Advertisement

ಬಾರದ ಮಳೆ..ಮೇಲೇಳದ ಬೆಳೆ

01:10 PM Sep 01, 2019 | Naveen |

ಹಣಮಂತರಾವ ಭೈರಾಮಡಗಿ
ಕಲಬುರಗಿ:
ರಾಜ್ಯದಲ್ಲಿ ಒಂದೆಡೆ ಭಾರಿ ಪ್ರವಾಹ ಉಂಟಾಗಿದ್ದರೆ, ಮತ್ತೂಂದೆಡೆ ಭಾರೀ ಮಳೆಯಾಗುತ್ತಿದ್ದರೆ ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಕಳೆದ ವರ್ಷವೂ ಬರಗಾಲ ಎದುರಿಸಿದ್ದ ಜನತೆಗೆ ಈ ಸಲವೂ ಕಂಗಾಲಾಗುವಂತೆ ಮಾಡಿದೆ.

Advertisement

ಹೈದ್ರಾಬಾದ ಕರ್ನಾಟಕದ ವಾಣಿಜ್ಯ ಬೆಳೆ ತೊಗರಿ ಮೇಲೇಳದೇ ಬಾಡುತ್ತಿದೆ. ಕೆಲವೆಡೆ ಸ್ವಲ್ಪ ಉತ್ತಮ ಮಳೆಯಾಗಿದ್ದರಿಂದ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು, ಸೋಯಾಬಿನ್‌ ಸ್ವಲ್ಪ ಪ್ರಮಾಣದಲ್ಲಿ ಚಿಗುರುತ್ತಿವೆ.

ಕಲಬುರಗಿ ಜಿಲ್ಲೆಯಲ್ಲಿ ಈಗಲೂ 73 ಹಳ್ಳಿಗಳಲ್ಲಿ ಟ್ಯಾಂಕರ್‌ ನೀರನ್ನೇ ಸರಬರಾಜು ಮಾಡಲಾಗುತ್ತಿದೆ. ಇದೇ ತೆರನಾದ ಸ್ಥಿತಿ ರಾಯಚೂರು ಹಾಗೂ ಕೊಪ್ಪಳದಲ್ಲೂ ಇದೆ. ಬಳ್ಳಾರಿ ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭದ ಜೂನ್‌ 7ರಿಂದ ಸೆಪ್ಟೆಂಬರ್‌ 28ರವರೆಗೆ 227 ಮಿ.ಮೀ ಮಳೆ ಪೈಕಿ 218 ಮೀ.ಮೀ ಮಳೆ, ಕೊಪ್ಪಳದಲ್ಲಿ 221 ಮಿ.ಮೀ ಪೈಕಿ 211 ಮಿ.ಮೀ ಮಳೆ, ರಾಯಚೂರು ಜಿಲ್ಲೆಯಲ್ಲಿ 285 ಮಿ.ಮೀ ಪೈಕಿ 181 ಮಿ.ಮೀ ಮಾತ್ರ ಮಳೆಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 410 ಮಿ.ಮೀ ಮಳೆ ಪೈಕಿ 319 ಮಿ.ಮೀ, ಯಾದಗಿರಿ ಜಿಲ್ಲೆಯಲ್ಲಿ 400 ಮಿ.ಮೀ ಪೈಕಿ 290 ಮಿ.ಮೀ, ಬೀದರ ಜಿಲ್ಲೆಯಲ್ಲಿ 492 ಮಿ.ಮೀ ಪೈಕಿ 343 ಮಿ.ಮೀ ಮಳೆಯಾಗಿದೆ. ಒಟ್ಟಾರೆ ಹೈ.ಕ ಭಾಗದಲ್ಲಿ ಶೇ.20 ಮಳೆ ಕೊರತೆಯಾಗಿದೆ.

ಕಲಬುರಗಿ ವಿಭಾಗಗಿಂತ ಹೆಚ್ಚಿನ ಮಳೆಯಾಗಿರುವ ಮೈಸೂರು ಭಾಗದಲ್ಲಿ ಮೋಡ ಬಿತ್ತನೆ ಮಾಡಲಾಗುತ್ತಿದ್ದರೆ ಹೈ.ಕ ಭಾಗದಲ್ಲಿ ಮಳೆ ಕೊರತೆ ಹೆಚ್ಚಿನ ಪ್ರಮಾಣದಲ್ಲಿದ್ದರೂ ಮೋಡ ಬಿತ್ತನೆ ಮಾಡುತ್ತಿಲ್ಲ. ವಾರದೊಳಗೆ ಮಳೆ ಬಾರದಿದ್ದರೆ ಮುಂಗಾರು ಹಂಗಾಮಿನ ಬೆಳೆಗಳೆಲ್ಲ ಶೇ. 60 ಹಾನಿಯಾಗುತ್ತದೆ.

ಮುಂಗಾರು ಮಳೆ ಆರಂಭವಾಗಿ ಮೂರು ತಿಂಗಳಾಗಿದೆ. ಅಲ್ಲದೇ ಇದೇ ಆಗಸ್ಟ್‌ 31ರಿಂದ ಹಿಂಗಾರಿಯ ಹುಬ್ಬಿ ಮಳೆ ಆರಂಭವಾಗುತ್ತಿದೆ. ಯಾವಾಗಲೂ ಮುಂಗಾರು ಹಂಗಾಮಿನ ಕೊನೆ ಎರಡು ಮಳೆ ಸರಿಯಾದ ಪ್ರಮಾಣದಲ್ಲಿ ಬರುತ್ತಿದ್ದವು. ಆದರೆ ಈ ಸಲ ಸಂಪೂರ್ಣ ಕೈ ಕೊಟ್ಟಿವೆ. ಪ್ರಸಕ್ತ ಮಳೆಗಾಲದಲ್ಲಿ ಹೈ.ಕ ಭಾಗದ ಯಾವ ಜಲಾಶಯಗಳು ಭರ್ತಿಯಾಗಿಲ್ಲ. ಪ್ರವಾಹ ಬಂದು ಜಿಲ್ಲೆಯ ಭೀಮಾ ನದಿಯ ಏತ ನೀರಾವರಿ ಹಾಗೂ ಕೃಷ್ಣಾ ನದಿಯ ಯಾದಗಿರಿ ಜಿಲ್ಲೆಯ ನಾರಾಯಣಪುರ (ಬಸವ ಸಾಗರ) ಜಲಾಶಯ ಭರ್ತಿಯಾಗಿದ್ದನ್ನು ಬಿಟ್ಟರೆ ಯಾವುದೇ ಜಲಾಶಯಕ್ಕೆ ನೀರು ಬಂದಿಲ್ಲ.

Advertisement

ನಡೆಯದ ಕೆಡಿಪಿ ಸಭೆ: ಬರಗಾಲ ಹಾಗೂ ಮಳೆ ಅಭಾವದಿಂದ ಹಾನಿ ಕುರಿತು ಚರ್ಚಿಸಬೇಕಾದ ಕೆಡಿಪಿ ಸಭೆ ಒಂದು ವರ್ಷದಿಂದ ಜಿಲ್ಲೆಯಲ್ಲಿ ನಡೆದಿಲ್ಲ.

ನಲುಗಿ ಹೋದ ಅನ್ನದಾತ
ಕಳೆದ 2018-19ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆಹಾನಿಗೆ (ಇನ್‌ಪುಟ್ ಸಬ್ಸಿಡಿ) ಬೇರೆ ಜಿಲ್ಲೆಗಳಲ್ಲಿ ಪರಿಹಾರ ಬಂದರೆ ಕಲಬುರಗಿ ಜಿಲ್ಲೆಗೆ ಮುಂಗಾರಿನ 290 ಕೋಟಿ ರೂ. ಹಾಗೂ ಹಿಂಗಾರಿನ 162 ಕೋ.ರೂ ಬಿಡುಗಡೆಯಾಗಬೇಕಿದೆ. ಈ ಪರಿಹಾರವಾದರೂ ಬಂದಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಮತ್ತೂಂದೆಡೆ ಸಾಲ ಮನ್ನಾ ಆಗದಿರುವುದರಿಂದ ಜತೆಗೆ ಹೊಸದಾಗಿ ಸಾಲ ಸಿಗದ ಹಿನ್ನೆಲೆಯಲ್ಲಿ ನೇಗಿಲಯೋಗಿ ಪಾತಾಳಕ್ಕಿಳಿದಿದ್ದು, ತಲೆ ಮೇಲೈ ಕೆ ಇಟ್ಟುಕೊಳ್ಳುವಂತಾಗಿದೆ. ಮತ್ತೂಂದೆಡೆ ಕಳೆದ ವರ್ಷ ಮಳೆ ಕೊರತೆಯಾಗಿ ಶೇ. 70 ಬೆಳೆಹಾನಿಯಾಗಿದ್ದರೂ ಕಲಬುರಗಿ ಜಿಲ್ಲೆಗೆ ಕೇವಲ 10 ಕೋಟಿ ರೂ. ಬೆಳೆವಿಮೆ ಬಂದಿದೆ. ಹೀಗೆ ಕಲಬುರಗಿ ರೈತ ಮಳೆ ಅಭಾವ, ಸಿಗದ ಸಾಲ, ಬಾರದ ಬೆಳೆವಿಮೆ ಹಾಗೂ ನೆರವಿಗೆ ಬಾರದ ಸರ್ಕಾರದಿಂದ ನಲುಗಿ ಹೋಗಿದ್ದಾನೆ.

ವಾರದೊಳಗೆ ಮಳೆ ಬಾರದಿದ್ದರೆ ತೊಗರಿ ಬೆಳವಣಿಗೆ ಮೇಲೆ ಭಾರೀ ಹೊಡೆತ ಬೀಳುತ್ತದೆ. ಕಲಬುರಗಿ ಜಿಲ್ಲೆಯಾದ್ಯಂತ ಮಳೆ ಬಿದ್ದಿಲ್ಲ. ಒಂದು ಹೋಬಳಿಯಲ್ಲಿ ಮಳೆ ಬಿದ್ದರೆ ಪಕ್ಕದ ಹೋಬಳಿಯಲ್ಲೇ ಮಳೆಯೇ ಬಿದ್ದಿಲ್ಲ. ಹೀಗಾಗಿ ಮಳೆ ಸಮತೋಲನವಾಗಿಲ್ಲ. ಒಟ್ಟಾರೆ ಮಳೆ ಕೊರತೆ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ.
ರಿತೇಂದ್ರನಾಥ ಸುಗೂರ,
 ಜಂಟಿ ಕೃಷಿ ನಿರ್ದೇಶಕ

ಪ್ರವಾಹದಿಂದ ಆಗಿರುವ ಹಾನಿ ಕಣ್ಣಿಗೆ ಕಾಣುತ್ತದೆ. ಆದರೆ ಮಳೆ ಬಾರದಿರುವ ಹಾನಿ ವ್ಯಾಪಕ ಪರಿಣಾಮ ಬೀರುತ್ತದೆ. ಮಳೆ ಕೊರತೆಯಿಂದ ಎಲ್ಲ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ. ಕಳೆದ ವರ್ಷದ ಮಳೆ ಕೊರತೆ ನಡುವೆ ಈ ವರ್ಷವೂ ಮಳೆ ನಾಪತ್ತೆಯಾಗಿರುವುದು ನಿಜಕ್ಕೂ ರೈತನಿಗೆ ದಿಕ್ಕು ತೋಚದಂತಾಗಿದೆ.
ಶರಣಗೌಡ ಪಾಟೀಲ,
 ಜಿಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next