವಾರ್ಡ್‌ಗೆ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಸದ್ಯ 21 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಅಧಿಕವಾಗಿದೆ. ಆರು ಟ್ಯಾಂಕರ್‌ಗಳ ಮೂಲಕ ನೀರಿನ ಬವಣೆ ಎದುರಿಸುವ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿದೆ. ಪ್ರತಿ ದಿನ ಒಂದು ಟ್ಯಾಂಕರ್‌ನಿಂದ ನಾಲ್ಕೈದು ಟ್ರಿಪ್ ನೀರು ಸರಬರಾಜು ಆಗುತ್ತಿದ್ದು, ಒಟ್ಟು 30ರಿಂದ 32 ಟ್ರಿಪ್ ನೀರು ಪೂರೈಕೆ ಮಾಡಲಾಗುತ್ತಿದೆ.
ಟ್ಯಾಂಕರ್‌ಗಳಿಗೆ ಜಿಪಿಎಸ್: ನೀರು ಪೂರೈಕೆ ಮಾಡುತ್ತಿರುವ ಎಲ್ಲ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಈ ಮೂಲಕ ಟ್ಯಾಂಕರ್ ನೀರು ಪೂರೈಸಲು ಎಲ್ಲೆಲ್ಲಿ ಸಂಚರಿಸಲಿದೆ ಎನ್ನುವುದರ ಮೇಲೂ ನಿಗಾ ವಹಿಸಲಾಗುತ್ತಿದೆ.
ಮಹಾ ನಗರದಲ್ಲಿ ೧೧೦ ಹೊಸ ಬೋರ್ ವೆಲ್ಕಲಬುರಗಿ ನಗರದಲ್ಲಿ ನೀರಿನ ಸಮಸ್ಯೆ ನೀಗಿಸಲು ಎಲ್ಲ 55 ವಾರ್ಡ್‌ಗಳಲ್ಲಿ ತಲಾ ಎರಡು ಕೊಳವೆ ಬಾವಿಗಳನ್ನು ಮಹಾನಗರ ಪಾಲಿಕೆ ಕೊರೆಸುತ್ತಿದೆ. 14ನೇ ಹಣಕಾಸು ಯೋಜನೆಯ ಉಳಿತಾಯ ಮೊತ್ತ 1.58 ಕೋಟಿ ರೂ. ವೆಚ್ಚದಲ್ಲಿ 110 ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ. ಈಗಾಗಲೇ ಗುರುತಿಸಲಾದ ಸ್ಥಳಗಳಲ್ಲಿ ಶುಕ್ರವಾರದಿಂದಲೇ ಕೊಳವೆ ಬಾವಿ ಕೊರೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಹಾನಗರದಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಟ್ಯಾಂಕರ್ ಮೂಲಕ ಪೂರೈಸುವುದ ಜತೆಗೆ ಜನ ನೀರಿಲ್ಲದೇ ಪರದಾಡುವುದನ್ನು ತಪ್ಪಿಸಲು ಈಗಾಗಲೇ ಎರಡು ಖಾಸಗಿ ಜಲ ಮೂಲಗಳನ್ನು ಗುರುತಿಸಿ ಇಟ್ಟುಕೊಳ್ಳಲಾಗಿದೆ.
•ಬಿ.ಫೌಜಿಯಾ ತರನ್ನುಮ್,
ಆಯುಕ್ತರು, ಮಹಾನಗರ ಪಾಲಿಕೆ ಜಿಲ್ಲೆಯಲ್ಲಿ 780 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ. ನೀರಿನ ಹಾಹಾಕಾರ ತಪ್ಪಿಸಲು 111 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಜತೆಗೆ ಕುಡಿಯಲು ನೀರಿನ ಅಭಾವ ಕಂಡು ಬಂದ ತಕ್ಷಣವೇ ವಿವಿಧ ಮೂಲಗಳಿಂದ ನೀರು ಸರಬರಾಜು ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.
•ಡಾ| ಪಿ.ರಾಜಾ,
ಸಿಇಒ, ಜಿಲ್ಲಾ ಪಂಚಾಯಿತಿ ರಂಗಪ್ಪ ಗಧಾರ