Advertisement

ಪ್ಲಾಸ್ಟಿಕ್‌ ಬಳಕೆ ಕಡಿವಾಣಕ್ಕೆ ದಂಡ ಪ್ರಯೋಗ

12:39 PM Jul 26, 2019 | Naveen |

ಕಲಬುರಗಿ: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ನಿರ್ಮೂಲನೆಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಒಂದು ತಿಂಗಳು ಗಡುವು ನೀಡಿದ್ದರಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಆಗಸ್ಟ್‌ ಒಂದರಿಂದ ಪ್ಲಾಸ್ಟಿಕ್‌ ಬಳಕೆ ಕಂಡುಬಂದಿಲ್ಲ. ಮುಂದೆ ಕಂಡುಬಂದರೆ ದಂಡ ಪ್ರಯೋಗ ಮಾಡಲು ತೀರ್ಮಾನಿಸಲಾಗಿದೆ.

Advertisement

ವ್ಯಾಪಕ ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಜನರ ಆರೋಗ್ಯಕ್ಕೂ ಪ್ಲಾಸ್ಟಿಕ್‌ ಮಾರಕವಾಗಿದ್ದು, ಪ್ಲಾಸ್ಟಿಕ್‌ ತ್ಯಾಜ್ಯದಿಂದ ರೋಗಗಳು ಉಲ್ಬಣಗೊಳ್ಳುತ್ತಿವೆ. ಆದ್ದರಿಂದ ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಹಿಂದೆಯೇ ಪ್ಲಾಸ್ಟಿಕ್‌ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ ಎಂದು ಅನೇಕ ಬಾರಿ ಸೂಚಿಸಲಾಗಿದ್ದರೂ ಜಿಲ್ಲೆಯಲ್ಲಿ ಕಾರ್ಯಾನುಷ್ಠಾನ ಸರಿಯಾಗಿ ಆಗಿಲ್ಲ.

ಜುಲೈ 12ರಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠದ ರಾಜ್ಯ ಸಮಿತಿ ಅಧ್ಯಕ್ಷ ನ್ಯಾ| ಸುಭಾಷ ಆರ್‌. ಆಡಿ ಜಿಲ್ಲಾ ಮಟ್ಟದ ಪರಿಶೀಲನಾ ಸಭೆ ನಡೆಸಿ ಕಲಬುರಗಿ ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ಪ್ಲಾಸ್ಟಿಕ್‌ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಬೇಕೆಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರಿಂದ ಈಗಾಗಲೇ ಮಹಾನಗರ, ತಾಲೂಕು ಮಟ್ಟದಲ್ಲಿ ಪ್ಲಾಸ್ಟಿಕ್‌ ವಿರುದ್ಧ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

14 ಟನ್‌ ಪ್ಲಾಸ್ಟಿಕ್‌: ಜಿಲ್ಲಾದ್ಯಂತ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌, ಕುರಕಲು ದಿನಸಿ ಕವರ್‌, ಕುಡಿಯುವ ನೀರಿನ ಗ್ಲಾಸ್‌, ಚಹಾ ಗ್ಲಾಸ್‌, ತಟ್ಟೆ, ಊಟದ ಟೇಬಲ್ ಮೇಲೆ ಹಾಕುವ ಪ್ಲಾಸ್ಟಿಕ್‌ ಸೇರಿದಂತೆ ಪ್ರತಿನಿತ್ಯ 14 ಟನ್‌ ಪ್ಲಾಸ್ಟಿಕ್‌ ಬಳಕೆಯಾಗುತ್ತಿದೆ. ಇದರ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯಲಾಗುತ್ತಿದ್ದು, ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ.

ಮನುಷ್ಯನಿಗೆ ಗೊತ್ತಾಗದಂತೆ ಪ್ಲಾಸ್ಟಿಕ್‌ ಹಲವು ದುಷ್ಟರಿಣಾಮಗಳನ್ನು ಬೀರುತ್ತಿದೆ. ಬೇಗ ಕರಗದ ಪ್ಲಾಸ್ಟಿಕ್‌ನಿಂದ ಬಿಸಿಲಿಗೆ ಹಾನಿಕಾರಕ ರಾಸಾಯನಿಕಗಳ ಉತ್ಪತ್ತಿಯಾಗಿ ಪರಿಸರ ಕಲುಷಿತಗೊಳ್ಳುತ್ತದೆ. ಪ್ಲಾಸ್ಟಿಕ್‌ ಸುಟ್ಟರೂ ಡಯಾಕ್ಸಿನ್‌ನಂತ ವಿಷ ಪದಾರ್ಥ ಉತ್ಪಾದನೆಯಿಂದ ಮನುಷ್ಯನ ಉಸಿರಾಟಕ್ಕೂ ತೊಂದರೆಯಾಗುತ್ತ್ತಿದೆ. ಇದರ ಪರಿಣಾಮ ಕೇಂದ್ರ ಸರ್ಕಾರ ಪಟ್ಟಿ ಮಾಡಿರುವ ಕೆಟ್ಟ ವಾತಾವರಣದ ಪಟ್ಟಿಯಲ್ಲಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಜತೆಗೆ ಕಲಬುರಗಿ ಜಿಲ್ಲೆಯೂ ಸೇರಿದೆ.

Advertisement

ನಗರದಲ್ಲೇ ಅಧಿಕ ಪ್ಲಾಸ್ಟಿಕ್‌ ತ್ಯಾಜ್ಯ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನವೂ ಸುಮಾರು 220 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಇದರಲ್ಲಿ ಒಂದು ಟನ್‌ಗೂ ಅಧಿಕ ಪ್ಲಾಸ್ಟಿಕ್‌ ತ್ಯಾಜ್ಯವೇ ತುಂಬಿರುತ್ತದೆ. ಅದನ್ನು ಸಂಗ್ರಹಿಸಲು ಪೌರ ಕಾರ್ಮಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಹಸಿ ಮತ್ತು ಒಣ ಕಸ ವಿಂಗಡಿಸುವಂತೆ ಮನವಿ ಮಾಡಿದ್ದರೂ ಕ್ಯಾರಿಬ್ಯಾರಿಗಳಲ್ಲಿ ಎರಡೂ ಒಟ್ಟಿಗೆ ಸೇರಿಸಿ ಹಾಕುವುದರಿಂದ ದುರ್ವಾಸನೆ ಹರಡುತ್ತಿದೆ. ಹೀಗಾಗಿ ಮಹಾನಗರ ಪಾಲಿಕೆ ಅನೇಕ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಪ್ರತಿ ವಾರ್ಡ್‌ನಲ್ಲಿ ತ್ಯಾಜ್ಯ ಸಂಸ್ಕರಣೆ ಹಾಗೂ ನಿರ್ವಹಣೆ ವ್ಯವಸ್ಥಿತಗೊಳಿಸಲು ಪಾಲಿಕೆ ಅಧಿಕಾರಿಗಳು ವಿಶೇಷ ಗಮನ ಕೊಡುತ್ತಿದ್ದಾರೆ. ಮನೆಗಳಲ್ಲೇ ಒಣ ಕಸ ಮತ್ತು ಹಸಿ ಬೇರ್ಪಡಿಸುವಿಕೆಯನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಖುದ್ದು ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್‌ ಜನರ ಬಳಿಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದಾರೆ.

29 ಸಾವಿರ ರೂ. ದಂಡ ವಸೂಲಿ: ಮಹಾನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ನಿಷೇಧಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ವಾರದಲ್ಲಿ ದೊಡ್ಡ ಶಾಪಿಂಗ್‌ ಮಾಲ್, ವಾಲ್ ಮಾರ್ಟ್‌ಗಳ ಮೇಲೂ ದಾಳಿ ಮಾಡಲಾಗಿದೆ. ಇದುವರೆಗೆ 10 ಟನ್‌ ಪ್ಲಾಸ್ಟಿಕ್‌ ಜಪ್ತಿ ಮಾಡಲಾಗಿದ್ದು, 29 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪಾಲಿಕೆ ಪರಿಸರ ಅಭಿಯಂತರರಾದ ಸುಷ್ಮಾ ಸಾಗರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next