Advertisement

ರಾಯಣ್ಣ ದೇಶದ ಮೊದಲ ಬಲಿದಾನ

12:55 PM Aug 19, 2019 | Naveen |

ಕಲಬುರಗಿ: ಬ್ರಿಟಿಷರ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಮೊದಲು ಬಲಿದಾನವಾಗಿದ್ದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಅಫಜಲಪುರ ಶಾಸಕ ಎಂ.ವೈ. ಪಾಟೀಲ ಹೇಳಿದರು.

Advertisement

ನಗರದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ರವಿವಾರ ರಾಯಣ್ಣೋತ್ಸವ ಸಮಿತಿ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 221ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಚಾರಿತ್ರಿಕ ಪುರುಷ ಎಂದು ಬಣ್ಣಿಸಿದರು.

ರಾಯಣ್ಣ ದೇಶಭಕ್ತಿ, ನಿಷ್ಠೆ, ನಂಬಿಕೆಯುಳ್ಳ ಮಹಾನ್‌ ವ್ಯಕ್ತಿಯಾಗಿದ್ದ. ರಾಯಣ್ಣ ಇಲ್ಲದೇ ಕಿತ್ತೂರಿನ ಇತಿಹಾಸ ಬರೆಯಲು ಆಗುವುದಿಲ್ಲ. ದೇಶದಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ್ದು ಕಿತ್ತೂರು ರಾಣಿ ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು. ರಾಯಣ್ಣನ ಬಲಿದಾನ ನಂತರದಲ್ಲಿ ಇತರ ಮಹಾಪುರುಷರು ಬಲಿದಾನವಾದರು ಎಂದರು.

ಶ್ರೀಮಂತಿಕೆ ಹಣದಿಂದ ಅಳೆಯಲು ಸಾಧ್ಯವಿಲ್ಲ. ಮನಸ್ಸಿನಿಂದ ಅಳೆಯಬೇಕಾಗುತ್ತದೆ. ಇಂದು ಗೌಡರು, ಉಳ್ಳವರು ಭೂಮಿ ಮಾರಿಕೊಂಡಿದ್ದಾರೆ. ಹಾಲುಮತ ಸಮಾಜದವರು ತಮ್ಮ ಕಾಯಕ ಮುಂದುವರಿಸಿಕೊಂಡು ಸಂಪತ್ತು ಉಳಿಸಿಕೊಂಡಿದ್ದಾರೆ. ದೇಶದ ಆರ್ಥಿಕತೆಯಲ್ಲಿ ಹಾಲುಮತ ಸಮುದಾಯದ ಶ್ರಮದ ಪಾಲಿದೆ ಎಂದರು.

ವಾಗ್ಮಿ ನಿಕೇತ್‌ ರಾಜ್‌ ಮೌರ್ಯ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮಾ ಗಾಂಧಿ, ಭಗತ್‌ ಸಿಂಗ್‌, ಸುಭಾಷಚಂದ್ರ ಬೋಸ್‌ ಮೊದಲಾದವರ ಹೆಸರು ಕೇಳಿದಾಕ್ಷಣ ಎಲ್ಲರೂ ಗೊತ್ತು ಎನ್ನುತ್ತೇವೆ. ಆದರೆ, ಬ್ರಿಟಿಷರಿಂದ ಎರಡು ಬಾರಿ ಗಲ್ಲಿಗೆ ಗುರಿಯಾದ ಸಂಗೊಳ್ಳಿ ರಾಯಣ್ಣ ಹೆಸರು ನಮ್ಮ ಪಕ್ಕದ ಮಹಾರಾಷ್ಟ್ರ, ತೆಲಂಗಾಣದ ಜನತೆಗೂ ಗೊತ್ತಿಲ್ಲ. ರಾಯಣ್ಣನನ್ನು ಜಾತಿಗೆ ಸೀಮಿತಗೊಳಿಸಬಾರದು. ರಾಯಣ್ಣ ದೊಡ್ಡವರಾಗಿದ್ದು ಜಾತಿಯಿಂದ ಅಲ್ಲ, ಕ್ರಾಂತಿಯಿಂದ ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ವಾಗ್ಮಿ ಶಿಲ್ಪಾ ಕದರಗೊಂಡ, ಪೊಲೀಸ್‌ ಅಧಿಕಾರಿ ಎಸ್‌.ಎಸ್‌. ಹುಲ್ಲೂರ ಮಾತನಾಡಿದರು.

ವೀರಗೋಟ ಕನಕ ಗುರುಪೀಠದ ಸಿದ್ಧರಾಮಾನಂದ ಪುರಿ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ದೀಲಿಪ ಆರ್‌.ಪಾಟೀಲ, ರಾಯಣ್ಣೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಕುರನಳ್ಳಿ, ಹಾಲುಮತದ ಸಮಾಜದ ಮುಖಂಡರಾದ ಡಾ| ಬಾಬು ಪೂಜಾರಿ, ಶಿವಶರಣ ಹದಗಲ್, ರವಿಗೊಂಡ ಕಟ್ಟಿಮನಿ, ನಿಂಗಣ್ಣ ಪೂಜಾರಿ, ಪರಮೇಶ್ವ ಆಲಗೂಡ, ರಮೇಶ ಕಂಟೀಕರ್‌, ಚಂದ್ರಶೇಖರ ಸಿರನೂರ, ಸಮಾಧಾನ ಪೂಜಾರಿ, ತಿಪ್ಪಣ್ಣ ಬಳಬಟ್ಟಿ, ಜಗದೇವಪ್ಪ ಮುಗಟಾ, ಬೀರಣ್ಣ ಕಲ್ಲೂರು, ಭೀಮಣ್ಣ ದೊಡ್ಡಮನಿ, ನಿಂಗಣ್ಣ ಪೂಜಾರಿ, ದೇವೇಂದ್ರ ನಾಯಿಕೋಡಿ, ರಾಘವೇಂದ್ರ ತೆಗನೂರ, ಮಹಾಂತೇಶ ಕವಲಗಿ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಬಹಿರಂಗ ಸಭೆಗೂ ಮುನ್ನ ಗಂಜ್‌ ಪ್ರದೇಶದ ನಗರೇಶ್ವರ ಶಾಲೆಯಿಂದ ಕಲ್ಯಾಣ ಮಂಟಪದ ಆವರಣದ ವರೆಗೆ ಸಂಗೊಳ್ಳಿ ರಾಯಣ್ಣ ಮೂರ್ತಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ದಾರಿಯುದ್ದಕ್ಕೂ ಡೊಳ್ಳು ಕುಣಿತ, ವಿವಿಧ ವಾದ್ಯಗಳ ಸದ್ದಿಗೆ ರಾಯಣ್ಣನ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ರಾಯಣ್ಣ ಭಾವಚಿತ್ರ ಇರುವ ಹಳದಿ ಬಾವುಟ ಹಿಡಿದು ಸಾಗಿದರು. ರಾಯಣ್ಣನ ವೇಷಧಾರಿ ವ್ಯಕ್ತಿಯೊಬ್ಬ ಕುದುರೆ ಮೇಲೆ ಕುಳಿತು ಮೆರವಣಿಗೆಯಲ್ಲಿ ಸಾಗಿದ್ದು ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next