ಕಲಬುರಗಿ: ದಶ ದಿಕ್ಕುಗಳಿಂದ ಕಲಬುರಗಿ ಮಹಾನಗರ ಬೆಳೆಯುತ್ತಿದ್ದು, ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜತೆಗೆ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆಯೂ ದಿನೇ-ದಿನೇ ಅಧಿಕವಾಗುತ್ತಿದ್ದು, ಕಳೆದ ಆರೇ ತಿಂಗಳಲ್ಲಿ 54,695 ಪ್ರಕರಣಗಳು ದಾಖಲಾಗಿವೆ. ಬರೋಬ್ಬರಿ 68,58,700 ರೂ. ದಂಡವನ್ನು ಸಂಚಾರಿ ಪೊಲೀಸರು ವಿಧಿಸಿದ್ದಾರೆ.
Advertisement
ನಗರದಲ್ಲಿ ದ್ವಿಚಕ್ರ ವಾಹನ, ಆಟೋ ರಿಕ್ಷಾ, ನಾಲ್ಕು ಚಕ್ರದ ವಾಹನ, ಬಸ್‌ಗಳ ಓಡಾಟ ಹೆಚ್ಚುತ್ತಿದೆ. ಹೀಗಾಗಿ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತಿರುವ ಜತೆಗೆ ಸಂಚಾರಿ ನಿಯಮ ಉಲ್ಲಂಘಿಸುವರಿಗೇನೂ ಕೊರತೆ ಇಲ್ಲ. ಅತೀ ವೇಗದ ಚಾಲನೆ, ಟ್ರಾಫಿಕ್ ಸಿಗ್ನಲ್ನಲ್ಲಿ ಎರ್ರಾಬಿರ್ರಿ ನುಗ್ಗುವುದು, ಕುಡಿದು ವಾಹನ ಚಲಾಯಿಸುವುದು, ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವುದು, ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ವಾಹನದ ದಾಖಲೆ ಇಲ್ಲದೇ ಇರುವುದು, ಚಾಲನೆ ಪರವಾನಿಗೆ ಇಲ್ಲದೇ ವಾಹನ ಚಲಾಯಿಸುವುದು.. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಟ್ರಾಫಿಕ್ ರೂಲ್ಸ್ಗಳನ್ನು ಬ್ರೇಕ್ ಮಾಡುವವರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ.
Related Articles
Advertisement
ನಶೆಯಲ್ಲಿದ್ದವರಿಗೂ ಶಾಕ್: ಜನವರಿಯಿಂದ ಜೂನ್‌ವರೆಗೆ ನಗರಾದ್ಯಂತ ಸಂಚಾರಿ ನಿಮಯ ಉಲ್ಲಂಘನೆಗೆ ಸಂಬಂಧಪಟ್ಟ ಒಟ್ಟು 54,695 ಪ್ರಕರಣಗಳನ್ನು ದಾಖಲಿಸಲಾಗಿದ್ದು, 68,58,700 ರೂ. ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಅತಿ ವೇಗದ 503 ಪ್ರಕರಣಗಳು ದಾಖಲಾಗಿದ್ದು, 79,800 ದಂಡ ಹಾಕಲಾಗಿದೆ. ಕುಡಿದು ವಾಹನ ಚಾಲನೆ ಮಾಡಿದವರ ವಿರುದ್ಧ 406 ಪ್ರಕರಣಗಳನ್ನು ಹಾಕಿ 7,81,300ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊಬೈಲ್-ಸಿಸಿಟಿವಿ ಕಣ್ಣು: ಸಂಚಾರಿ ನಿಯಮ ಉಲ್ಲಂಘನೆ ತಡೆಯಲು ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ ಮಾತ್ರವಲ್ಲದೇ, ಪ್ರಮುಖ 13 ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಜತೆಗೆ ಕಣ್ತಪ್ಪಿಸಿ ಓಡಿ ಹೋಗುವವರನ್ನು ಸೆರೆ ಹಿಡಿಯಲು ಟ್ರಾಫಿಕ್ ಪೊಲೀಸರಿಗೆ ಸಂಚಾರಿ ನಿಯಮ ಸುಧಾರಿತ ಆ್ಯಪ್‌ವುಳ್ಳ 50 ಮೊಬೈಲ್ಗಳನ್ನು ನೀಡಲಾಗಿದೆ. ಇವು ವಾಹನ ಸವಾರರ ಮೇಲೆ ಮೂರನೇ ಕಣ್ಣಾಗಿ ಕಾರ್ಯ ನಿರ್ವಹಿಸುತ್ತಿವೆ.
ಕ್ಯಾಮರಾ ಮತ್ತು ಸಿಸಿಟಿವಿಯಲ್ಲಿ ಸೆರೆಯಾಗುವ ದೃಶ್ಯಗಳು ನೇರವಾಗಿ ನಗರದ ಚೌಕ್ ಸರ್ಕಲ್ನಲ್ಲಿರುವ ಸಂಚಾರಿ ನಿಯಂತ್ರಣ ಕೊಠಡಿಯಲ್ಲಿ ವೀಕ್ಷಿಸಲಾಗುತ್ತಿದೆ. ಅಲ್ಲಿಂದ ವಾಹನದ ಸಂಖ್ಯೆ ಆಧಾರದ ಮೇಲೆ ಮನೆಗೆ ನೋಟಿಸ್ ಜಾರಿ ಮಾಡುವ ವ್ಯವಸ್ಥೆ ಕಳೆದ ಒಂದು ತಿಂಗಳಿಂದ ಜಾರಿಯಲ್ಲಿದೆ. ಇದುವರೆಗೆ 1,100 ನೋಟಿಸ್‌ಗಳನ್ನು ಸಂಚಾರ ನಿಯಮ ಉಲ್ಲಂಘಿಸಿದವರ ಮನೆಗಳಿಗೆ ರವಾನಿಸಲಾಗಿದೆ.
ಸೂಚಕ ಫಲಕ ಅಳವಡಿಸಿ: ರಸ್ತೆ ಸುರಕ್ಷತೆ ಸಂಬಂಧ ಪೊಲೀಸರು ಕೈಗೊಳ್ಳುತ್ತಿರುವ ಕ್ರಮಗಳನ್ನು ಸಾರ್ವಜನಿಕರು ಸ್ವಾಗತಿಸುತ್ತಿದ್ದಾರೆ. ಆದರೆ, ಪ್ರಮುಖ ಸ್ಥಳದಲ್ಲಿ ಸಂಚಾರ ನಿಯಮ ಫಲಕ, ನೋ ಪಾರ್ಕಿಂಗ್ ಫಲಕ, ರಸ್ತೆ ಗುರುತುಗಳ ಫಲಕಗಳು ಇಲ್ಲ. ಇವುಗಳನ್ನು ಅಳವಡಿಸುವ ಕೆಲಸವಾಗಬೇಕೆಂಬ ಒತ್ತಾಯ ನಾಗರಿಕರಿಂದ ಕೇಳಿ ಬಂದಿದೆ.
246 ದಾಖಲೆ ಅಮಾನತುಆಟೋಗಳಲ್ಲಿ ಮಿತಿ ಮೀರಿ ವಿದ್ಯಾರ್ಥಿಗಳು ಸಾಗಿಸುವುದು ಮತ್ತು ಸರಕು ವಾಹನಗಳಲ್ಲಿ ಜನರ ಸಾಗಾಟ ಕುರಿತ 246 ಪ್ರಕರಣಗಳು ದಾಖಲಾಗಿವೆ. ಸಂಚಾರ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಾಹನ ಪರವಾನಗಿ, ಚಾಲಕರ ಪರವಾನಗಿ ರದ್ದು ತೀರ್ಮಾನಿಸಲಾಗಿದ್ದು, ಈ ಸಂಬಂಧ ಆರ್‌ಟಿಒ ಅಧಿಕಾರಿಗಳಿಗೆ ಪೊಲೀಸರು ಶಿಫಾರಸು ಮಾಡಿದ್ದಾರೆ. ಸಂಚಾರಿ ನಿಯಮ ಪಾಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು, ವಾಹನ ಚಾಲಕರು, ಆಟೋ ಚಾಲಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಒಂದು ದಿನ ವೇಗದ ಚಾಲನೆ, ಮತ್ತೂಂದು ದಿನ ಮೊಬೈಲ್ ಬಳಕೆ, ಇನ್ನೊಂದು ದಿನ ದಾಖಲೆ ಪರಿಶೀಲನೆ, ಹೀಗೆ ವೇಳಾಪಟ್ಟಿ ಹಾಕಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ.
•ಪ್ರಸನ್ನ ದೇಸಾಯಿ,
ಹೆಚ್ಚುವರಿ ಎಸ್‌ಪಿ ರಾಮ ಮಂದಿರ ವೃತ್ತದ ಸಮೀಪ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಲಾಗಿದೆ ಎಂದು ಒಂದು ಸಾವಿರ ರೂ. ದಂಡದ ನೋಟಿಸ್‌ನ್ನು ಮನೆಗೆ ಕಳುಹಿಸಲಾಗಿತ್ತು. ದಂಡ ತುಂಬಿದ್ದೇನೆ. ಆದರೆ, ಅಲ್ಲಿ ವಾಹನ ನಿಲ್ಲಿಸಬೇಡಿ ಎನ್ನುವ ಯಾವ ಸೂಚಕ ಫಲಕವನ್ನು ಅಳವಡಿಸಿಲ್ಲ. ಹೀಗಾದರೆ ವಾಹನ ಎಲ್ಲಿ ನಿಲ್ಲಿಸಬೇಕೆಂದು ಸಾರ್ವಜನಿಕರಿಗೆ ಗೊತ್ತಾಗುವುದು ಹೇಗೆ?•ತಾತಾಗೌಡ ಪಾಟೀಲ,
ಕಾರು ಮಾಲೀಕ