Advertisement

ದರ್ಶನಕ್ಕೆ ಬಂದವರು ಮಸಣ ಸೇರಿದರು

09:43 AM Aug 28, 2019 | Naveen |

ಕಲಬುರಗಿ: ದೇವರ ದರ್ಶನ ಮತ್ತು ಪ್ರವಾಸಕ್ಕೆಂದು ಬಂದಿದ್ದ ಮಹಾರಾಷ್ಟ್ರ ಮೂಲದ ಐವರು ನಗರ ಹೊರವಲಯದ ಆಳಂದ ರಸ್ತೆಯ ಸಾವಳಗಿ ಕ್ರಾಸ್‌ ಸಮೀಪ ಸೋಮವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Advertisement

ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ದಕ್ಷಿಣ ಮತಕ್ಷೇತ್ರದ ಚಿಂಚಪೂರ ಗ್ರಾಮದ ನಿವಾಸಿಗಳಾದ ಇವರು, ತಮ್ಮ ಕುಟುಂಬ ವರ್ಗದವರೊಂದಿಗೆ ಮೂರು ವಾಹನ ಮಾಡಿಕೊಂಡು ದೇವರ ದರ್ಶನ ಹಾಗೂ ಪ್ರವಾಸಕ್ಕೆಂದು ಆಂಧ್ರಪ್ರದೇಶ, ತೆಲಂಗಾಣಕ್ಕೆ ಹೋಗಿದ್ದರು. ಗ್ರಾಮದಿಂದ ಕಳೆದ ಬುಧವಾರ ಹೊರಟಿದ್ದ ಇವರು ತಿರುಪತಿ ತಿಮ್ಮಪ್ಪ, ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ಮಾಡಿ, ಇತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು.

ಸೋಮವಾರ ಬೆಳಗ್ಗೆ ಶ್ರೀಶೈಲದಿಂದ ಹೊರಟ ಇವರು ಕಲಬುರಗಿ ಮಾರ್ಗವಾಗಿ ರಾತ್ರಿ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ಇದಕ್ಕೂ ಮುನ್ನ ಕಲಬುರಗಿ ನಗರದಲ್ಲೂ ಕೆಲ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದರು. ಸುಮಾರು ಇನ್ನೆರಡು ಗಂಟೆಯಲ್ಲಿ ಎಲ್ಲರೂ ತಮ್ಮ-ತಮ್ಮ ಮನೆಗಳಿಗೆ ತಲುಪುತ್ತಿದ್ದರು. ಆದರೆ, ಇವರಿಗಾಗಿ ದಾರಿ ಮಧ್ಯೆ ಜವರಾಯ ಕಾದುಕುಳಿತ್ತಿದ್ದ.

ಆಳಂದ ರಸ್ತೆಯ ಸಾವಳಗಿ ಕ್ರಾಸ್‌ ಬಳಿ ಬರುತ್ತಿದ್ದಂತೆ ಒಂದು ಕಾರು ಭೀಕರ ಅಪಘಾತಕ್ಕೀಡಾಯಿತು. ರಸ್ತೆ ಪಕ್ಕ ಕೆಟ್ಟು ನಿಂತಿದ್ದ ಲಾರಿಗೆ ಕಾರಿನ ಚಾಲಕ ಗುದ್ದಿದ್ದು, ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಸ್ಕಾರ್ಪಿಯೋ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

Advertisement

ಒಂದೇ ಕುಟುಂಬದ ಮೂವರ ಸಾವು: ಭೀಕರ ರಸ್ತೆ ಅಪಘಾತದಲ್ಲಿ ಮೃತರ ಪೈಕಿ ಮೂವರು ಒಂದೇ ಕುಟುಂಬಕ್ಕೆ ಸೇರಿದ್ದಾರೆ. ಸಂಜಯಕುಮಾರ ಚಡಚಣ (29), ರಾಣಿ ಎಸ್‌. ಚಡಚಣ (26) ಹಾಗೂ ಇವರ ಮಗ ಶ್ರೇಯಸ್‌ ಎಸ್‌. ಚಡಚಣ (3) ಮೃತಪಟ್ಟವರು. ಪವಾಡ ಎಂಬಂತೆ ಕಾರು ಚಾಲಕ ಭೀಮಾಶಂಕರ ಅಳಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾರಿನಲ್ಲಿದ್ದ ಈತನ ಪತ್ನಿ ಭಾಗ್ಯಶ್ರೀ ಭೀಮಾಶಂಕರ ಅಳಗಿ ಮತ್ತು ಮತ್ತೂಬ್ಬ ಬಾಲಕ ಧೀರಜ್‌ ಸಂಗಣ್ಣ (2) ಅಪಘಾತಕ್ಕೆ ಬಲಿಯಾಗಿದ್ದಾರೆ.

ಸಂಜಯ-ರಾಣಿ ದಂಪತಿಯ ಇನ್ನೊಬ್ಬ ಮಗ ಶಿವರಾಜ ಎಸ್‌.ಚಡಚಣ, ಬಾಲಕ ಧೀರಜ್‌ನ ತಾಯಿ ಶಿವಮ್ಮ ಗಾಯಗೊಂಡಿದ್ದಾರೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಮಂಗಳವಾರ ಬೆಳಗ್ಗೆ ಚಿಂಚಪೂರ ಗ್ರಾಮದಿಂದ ಸಂಬಂಧಿಕರು ನಗರಕ್ಕೆ ದೌಡಾಯಿಸಿದ್ದಾರೆ.

ಮೃತ ದೇಹಗಳು ಮತ್ತು ಗಾಯಾಳುಗಳ ಸ್ಥಿತಿ ಕಂಡು ಗ್ರಾಮದಿಂದ ಬಂದಿದ್ದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಐವರ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ನಂತರದಲ್ಲಿ ಮೃತದೇಹಗಳನ್ನು ಗ್ರಾಮಕ್ಕೆ ಸಂಬಂಧಿಕರು ತೆಗೆದುಕೊಂಡು ಹೋಗಿದ್ದಾರೆ.

ಸಂಚಾರಿ ಇನ್ಸ್‌ಪೆಕ್ಟರ್‌ ಶಾಂತಿನಾಥ, ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಬಗ್ಗೆ ಸಂಚಾರಿ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಐವರ ಬಲಿಗೆ ಕಾರಣವಾಗಿರುವ ಈ ರಸ್ತೆ ಅಪಘಾತಕ್ಕೆ ಲಾರಿ ಚಾಲಕ ಮತ್ತು ಕಾರಿನ ಚಾಲಕ ಇಬ್ಬರದ್ದೂ ತಪ್ಪಿದೆ. ಲಾರಿ ದುರಸ್ತಿಗಾಗಿ ರಸ್ತೆ ಮಧ್ಯೆ ನಿಲ್ಲಿಸಲಾಗಿತ್ತು. ರಾತ್ರಿಯಾಗಿದ್ದರಿಂದ ಲಾರಿ ಚಾಲಕ ಮುನ್ನೆಚ್ಚರಿಕೆ ಕ್ರಮವಾಗಿ ಲಾರಿಯ ಯಾವುದೇ ಇಂಡಿಕೇಟರ್‌ ಹಾಕಿರಲಿಲ್ಲ. ಅದೇ ರೀತಿಯಾಗಿ ಕಾರಿನ ಚಾಲಕನ ನಿರ್ಲಕ್ಷ್ಯದಿಂದ ಅತಿ ವೇಗವಾಗಿ ಚಾಲನೆ ಮಾಡಿದ್ದ ಎನ್ನಲಾಗುತ್ತಿದೆ. ಆದ್ದರಿಂದ ಲಾರಿ ಚಾಲಕ ಮತ್ತು ಕಾರಿನ ಚಾಲಕ ಇಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next